ಬಸವ ತತ್ವವೇ ಶಾಶ್ವತ: ಸ್ವಾಮೀಜಿಗಳ ಸಮೂಹಕ್ಕೆ ಧನ್ಯವಾದ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವರ್ಗರಹಿತ, ಜಾತಿ ರಹಿತ ಸಮ ಸಮಾಜದ ಮೌಲ್ಯವನ್ನು ಮನುಕುಲದಲ್ಲಿ ಬಿತ್ತಿದ ಬಸವ ತತ್ವವೇ ಶಾಶ್ವತವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಬಳ್ಳಾರಿ (ಜೂ.21): ವರ್ಗರಹಿತ, ಜಾತಿ ರಹಿತ ಸಮ ಸಮಾಜದ ಮೌಲ್ಯವನ್ನು ಮನುಕುಲದಲ್ಲಿ ಬಿತ್ತಿದ ಬಸವ ತತ್ವವೇ ಶಾಶ್ವತವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಸಂಡೂರು ತಾಲೂಕಿನ ಜಿಂದಾಲ್‌ನ ವಿದ್ಯಾನಗರ ಟೌನ್‌ಶಿಪ್‌ನಲ್ಲಿ ಶ್ವಾಸಯೋಗ ಸಂಸ್ಥೆ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಸ್ವಾಮೀಜಿಗಳಿಗೆ "ಯೋಗ ರತ್ನ-2024" ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡುವುದಕ್ಕೆ ಮೊದಲೇ ನಾನು ರಾಜ್ಯದಲ್ಲಿ ಯೋಗ ದಿನವನ್ನು ಆಚರಿಸುವ ಮೂಲಕ ಯೋಗ ವಿಜ್ಞಾನವನ್ನು ಜನರಲ್ಲಿ ವಿಸ್ತರಿಸುವ ಕಾರ್ಯಕ್ಕೆ ಮುಂದಾದೆ ಎಂದರು. ಸಮಾಜದ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತಿರುವ ಸ್ವಾಮೀಜಿಗಳು, ಒಟ್ಟಾಗಿ ತಮ್ನನ್ನು ಮತ್ತು ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಒಪ್ಪಿ ಆಶೀರ್ವದಿಸಿದಕ್ಕಾಗಿ ಸ್ವಾಮೀಜಿಗಳ ಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದರು.
ನಿಮ್ಮ ಮನಸ್ಸು, ದೇಹ, ಅಧ್ಯಾತ್ಮಿಕ ಚೈತನ್ಯ, ಆರೋಗ್ಯಕರವಾಗಿ ಇರಬೇಕಾದರೆ ಯೋಗ ವಿಜ್ಞಾನದ ಜ್ಞಾನ ಅರಿಯಬೇಕು. ನಿರಂತರ ಅಭ್ಯಾಸವನ್ನು ಸಹ ಮಾಡಬೇಕು. ಇದರಿಂದ ಮನಸ್ಸು, ದೇಹ ಮತ್ತು ದೇಶ ರೋಗ ರಹಿತವಾಗಿ ಸಮಾಜಮುಖಿಯಾಗಿ ಬೆಳೆಯುತ್ತದೆ ಎಂದರು. ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಇಳಕಲ್ ಮಠದ ಶರಣರು ಸೇರಿ 50 ಮಂದಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಂ, ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಖಜಾನೆ ಖಾಲಿ ಆಗಿ ಸರ್ಕಾರಿ ಜಮೀನನ್ನು ರಾಜ್ಯ ಸರ್ಕಾರ ಮಾರುತ್ತಿದೆ: ಸಂಸದ ಬೊಮ್ಮಾಯಿ ಆರೋಪ
ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಇಲ್ಲಿನ ಜೆಎಸ್‌ಡಬ್ಲು ಟೌನ್ ಶಿಪ್ ನಲ್ಲಿ ಆಯೋಜಿಸಿದ್ದ ಯೋಗರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 50 ಮಂದಿ ಸಿದ್ದಗುರುಗಳು ಒಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು "ಯೋಗರಾಮಯ್ಯ ಮತ್ತು ಕರ್ಮಯೋಗಿರಾಮಯ್ಯ" ಎಂದು ಪ್ರಶಂಶಿಸಿ ಅಭಿನಂದಿಸಿದರು. ಜನಪರ ಕಾಳಜಿ, ಸಾಮಾಜಿಕ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಆಶೀರ್ವದಿಸಿದರು. ವಿವಿಧ ಸಮುದಾಯಗಳ 50ಕ್ಕೂ ಹೆಚ್ಚು ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.