ಬಸವಣ್ಣನವರ ವಚನ ಸಾಹಿತ್ಯ ಅನುಷ್ಠಾನವಾಗಬೇಕು: ಸಚಿವ ಎಚ್.ಕೆ.ಪಾಟೀಲ
ಬಸವಣ್ಣನವರ ವಚನ ಸಾಹಿತ್ಯವನ್ನು ನಾವಿಂದು ಭಾಷಣದ ವಸ್ತುವಾಗಿ ಮಾಡಿಕೊಂಡು ಬಂದಿದ್ದೇವೆಯೇ ವಿನಃ ಕಾರ್ಯರೂಪಕ್ಕೆ ತರುವಲ್ಲಿ ಹಿಂದೆ ಉಳಿದಿದ್ದೇವೆ. ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಗದಗ (ಜ.22): ಬಸವಣ್ಣನವರ ವಚನ ಸಾಹಿತ್ಯವನ್ನು ನಾವಿಂದು ಭಾಷಣದ ವಸ್ತುವಾಗಿ ಮಾಡಿಕೊಂಡು ಬಂದಿದ್ದೇವೆಯೇ ವಿನಃ ಕಾರ್ಯರೂಪಕ್ಕೆ ತರುವಲ್ಲಿ ಹಿಂದೆ ಉಳಿದಿದ್ದೇವೆ. ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು. ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು, ಜಿಲ್ಲಾ ಘಟಕ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಇತಿಹಾಸದಲ್ಲಿ ೧೨ನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಢ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಅರಸ ಬಿಜ್ಜಳನಿಗೆ ಹಣಕಾಸು ಸಚಿವರಾಗಿದ್ದ ಬಸವಣ್ಣನವರು, ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಇತಿಹಾಸದ ಪುಟ ಸೇರಿವೆ ಎಂದರು.
ಕೊತ್ವಾಲ ಶಿಷ್ಯನ ಕೈಗೆ ಅಧಿಕಾರ ಸಿಕ್ಕದಿರುವುದು ನಮ್ಮ ಪುಣ್ಯ: ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿ
ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವ ಮೂಲಕ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಆದೇಶಿಸಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು, ಗದಗ ಜಿಲ್ಲಾ ಘಟಕ ಸರಕಾರವನ್ನು ಅಭಿನಂದಿಸಿದ ಠರಾವಿನ ಅಭಿನಂದನಾ ಪತ್ರವನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸುವುದಾಗಿ ತಿಳಿಸಿದರು.
ನಾವಿಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಪಾಲಕ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಮಹಾಸಭಾ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದ್ದು ಶ್ಲಾಘನೀಯ ಎಂದು ಹೇಳಿ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅಭಿನಂದಿಸಿದರು.
ಮಹಾಸಭಾದ ದಿನದರ್ಶಿಕೆ ಬಿಡುಗಡೆಗೊಳಿಸಿದ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಇಂದು ಬಸವ ತತ್ವವೇ ಸತ್ತು ಹೋಗಿದೆ. ಹೇಳುವದು ಒಂದು ಮಾಡುವದು ಇನ್ನೊಂದು ಎಂಬುವಂತಾಗಿದೆ. ಮಾತಿಗೂ ಕೃತಿಗೂ ವ್ಯತ್ಯಾಸವಿದೆ. ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆಯುಳ್ಳವರ ಸಂಖ್ಯೆ ಕಡಿಮೆ ಆಗುತ್ತಿದೆ. ಬಸವಣ್ಣನವರ ಅನುಯಾಯಿಗಳು, ಪರಿಪಾಲಕರು ಕಡಿಮೆಯಾಗುತ್ತಿದ್ದಾರೆ. ಯುವ ಜನಾಂಗಕ್ಕೆ ಬಸವತತ್ವ, ಕಾಯಕ, ದಾಸೋಹವನ್ನು ರೂಢಿಸಬೇಕಿದೆ ಎಂದರು.
ಬಸವಣ್ಣ ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕ ಅಲ್ಲ, ವಿಶ್ವದ ನಾಯಕ. ಬಸವಣ್ಣ ಇಂದು ಬದುಕಿದ್ದರೆ ವಿಶ್ವಕ್ಕೆ ಮಾರ್ಗದರ್ಶಕ ಆಗಿರುತ್ತಿದ್ದರು ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಸ್ಮರಣೀಯ. ಅಂದಿನ ಅನುಭವ ಮಂಟಪ ಇಂದಿನ ಸಂಸತ್ ಎಂದು ಪ್ರತಿಪಾದಿಸಿದರು. ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕೊರ್ಲಹಳ್ಳಿ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಕ್ಕೆ ಹಾಗೂ ಸಚಿವ ಎಚ್.ಕೆ.ಪಾಟೀಲರು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದಕ್ಕೆ ಅಭಿನಂದಿಸಿದರು.
ಪೂರ್ಣಾವಧಿ ಸಿಎಂ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ: ಸಚಿವ ಆರ್.ಬಿ.ತಿಮ್ಮಾಪುರ
ಸುರೇಖಾ ಪಿಳ್ಳೆ ಪ್ರಾರ್ಥಿಸಿದರು. ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿದರು. ಬಿ.ಬಿ. ಅಸೂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ಮಲ್ಲಾಪೂರ ಅಭಿನಂದನಾ ಪತ್ರ ಓದಿದರು. ಈ ವೇಳೆ ಎಸ್.ಬಿ. ಕರಿಭರಮಗೌಡ್ರ, ಚನ್ನಯ್ಯ ಸಂಗಳಮಠ, ಪಿ.ಟಿ. ನಾರಾಯಣಪುರ, ಮಂಜುಳಾ ರೇವಡಿ, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ತಾಲೂಕು ಘಟಕಗಳ ಅಧ್ಯಕ್ಷರಾದ ಸಿದ್ದು ಪಲ್ಲೇದ, ರಾಜಣ್ಣ ಹೂಲಿ, ಶಂಕ್ರಪ್ಪ ಕುಕನೂರ, ಯಲ್ಲಪ್ಪಗೌಡ ನಾಯ್ಕರ ಉಪಸ್ಥಿತರಿದ್ದರು.