ಹುನಗುಂದ(ಜ.16): ವೈದಿಕ ವ್ಯವಸ್ಥೆ ಅಕ್ಟೋಪಸ್ ಇದ್ದಂತೆ. ನಿಮ್ಮನ್ನು ಜೋತಿಷ್ಯ, ಪಂಚಾಂಗ ಹೇಳಿ ನಂಬಿಸಿ ಕಟ್ಟಿ ಹಾಕಿದೆ. ವಾಸ್ತು, ಪಂಚಾಂಗ, ಜೋತಿಷ್ಯವನ್ನು ಎಂತದ್ದೇ ಪರಿಸ್ಥಿತಿಯಲ್ಲಿ ನಂಬಲೇಬಾರದು ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಹೇಳಿದ್ದಾರೆ. 

ಕೂಡಲಸಂಗಮದಲ್ಲಿ ನಡೆದ 33ನೇ ಶರಣ ಮೇಳದ ನಾಲ್ಕನೇ ದಿನವಾದ ಮಂಗಳವಾರ ರಾತ್ರಿ ನಡೆದ ಸಾಮೂಹಿಕ ಇಷ್ಟಲಿಂಗಾರ್ಚನೆ ಹಾಗೂ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಯೋಗಿ ಶಿವನ ಕೊಡುಗೆ ಇದೆ. ಅಷ್ಟಾವರಣಗಳಲ್ಲಿ ಮೂರು ವಿಭೂತಿ, ರುದ್ರಾಕ್ಷಿ, ಮಂತ್ರ ಶಿವನಿಂದ ಬಂದಿವೆ. ಇನ್ನೂ ಐದು ಬಸವಣ್ಣನವರೇ ಕೊಟ್ಟಿದ್ದಾರೆ. ಕೆಲವು ಧರ್ಮಗಳ ಗುರುಗಳು ಶಿಷ್ಯರನ್ನು ಹುಡುಕಿಕೊಂಡು ಹೋಗುವ ಕಾಲವಿತ್ತು. ಆದರೆ, ಬಸವಣ್ಣನವರ ಕಾಲದಲ್ಲಿ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಬೇರೆ ಬೇರೆ ಕಡೆಯಿಂದ ಹರಿದು ಬಂದರು. ಮಾನವೀಯತೆ ವಿಚಾರವನ್ನು ತಿಳಿಸಲು ಬಸವಣ್ಣನವರು ಜಂಗಮರನ್ನು ತಯಾರು ಮಾಡಿದರು. ಮೊಟ್ಟ ಮೊದಲು ಧರ್ಮ ಪ್ರಚಾರದ ವ್ಯವಸ್ಥೆ ಜಾರಿಗೆ ತಂದವರು ಬುದ್ಧ ನಂತರ ಬಸವಣ್ಣನವರೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸತ್ಯದ ದಾರಿ ಕಠಿಣ ಹಾಗಂತ ಸುಳ್ಳಿನ ದಾರಿ ತುಳಿಯಬಾರದು. ಬಸವಣ್ಣನವರ ತತ್ವದಲ್ಲಿ ಅದ್ಭುತ್ ಶಕ್ತಿ ಇದೆ. ದೃಢವಾಗಿ ನಂಬಿ. ಸಮಾಜದಲ್ಲಿದ್ದ  ಸಂಪ್ರದಾಯಗಳನ್ನು ತೊಡೆದು ಹಾಕಿ ಮಹಿಳೆಯರಿಗೆ ಮಠಗಳಲ್ಲಿ ಆಶ್ರಯಕೊಟ್ಟು, ಮಠಾಧೀಶರನ್ನಾಗಿ ಮಾಡಿದ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಹಲವಾರುತೊಂದರೆ ಅನುಭವಿಸಿದರು. ದಾವಣಗೇರಿ ಮಠ ಕಳೆದುಕೊಳ್ಳಬೇಕಾಯಿತು. ಸ್ಥಾವರಕ್ಕಳಿ ಉಂಟು ಜಂಗಮಕ್ಕೆ ಅಳಿವಿಲ್ಲ ಎಂದು ನಂಬಿ ಪ್ರವಚನದ ಮೂಲಕ ಬಸವ ಧರ್ಮ ಪೀಠವನ್ನು ಕಟ್ಟಿ ನೂರಾರು ಸಾಧಕಿಯರಿಗೆ ಆಶ್ರಯಕೊಟ್ಟರು ಎಂದು ಹೇಳಿದರು. 

ಸಮಾರಂಭದಲ್ಲಿ ಮಹಾದೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಮಾತೆಜ್ಞಾನೇಶ್ವರಿ, ಮಾತೆದಾನೇಶ್ವರಿ, ಮಾತೆ ಸತ್ಯಾದೇವಿ ಮುಂತಾದವರು ಇದ್ದರು. 

ಬೃಹತ್ ಬಸವ ಪಥ ಸಂಚಲನ:

ಮಂಗಳವಾರ ಸಂಜೆ 6 ಕ್ಕೆ ಕೂಡಲಸಂಗಮದ ಬಸವೇಶ್ವರ ಐಕ್ಯ ಮಂಟಪ ಮುಂಭಾಗದಿಂದ ಬಸವ ಧರ್ಮ ಪೀಠದ ಮಹಾ ಮನೆಯವರೆಗೆ ಬೃಹತ್ ಪಥ ಸಂಚಲನ ಸಮಾರಂಭ ನಡೆಯಿತು. ವಿವಿಧ ರಾಜ್ಯದಿಂದ ಬಂದ ಸಾವಿರಾರು ಶರಣ ಶರಣೆಯರು ವಚನಗಳಿಗೆ ಜಯಕಾರ, ವಚನಗಳನ್ನು ಹಾಡಿ ನಲಿದರು. 7 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಪ್ರಾಥನೆ ಮಾಡಿದರು. 

ವೈಶಿಷ್ಟ್ಯಗಳ ಮಧ್ಯೆ ಮೆರವಣಿಗೆ:

ಶರಣ ಮೇಳದ ಕೊನೆಯ ದಿನವಾದ ಮಂಗಳವಾರ ರಾತ್ರಿ ಬಸವೇಶ್ವರ ಐಕ್ಯ ಮಂಟಪದಿಂದ ಬಸವ ಧರ್ಮ ಪೀಠದವರೆಗೆ ನಡೆದ ಪಥ ಸಂಚಲನದಲ್ಲಿ ಆನೆಯ ಮೇಲೆ ಬಸವಣ್ಣನವರ ಮೂರ್ತಿ ವಚನ ಸಾಹಿತ್ಯದಕಟ್ಟು ಹಾಗೂ ಮಂಜುನಾಥ ಬಂಡಿ ನಿರ್ಮಿಸಿದ ವಿಶ್ವದ ಅತಿ ಉದ್ದದಧ್ವರ್ಮಧ್ವಜದ ಮೆರವಣಿಗೆ ಎಲ್ಲರನ್ನು ಆಕರ್ಷಿಸಿತು. ರಾಜಸ್ಥಾನದ ವಿಶೇಷ ಸ್ಯಾಟಿನ್ ಬಟ್ಟೆಯಲ್ಲಿ ತಯಾರಿಸಿದ ಧ್ವಜವು 111 ಉದ್ದ ಮತ್ತು 11 ಅಡಿ ಅಗಲವಾಗಿತ್ತು. ಪ್ರತಿ 10 ಅಡಿಗೆ ಒಂದರಂತೆ ದೊಡ್ಡದಾದ ಶ್ರೀ ಗುರು ಬಸವ ಎನ್ನುವಧರ್ಮಲಾಂಛನವನ್ನು ಬಿಡಿಸಿದರು

ನಿರ್ಣಯಗಳು 

ಕೂಡಲಸಂಗಮದಲ್ಲಿ ನಡೆದ 33 ನೇ ಶರಣ ಮೇಳದ ಸಮಾರೋಪ ಸಮಾರಂಭದಲ್ಲಿ ಶರಣ ಮೇಳದ ನಿರ್ಣಯಗಳನ್ನು ಬಸವ ಧರ್ಮ ಪೀಠದ ಪೀಠಾಧ್ಯೆಕ್ಷ ಜಗದ್ಗುರು ಮಾತೆಗಂಗಾ ದೇವಿ ಪ್ರಕಟಿಸಿದರು. 

ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡಬೇಕು. ಧಾರವಾಡದಲ್ಲಿ ಡಾ. ಮಾತೆ ಮಹಾದೇವಿ ಅಧ್ಯಯ ನ ಪೀಠದವನ್ನು ಸರ್ಕಾರ ಸ್ಥಾಪಿಸಬೇಕು. ಹೊಸಪೇಟೆಯಿಂದ ಕೂಡಲಸಂಗಮದ ಮೂಲಕ ಆಲ ಮಟ್ಟಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ನಿರ್ಮಿಸಬೇಕು. 

ಮೇ ತಿಂಗಳಲ್ಲಿ ಹೈದ್ರಾಬಾದದಲ್ಲಿ ಲಿಂಗಾಯತ ರ್ಯಾಲಿ ಹಮ್ಮಿಕೊಂಡಿದೆ. ಕೂಡಲಸಂಗಮದಲ್ಲಿ ಡಾ. ಮಾತೆ ಮಹಾದೇವಿ ದಾಸೋಹ ಭವನ ನಿರ್ಮಿಸುವುದು, ಹುನಗುಂದ ಮತಕ್ಷೇತ್ರಕ್ಕೆ ಕೂಡಲಸಂಗಮ ಮತಕ್ಷೇತ್ರ ಎಂದು ನಾಮಕರಣ ಮಾಡಬೇಕು. ಬಸವ ಧರ್ಮ ಪೀಠದ ವತಿಯಿಂದ ಎಲ್ಲಾ ಬಸವ ಮಂಟಪಗಳಲ್ಲಿ ಪ್ರತಿ ತಿಂಗಳು ಉಚಿತ ಇಷ್ಟಲಿಂಗ ದೀಕ್ಷೆ ಅಭಿಯಾನ ಹಮ್ಮಿಕೊಳ್ಳುವುದು ಎಂದು ಹೇಳಿದರು.