ಬೆಳಗಾವಿ (ಡಿ.20):  ‘ಎರಡು ದಿನಗಳಲ್ಲಿ ಒಳ್ಳೆಯ ಸಿಹಿ ಸುದ್ದಿ ಕೊಡುತ್ತೇನೆ. ಅನುಷ್ಠಾನಕ್ಕೆ ತರುತ್ತೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದ್ರೆ ಮುಂದೆ ಏನಾಯಿತೋ ಗೊತ್ತಿಲ್ಲ’

-ಇದು ಸಂಪುಟದಲ್ಲಿ ಚರ್ಚೆಗೆ ಬಂದಿದ್ದ ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಷಯ ಜಾರಿಗೆ ಬಾರದೇ ಇರುವುದಕ್ಕೆ ಕಾರಣ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೀಡಿರುವ ಪ್ರತಿಕ್ರಿಯೆ.

ಮತ್ತೋರ್ವ ಬಿಜೆಪಿ ನಾಯಕ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ

ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ ವೇಳೆಯಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಸ್ವತಃ ಕರೆ ಮಾಡಿ ಈ ಸಮುದಾಯಕ್ಕೆ ಬೇಕಾದ ರಾಜ್ಯ ಸರ್ಕಾರದ 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಭರವಸೆ ನೀಡಿದರು. ಆಗ ನಾವು ಒಂದು ತಿಂಗಳ ಗಡುವು ನೀಡಿದ್ದೇವು. ಈ ಕುರಿತು ಸರ್ಕಾರ ಸ್ಪಂದಿಸಲು ಸಿದ್ಧವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾತುಕತೆಯ ಮೂಲಕ ಮುಂದೂಡಿದ್ದು ನಮ್ಮ ಸಮುದಾಯದ ಅಸಮಾಧಾನಕ್ಕೆ ಕಾರಣವಾಯಿತು ಎಂದರು.

ಡಿಕೆಶಿ, ಹೆಬ್ಬಾಳ್ಕರ್‌ ಅಧ್ಯಯನ ನಡೆಸಲಿ:

ಇದೇವೇಳೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ನಾವು ಪಾಲ್ಗೊಳ್ಳಬಾರದಿತ್ತು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಅಧ್ಯಯನದ ಕೊರತೆ ಇರಬಹುದು. ಹಾಗಾಗಿ ಅವರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ, ಈ ಧರ್ಮದ ನಿಜವಾದ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಂಡು ಬಂದು ಆ ಮೇಲೆ ಚರ್ಚೆ ಮಾಡಲಿ ಎಂದು ಸಲಹೆ ನೀಡಿದರು