ಬೆಂಗಳೂರು [ಜೂ.20] : ಈ ಹಿಂದಿನ ವರ್ಷದಲ್ಲಿ ಉದ್ಯಾನ ನಗರಿ ಬೆಂಗಳೂರಿಗೆ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಕಳಪೆ  ರ‍್ಯಾಂಕ್ ಬಂದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.

ಕಳೆದ 2016 ರಲ್ಲಿ  3ನೇ ರ‍್ಯಾಂಕ್, 2017ರಲ್ಲಿ 210, 2018ರಲ್ಲಿ 216, ಕಳೆದ 2019ರಲ್ಲಿ 19  ರ‍್ಯಾಂಕ್ ಗಳಿಸುವ ಮೂಲಕ ಕಳಪೆ ಸಾಧನೆ ಮಾಡಿದೆ. ಕಸ ವಿಂಗಡನೆ, ವಿಲೇವಾರಿ, ಸಂಸ್ಕರಣೆ, ನಿರ್ವಹಣೆ ಸೇರಿದಂತೆ ಎಲ್ಲ ವಿಭಾಗದಲ್ಲಿ ಬೆಂಗಳೂರು ಉತ್ತಮ ಅಂಕ ಪಡೆದುಕೊಂಡರೂ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ವಿಭಾಗದಲ್ಲಿ ಕಳಪೆ ರ‍್ಯಾಂಕ್ ಪಡೆದಿತ್ತು. ಹಾಗಾಗಿ, ಸಾರ್ವಜನಿಕರಿಗೆ ಬಿಬಿಎಂಪಿ ಕೈಗೊಳ್ಳುತ್ತಿರುವ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಚಲನಚಿತ್ರ ರಂಗದ ಕಲಾವಿದರ ಸಹಕಾರ ಪಡೆಯಲು ಮುಂದಾಗಿದೆ.

ಕಿರುಚಿತ್ರ ನಿರ್ಮಾಣ: ಸ್ವಚ್ಛತೆಯ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕ ನಗರದ ನಾಗರಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕಿರುಚಿತ್ರ ನಿರ್ಮಾಣಕ್ಕೆ ಬಿಬಿಎಂಪಿ ಕೈ ಹಾಕಿದೆ. ನಿರ್ದೇಶಕ ಯೋಗರಾಜ್ ಭಟ್ ಅವರು ಕಿರುಚಿತ್ರಕ್ಕೆ ಸಾಹಿತ್ಯ ರಚನೆ ಮಾಡಲಿದ್ದಾರೆ. ಶೀಘ್ರದಲ್ಲಿ ಕಿರುಚಿತ್ರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಕಿರುಚಿತ್ರದಲ್ಲಿ ಕಸ ವಿಂಗಡನೆ, ವಿಲೇವಾರಿ, ನಗರದ ರಸ್ತೆ ಸ್ವಚ್ಛತೆ ಕಾಪಾಡುವುದು, ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರ ಪಾತ್ರ ಮತ್ತು ಹೊಣೆಗಾರಿಕೆಯ ವಿಚಾರಗಳು ಒಳಗೊಂಡಿರಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಮುಂಬರುವ 2020 ರ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಬೆಂಗಳೂರು ನಗರಕ್ಕೆ ಉತ್ತಮ  ರ‍್ಯಾಂಕ್ ಪಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ಅನೇಕ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಯುವ ಜನತೆ ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಜಾಗೃತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಗಂಗಾಂಬಿಕೆ ತಿಳಿಸಿದ್ದಾರೆ.