ಕಾವೇರಿಗೆ ಸಿಎಂ ಬೊಮ್ಮಾಯಿ ಬಾಗಿನ, 8 ತಿಂಗ್ಳಲ್ಲಿ 2ನೇ ಬಾರಿ ಅರ್ಪಿಸಿರುವುದು ವಿಶೇಷ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಿದ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಿದರು. 8 ತಿಂಗಳ ಅವಧಿಯಲ್ಲಿ ಎರಡು ಬಾರಿ ಬಾಗಿನ ಅರ್ಪಿಸಿರುವುದು ವಿಶೇಷ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.
ಮಂಡ್ಯ, (ಜುಲೈ20): ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆ ಕೆಆರ್‌ಎಸ್ ಜಲಾಶಯ ಅವಧಿಗೂ ಮುನ್ನ ಭರ್ತಿಯಾಗಿದೆ. ವಾಡಿಕೆಯಂತೆ ತುಂಬಿದ ಕಾವೇರಿ ಮಾತೆಗೆ ಸಿಎಂ ಬಾಗಿನ ಸಮರ್ಪಣೆ ಮಾಡಿದ್ದು, 8 ತಿಂಗಳ ಅವಧಿಯಲ್ಲಿ ಎರಡು ಬಾರಿ ಬಾಗಿನ ಅರ್ಪಿಸಿದ ಹೆಗ್ಗಳಿಕೆ ಸಿಎಂ ಬಸವರಾಜ ಬೊಮ್ಮಾಯಿ ಪಾತ್ರರಾಗಿದ್ದಾರೆ.
124.80 ಗರಿಷ್ಠ ಸಾಮರ್ಥ್ಯ ಹೊಂದಿರುವ ಕೃಷ್ಣರಾಜಸಾಗರ ಜಲಾಶಯ (KRS) ಸಂಪೂರ್ಣ ಭರ್ತಿಯಾಗಿದೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತಿದ್ದ ಕೆಆರ್‌ಎಸ್. ಈ ಬಾರಿ ಜುಲೈ ತಿಂಗಳಲ್ಲೇ ತುಂಬಿರುವುದು ವಿಶೇಷ. ಡ್ಯಾಂ ಇತಿಹಾಸದಲ್ಲಿ 6ಬಾರಿ ಜುಲೈ ತಿಂಗಳಲ್ಲಿ ಭರ್ತಿಯಾಗಿದೆ. ಹಿಂದೆ 1980, 2006, 2007, 2009, 2018 ಮತ್ತು ಈ ವರ್ಷದ ಜುಲೈ ತಿಂಗಳಲ್ಲಿ ಜಲಾಶಯ ತುಂಬಿದೆ. ಅವಧಿಗೂ ಡ್ಯಾಂ ಭರ್ತಿಯಾದ ಹಿನ್ನೆಲೆ ಹಳೇ ಮೈಸೂರು ಭಾಗದ ರೈತರಲ್ಲಿ ಸಂತಸ ಮನೆ ಮಾಡಿದ್ದು, ಸಿಎಂ ಬಾಗಿನ ಅರ್ಪಿಸುವ ಮೂಲಕ ಕಾವೇರಿ ತಾಯಿಗೆ ಧನ್ಯವಾದ ಸಲ್ಲಿಸಿದರು.
ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ, ತಗ್ಗು ಪ್ರದೇಶದಲ್ಲಿರುವವರಿಗೆ ಎಚ್ಚರಿಕೆ
ಕೆಆರ್‌ಎಸ್‌ಗೂ ಮೊದಲು ಕಬಿನಿ ಅಣೆಕಟ್ಟಿಗೆ ಬಾಗಿನ ಅರ್ಪಿಸಿದ ಸಿಎಂ. ಇದಕ್ಕೂ ಮುನ್ನ ನಾಡದೇವತೆ ಶ್ರೀ ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದರು. ಬಳಿಕ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಕೆಆರ್‌ಎಸ್ ಹೆಲಿಪ್ಯಾಡ್‌ಗೆ ಆಗಮಿಸಿದ ಸಿಎಂ. ರಸ್ತೆ ಮಾರ್ಗವಾಗಿ ಕೆಆರ್‌ಎಸ್ ಜಲಾಶಯ ತಲುಪಿದರು. ಪೂರ್ಣಕುಂಭ ಸ್ವಾಗತ, ಮಂಗಳವಾದ್ಯಗಳ ಮೂಲಕ ಸಿಎಂ ಸ್ವಾಗತ ಕೋರಲಾಯಿತು. ವೃಶ್ಚಿಕ ಲಗ್ನ ಶುಭ ಮುಹೂರ್ತದಲ್ಲಿ ದಂಪತಿ ಸಮೇತವಾಗಿ ಬಾಗಿನ ಸಮರ್ಪಿಸಿದ ಸಿಎಂ. ರವಿಕೆ ಕಣ, ಅಕ್ಕಿ, ಬೆಲ್ಲ, ನವ ಧಾನ್ಯ ಒಳಗೊಂಡ ಬಾಗಿನವನ್ನು ಸಂಪ್ರದಾಯ ಬದ್ಧವಾಗಿ ಅರ್ಪಿಸಿದರು.
ಬಳಿಕ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿಗಳು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಕೆ.ಗೋಪಾಲಯ್ಯ, ಡಾ.ಕೆ.ಸಿ ನಾರಾಯಣಗೌಡ, ಎಸ್.ಟಿ ಸೋಮಶೇಖರ್, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿಎಸ್ ಪುಟ್ಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಗಿನ ಕಾರ್ಯಕ್ರಮ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಆಷಾಢ ಮಾಸದಲ್ಲಿ ಕಾವೇರಿ ಜಲಾನಯನ ಪ್ರದೇಶದ 4 ಡ್ಯಾಂಗಳು ತುಂಬಿರುವುದು ಸಂತಸದ ವಿಷಯ. ಕಾವೇರಿ ಹಳೇ ಮೈಸೂರು ಭಾಗದ ಜೀವನದಿಯಾಗಿದೆ. ಪವಿತ್ರವಾದ ನದಿಯ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಮೈಸೂರು ಮಹಾರಾಜರು ಡ್ಯಾಂ ಕಟ್ಟಲು ಮಾಡಿದ ತ್ಯಾಗ ಮರೆಯಲು ಸಾಧ್ಯವಿಲ್ಲ. 2008ರಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್ ಗೇಟ್‌ನಲ್ಲಿ ರಂಧ್ರಗಳಾಗಿ ನೀರು ಸೋರುತ್ತಿತ್ತು. ಆ ಪರಿಸ್ಥಿತಿಯಲ್ಲಿ 300 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು. ಆಗ ಪ್ರತಿ ಹನಿಯನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಿದೆವು. ಆ ಸಂದರ್ಭದಲ್ಲಿ ಗೇಟ್ ರಿಪೇರ್ ಮಾಡದಂತೆ ಒತ್ತಡಗಳು ಬಂದವೂ. ಅವತ್ತು ರಾತ್ರಿ ನನಗೆ ನಿದ್ದೆ ಬರಲಿಲ್ಲ. ಮಾರನೇ ದಿನ ಬೆಳಿಗ್ಗೆ ಅಧಿಕಾರಿಗಳನ್ನ ಕರೆದು ಗೇಟ್ ಬದಲಿಸಲು ಹೇಳಿದೆ.
ಮೊದಲು 16 ಗೇಟ್‌ಗಳನ್ನ ರಿಪ್ಲೇಸ್ ಮಾಡಲಾಗಿದೆ. ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ. ಗೇಟ್ ಕಾಮಗಾರಿಗೆ 160ಕೋಟಿ ನೀಡಲಾಗಿದೆ. ಒಂದೂವರೆ ವರ್ಷದಲ್ಲಿ ಈ ಕಾಮಗಾರಿ ಮುಗಿಯಬೇಕು. ಎಲ್ಲಾ ಗೇಟ್ ಬದಲಿಸಿದ ಬಳಿಕ KRSನಲ್ಲಿ ದೊಡ್ಡ ಹಬ್ಬ ಮಾಡೋಣ ಎಂದರು.