ಬೆಂಗಳೂರು(ಫೆ.10): ಬಿಬಿಎಂಪಿಯು ತನ್ನೆಲ್ಲಾ ಉಪ ಕಂದಾಯ ಅಧಿಕಾರಿಗಳಿಗೆ ಈವರೆಗೆ ನೀಡುತ್ತಿದ್ದ ಮಾಸಿಕ ವಾಹನ ಭತ್ಯೆ ರದ್ದುಪಡಿಸಿ ಅದಕ್ಕೆ ತಗಲುತ್ತಿದ್ದ ಮೊತ್ತಕ್ಕಿಂತ ಹೆಚ್ಚು ವೆಚ್ಚ ಮಾಡಿ ಖಾಸಗಿ ಟ್ರಾವಲ್‌ ಸಂಸ್ಥೆ ಮೂಲಕ ವಾಹನ ಸೌಲಭ್ಯ ಒದಗಿಸುವ ನೆಪದಲ್ಲಿ ದುಂದು ವೆಚ್ಚಕ್ಕೆ ಬಿಬಿಎಂಪಿ ಹೊರಟಿದೆ.

ವಿವಿಧ ಕಾಮಗಾರಿಗೆ ಅನುದಾನ ಕೊರತೆಯ ನೆಪ ಹೇಳಿ ಸರ್ಕಾರದ ಅನುದಾನಕ್ಕೆ ಕೈಒಡ್ಡುವ ಬಿಬಿಎಂಪಿ ಈವರೆಗೆ ತನ್ನ 61 ಉಪ ಕಂದಾಯ ಅಧಿಕಾರಿಗೆ ಪ್ರತೀ ತಿಂಗಳು ತಲಾ 15 ಸಾವಿರವನ್ನು ವಾಹನ ಭತ್ಯೆಯಾಗಿ ನೀಡುತ್ತಿತ್ತು. ಇದರಿಂದ ಮಾಸಿಕ ಒಟ್ಟು 9.15 ಲಕ್ಷ ವೆಚ್ಚವಾಗುತ್ತಿತ್ತು. ಇದನ್ನು ಜ.31ರಿಂದ ರದ್ದುಪಡಿಸಿ ಖಾಸಗಿ ಟ್ರಾವಲ್‌ ಸಂಸ್ಥೆಯೊಂದರ ಮೂಲಕ 61 ವಾಹನಗಳನ್ನು ಗುತ್ತಿಗೆ ಪಡೆದು ಪ್ರತಿ ವಾಹನಕ್ಕೆ ಮಾಸಿಕ 24,522 ಬಾಡಿಗೆ ಪಾವತಿಸಲು ಮುಂದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟ್ರಾವಲ್‌ ಸಂಸ್ಥೆಗೆ ಪ್ರತೀ ತಿಂಗಳು ಒಟ್ಟು 15.56 ಲಕ್ಷ ಪಾವತಿಸಬೇಕಾಗುತ್ತದೆ. ಇದರಿಂದ ಪಾಲಿಕೆಗೆ ಮಾಸಿಕ 6.41 ಲಕ್ಷದಂತೆ ವಾರ್ಷಿಕವಾಗಿ 77.02 ಲಕ್ಷ ಹೆಚ್ಚುವರಿ ವೆಚ್ಚ ಮಾಡಬೇಕಾಗಲಿದೆ.

61 ಟಾಟಾ ಇಂಡಿಕಾ (ನಾನ್‌ ಎಸಿ) ಕಾರುಗಳನ್ನು ಇಂದಿರಾ ನಗರದ ಮೆ.ಪಂಚಮುಖಿ ಟೂ​ರ್‍ಸ್ ಮತ್ತು ಟ್ರಾವಲ್ಸ್‌ ಸಂಸ್ಥೆಯಿಂದ ಫೆ.1ರಿಂದ ಬಿಬಿಎಂಪಿ ಬಾಡಿಗೆ ಪಡೆದಿದೆ. ಪ್ರತಿ ಕಾರು ತಿಂಗಳಿಗೆ ಗರಿಷ್ಠ 2,500 ಕಿ.ಮೀ. ಮಿತಿಯಲ್ಲಿ ಕ್ರಮಿಸುವುದು ಅಥವಾ 315 ಗಂಟೆ ಕಾರ್ಯ ನಿರ್ವಹಿಸಬೇಕು. ಪ್ರತಿ ಕಾರಿಗೆ ಪಾಲಿಕೆ ಮಾಸಿಕವಾಗಿ ಎಲ್ಲ ತೆರಿಗೆ ಸೇರಿಸಿ ಒಟ್ಟು .24,522 ಪಾವತಿ ಮಾಡಲಿದೆ. 61 ಕಾರುಗಳನ್ನು ಒಂದು ವರ್ಷ ಅವಧಿಗೆ ಬಾಡಿಗೆ ನೀಡುವಂತೆ ಟ್ರಾವಲ್ಸ್‌ ಸಂಸ್ಥೆಯೊಂದಿಗೆ ಪಾಲಿಕೆ ಒಪ್ಪಂದ ಮಾಡಿಕೊಂಡಿದೆ.

ಕಾರಿಗೆ ನಿಗದಿ ಪಡಿಸಿರುವ ದರ ಸಾಮಾನ್ಯ ದರಕ್ಕಿಂತ ಹೆಚ್ಚಾಗಿದ್ದು, ನಗರದಲ್ಲಿ ಟಾಟಾ ಇಂಡಿಕಾ ನಾನ್‌ ಎಸಿ ಕಾರಿನ ಬಾಡಿಗೆ ದರ 1 ಕಿ.ಮೀ.ಗೆ 8.50 ದಿಂದ 9 ರವರೆಗೆ ಇದೆ. ಆದರೆ, ಬಿಬಿಎಂಪಿ ಗುತ್ತಿಗೆ ಪಡೆದಿರುವ ಟ್ರಾವಲ್‌ ಸಂಸ್ಥೆಗೆ ಪ್ರತಿ ಕಿ.ಮೀ.ಗೆ 9.80 ದರ ನಿಗದಿ ಪಡಿಸಿದೆ.

ಈ ಕುರಿತು ಮಾತನಾಡಿದ ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ (ಸಾರಿಗೆ) ಮಹದೇವ, ಉಪ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ವಸೂಲಾತಿಗೆ ವಾಹನ ಸೌಲಭ್ಯ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿ ವಾಹನ ಸೌಲಭ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.