'ಲಿಂಗಾಯತ ಸ್ವತಂತ್ರ ಧರ್ಮ ಮಾಡುವಲ್ಲಿ BSYರನ್ನ ವೀರಶೈವ ಗುಂಪು ಕಟ್ಟಿ ಹಾಕಿದೆ'

ಸಚಿವ ಸಂಪುಟ ಪುನಾರಚನೆ, ಆಡಳಿತ ನಡೆಸುವಲ್ಲಿ ಬಿಎಸ್ವೈ ಅವರನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ| ಯಾವ ನಾಯಕರು ಹತ್ತಿಕ್ಕುತ್ತಿದ್ದಾರೆ ಎಂದು ಹೆಸರು ಹೇಳೋಕೆ ಬರುವುದಿಲ್ಲ ಎಂದ ಮಾತೆ ಗಂಗಾದೇವಿ| ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಆಗ್ರಹಿಸಿ ಹೈದರಾಬಾದ್‌ನಲ್ಲಿ ಬೃಹತ್ ರ‍್ಯಾಲಿಗೆ ಚಿಂತನೆ| 

Basava Religion President Mate Gangadevi Talks Over Lingayat Religion

ಬಾಗಲಕೋಟೆ(ಜ.15): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸುತ್ತ ವೀರಶೈವ ಗುಂಪು ಹೆಚ್ಚು ಇದೆ. ಲಿಂಗಾಯತ ಸ್ವತಂತ್ರ ಧರ್ಮ ಮಾಡುವಲ್ಲಿ ಬಿಎಸ್ವೈ ಅವರನ್ನು ವೀರಶೈವ ಗುಂಪು ಕಟ್ಟಿ ಹಾಕಿದೆ. ಬಿಎಸ್ವೈಗೆ ಅಂತರ್ಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ, ವೈಶಿಷ್ಟ್ಯ ಧರ್ಮ ಎಂದು ಗೊತ್ತಿದೆ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ. 

ಸಚಿವ ಸಂಪುಟ ಪುನಾರಚನೆ, ಆಡಳಿತ ನಡೆಸುವಲ್ಲಿ ಬಿಎಸ್ವೈ ಹತ್ತಿಕ್ಕುತ್ತಿರುವ ವಿಚಾರದ ಬಗ್ಗೆ ಬುಧವಾರ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,  ಯಡಿಯೂರಪ್ಪ ಅವರನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅದು ನಮಗೂ ಕೂಡಗೊತ್ತಾಗಿದೆ. ಅವರನ್ನು ಮುಂದುವರೆಸಬಾರದು. ಯಾವ ನಾಯಕರು ಹತ್ತಿಕ್ಕುತ್ತಿದ್ದಾರೆ ಎಂದು ಹೆಸರು ಹೇಳೋಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಮ್ಮ ಲಿಂಗಾಯತರಲ್ಲಿ ಒಗ್ಗಟ್ಟು ಇಲ್ಲದೆ ಇರೋಕೆ ಹೀಗಾಗುತ್ತಿದೆ. ಲಿಂಗಾಯತರಲ್ಲಿ ಒಗ್ಗಟ್ಟು ತರುವ ಪ್ರಯತ್ನ ನಡೀತಿದೆ. ಪ್ರಯತ್ನ ಮಾಡದಿದ್ದರೆ ಹೇಗಾಗುತ್ತೆ ಅಂದ್ರೆ ತಕ್ಕಡಿಯಲ್ಲಿ ಕಪ್ಪೆ ತಂದು ಕಳಿಸಿದಂತಾಗುತ್ತದೆ. ಒಂದು ಕಪ್ಪೆ ತಂದು ಹಾಕೋವಷ್ಟರಲ್ಲಿ ಮತ್ತೊಂದು ಜಿಗಿದು ಹೋಗಿರುತ್ತೆ, ಹಾಗಾಗಿ ಲಿಂಗಾಯತರನ್ನು ಒಗ್ಗಟ್ಟು ಮಾಡುವ ಪ್ರಯತ್ನ ನಡೀತಿದೆ ಎಂದು ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಸವಣ್ಣನವರ ಬಗ್ಗೆ ಬಹಳ ಅಭಿಮಾನವಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರದಲ್ಲಿ ಮೋದಿಯವರಿಗೆ ಯಾರೋ ತಪ್ಪು ಕಲ್ಪನೆ ಕೊಡುತ್ತಿದ್ದಾರೆ. ನೇರವಾಗಿ ಭೇಟಿ ಮಾಡಿ ಹೇಳಿದರೆ ಪ್ರಗತಿಪರ ವಿಚಾರವಾದಿ ಮೋದಿ ಒಪ್ಪಿಕೊಳ್ಳುತ್ತಾರೆ ಅನ್ಸುತ್ತೆ, ಪ್ರಧಾನಿ ಭೇಟಿ ಪ್ರಯತ್ನ ಮಾಡುತ್ತಿದ್ದೇವೆ.  ಎಂದು ಹೇಳಿದ್ದಾರೆ . 

ಲಿಂಗಾಯತರಿಗೆ ಶೇಕಡಾ 16 ರಷ್ಟು ಮೀಸಲಾತಿ ಹೆಚ್ಚಿಸುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೊಡುವುದನ್ನು ಒಪ್ಪುವುದಿಲ್ಲ. ಲಿಂಗಾಯತರಿಗೆ ಮೀಸಲಾತಿ, ಮಾನ್ಯತೆ ಕೊಟ್ಟರೆ ಬಹಳ ಸಂತೋಷವಾಗುತ್ತದೆ. ಕೇವಲ ವೀರಶೈವ ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸೋದಕ್ಕೆ ನನ್ನ ವಿರೋಧವಿದೆ. ಲಿಂಗಾಯತರೆಂದು ಮೀಸಲಾತಿ ಹೆಚ್ಚಿಸಿದರೆ ವೀರಶೈವರು ಬರುತ್ತಾರೆ, ಲಿಂಗಾಯತರು ಬರುತ್ತಾರೆ ಎಂದು ಹೇಳಿದ್ದಾರೆ. 
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಬೆಂಬಲಿಸಿದಕ್ಕೆ ಕಾಂಗ್ರೆಸ್ ಸೋಲಾಯಿತು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಕೆಶಿ ಹೇಳಿಕೆ ತಪ್ಪು, ಸುಮ್ಮನೆ ಉಡಾಫೆಯಿಂದ ಮಾತನಾಡಿದ್ದು, ಸತ್ಯವೆಂದು ಪರಿಗಣಿಸೋಕೆ ಆಗೋಲ್ಲ, ಯಾವ ಕಡೆ ಹೊರಳುತ್ತೆ ಹಾಗೆ ಊಸರವಳ್ಳಿ ಹಾಗೆ ಮಾತನಾಡಿರಬಹುದಷ್ಟೇ, ನಾವು ಅದನ್ನು ಒಪ್ಪಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಪ್ರೋತ್ಸಾಹ ಕೊಟ್ಟಿದ್ದಕ್ಕೆ ಸೋಲಾಯಿತು ಅಂದರೆ ಈಗ ಕೇಂದ್ರದಲ್ಲಿ ಯಾಕೆ  ಗೆಲ್ಲಲಿಲ್ಲ, ಆಗ ಇವರು ಗೆಲ್ಲಬೇಕಿತ್ತಲ್ಲ, ಅದಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಹೇಳಿದ್ದಾರೆ. 

ಯಡಿಯೂರಪ್ಪನವರಿಗೂ ಧರ್ಮ ಬಗ್ಗೆ ಅಭಿಮಾನ ಇದೆ. ಈಗ ತಾತ್ಕಾಲಿಕವಾಗಿ ದೂರ ಸರಿದಿರಬೇಕು. ಮುಂದೆ ಬಂದೆ ಬರುತ್ತಾರೆ. ನಾವು ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿಗುವರಿಗೂ ಹೋರಾಟ ಮುಂದೆವರೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್‌ನವರು ವೋಟ್ ಬ್ಯಾಂಕ್‌ಗಾಗಿ ಪ್ರತ್ಯೇಕ ಧರ್ಮ ಹೋರಾಟ ಬಳಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ನಮಗೆ ಸಂಬಂಧವಿಲ್ಲ, ಆದ್ರೆ  ನಮ್ಮ ಹೋರಾಟಕ್ಕಂತೂ ಬೆಂಬಲ ಕೊಟ್ಟಿದ್ದರು. ಆದರೆ, ಈಗ ಸೈಲೆಂಟ್ ಆಗಿದ್ದಾರೆ ಎಂದರೆ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ. 

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಆಗ್ರಹಿಸಿ ಮಾರ್ಚ್ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಬೃಹತ್ ರ‍್ಯಾಲಿಗೆ ಚಿಂತನೆ ನಡೆದಿದೆ. ಕಾನೂನು ಹೋರಾಟದ ಬಗ್ಗೆಯೂ ಚಿಂತನೆ ನಡೆದಿದೆ. ಒಂದು ಬಾರಿ ಕೋರ್ಟ್‌ಗೆ ಹೋದರೆ ತುಂಬಾ ನಿಧಾನವಾಗುತ್ತೆ ಅನ್ನೋ ಅಭಿಪ್ರಾಯ ಇದೆ.ಕಾನೂನು ಹೋರಾಟದ ಬಗ್ಗೆ ಜಾಮದಾರ್ ಚಿಂತನೆ ಮಾಡುತ್ತಿದ್ದಾರೆ. ನಾವು ಹೋರಾಟ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios