ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸಿ ಮಾನವೀಯತೆ ಮೆರೆದ ಹೊರಟ್ಟಿ
* ಚಿತ್ರದುರ್ಗದ ಸಿರಿಗೆರೆ ಬಳಿ ಅಪಘಾತ
* ಗಾಯಾಳುಗಳಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆಗೆ ನೆರವಾದ ವಿಧಾನ ಪರಿಷತ್ ಸಭಾಪತಿ
* ಒರ್ವ ಬಾಲಕ ಸೇರಿದಂತೆ ದಂಪತಿಗೆ ನೆರವಾದ ಬಸವರಾಜ ಹೊರಟ್ಟಿ
ಚಿತ್ರದುರ್ಗ, (ಜೂನ್.26): ಕಾರು ಹಾಗೂ ದ್ವಿಚಕ್ರ ವಾಹನಗಳ ಮಧ್ಯೆ ಚಿತ್ರದುರ್ಗದ ಸಿರಿಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಒರ್ವ ಬಾಲಕ ಸೇರಿದಂತೆ ದಂಪತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಚರಿಸಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಚೇರಿ ಕಾರ್ಯ ಕಲಾಪ ಮುಗಿಸಿ ಹುಬ್ಬಳ್ಳಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿನಿಂದ ತೆರಳುತ್ತಿದ್ದ ಸಭಾಪತಿ ಬಸವರಾಜ ಹೊರಟ್ಟಿಯವರು ಮಾರ್ಗಮಧ್ಯದಲ್ಲಿ ಸಿರೆಗೆರೆ ಬಳಿ ತಮ್ಮ ಕಣ್ಣೆದುರಿಗೆ ಸಂಭವಿಸಿದ ಅಪಘಾತ ಗಮನಿಸಿ ಕೂಡಲೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಸಹಕರಿಸಿದರು.
ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲನಿಗೆ ಡಿಕೆ ಸುರೇಶ್ ನೆರವು
ಅಲ್ಲದೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಬೇಗನೆ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದರು ಹಾಗೂ ಆಂಬ್ಯುಲೆನ್ಸ್‌ಗೆ ಕರೆಮಾಡಿ ಮೂವರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.
ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಅಪಘಾತ ಸ್ಥಳದಲ್ಲಿಯೇ ಇದ್ದು ಗಾಯಾಳುಗಳಿಗೆ ಧೈರ್ಯ ಹೇಳಿ ಅವರಿಗೆ ತುರ್ತು ಚಿಕಿತ್ಸೆ ದೊರಕಿಸುವಲ್ಲಿ ಸಹಾಯ ಮಾಡಿದರು.
ಸಭಾಪತಿ ಹೊರಟ್ಟಿಯವರು ಸಂವಿಧಾನಿಕ ದೊಡ್ಡ ಹುದ್ದೆಯಲ್ಲಿದ್ದರೂ ಜನಸಾಮಾನ್ಯರ ಕಷ್ಟಗಳಿಗೆ ಕೂಡಲೇ ಪ್ರತಿಸ್ಪಂದಿಸಿ ನೆರವಾಗುವ ಮಾನವೀಯ ಗುಣ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ.