ಆಲಮಟ್ಟಿ(ಜ.23): ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಹಿಂದುಳಿಯಲು ಈ ಭಾಗದ ಜನಪ್ರತಿನಿಧಿಗಳೇ ಪ್ರಮುಖ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 98 ಕ್ಷೇತ್ರಗಳ ಶಾಸಕರು ಒಂದಾಗಿದ್ದು, ಅಭಿವೃದ್ಧಿಗಾಗಿ ಶ್ರಮಿಸಲಿದ್ದೇವೆ ಎಂದು ರಾಜ್ಯ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಭರವಸೆ ಸಮಿತಿ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಕಿ ಭರವಸೆಗಳ ಪರಿಶೀಲನೆ ಅಂಗವಾಗಿ ಬುಧವಾರ ಆಲಮಟ್ಟಿ ಲಾಲಬಹಾದ್ದೂರಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಮಂತ್ರಿಯಾಗಿರುವ ವೇಳೆಯಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಶಾಲಾ-ಕಾಲೇಜುಗಳು ಮತ್ತು ಕಾನೂನು ಸಚಿವರಾಗಿರುವ ವೇಳೆಯಲ್ಲಿ ನ್ಯಾಯಾಲಯಗಳ ಸಂಕೀರ್ಣಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜನಪ್ರತಿನಿಧಿಗಳು ಹಿತಾಸಕ್ತಿ ಮರೆತು ಅಧಿಕಾರಿಗಳಿಂದ ಕೆಲಸ ಪಡೆದರೆ ಎಲ್ಲ ಕೆಲಸಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ಸಾಧ್ಯ. ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿರುವ ಕೆಲವು ಇಲಾಖೆಗಳ ಮುಖ್ಯ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಳಿಸಿ ಸರ್ಕಾರ ಆದೇಶ ನೀಡಿದ್ದರೂ ಕಚೇರಿ ಸ್ಥಳಾಂತರವಾಗದಿರುವ ಕುರಿತು ಮಾಧ್ಯಮದವರು ಗಮನ ಸೆಳೆದಾಗ ಜನಪ್ರತಿನಿಧಿಗಳು ಸ್ವಹಿತಾಸಕ್ತಿಗಳನ್ನು ಮರೆತು ಅಧಿಕಾರಿಗಳು ಯಾರೇ ಇರಲಿ ಅವರಿಂದ ಕೆಲಸ ಪಡೆಯಬೇಕು. ಇದರಿಂದ ಕಚೇರಿಗಳು ಸ್ಥಳಾಂತರವೂ ಆಗುತ್ತವೆ ಹಾಗೂ ಈ ಭಾಗ ಅಭಿವೃದ್ಧಿಯೂ ಆಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್‌ ಅಧೀನ ಕಾರ್ಯದರ್ಶಿ ಮೋಹನ್‌.ಕೆ.ಮುಗಳಿ ಹಾಗೂ ಮುಖ್ಯ ಅಭಿಯಂತರ ಆರ್‌.ಪಿ.ಕುಲಕರ್ಣಿ ಇದ್ದರು.