ವಿಜಯಪುರ(ಏ.03):  ಮೇ 2ರೊಳಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬದಲಾಗದಿದ್ದರೆ ಬಿಜೆಪಿಯಲ್ಲಿ ಇನ್ನೂ ದೊಡ್ಡ ಸ್ಫೋಟ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಚಿವ ಈಶ್ವರಪ್ಪ ಪಕ್ಷದಲ್ಲಿ ಹಿರಿಯರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಬಿಜೆಪಿ ಕಟ್ಟುವಲ್ಲಿ ಈಶ್ವರಪ್ಪನವರ ಶ್ರಮವಿದೆ. ಅಂಥ ಹಿರಿಯರು ಬೇಸತ್ತು ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಇದು ತಪ್ಪಲ್ಲ ಎಂದರು.

'ನೀವು ಸಿಎಂ ಆಗಿರಿ ಉಳಿದ ಎಲ್ಲ ಖಾತೆಯ ಜವಾಬ್ದಾರಿ ವಿಜಯೇಂದ್ರಗೆ ಕೊಡಿ'

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸಿಎಂಗೆ ಬುದ್ಧಿವಾದ ಹೇಳಬೇಕಿತ್ತು. ಅದನ್ನು ಬಿಟ್ಟು ಈಶ್ವರಪ್ಪಗೆ ಬುದ್ಧಿ ಹೇಳುತ್ತಿರುವುದು ಸರಿಯಲ್ಲ. ಅರುಣ್‌ ಸಿಂಗ್‌ ಬಿಜೆಪಿ ಪರವಿದ್ದಾರೋ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರವಿದ್ದಾರೋ ಹೇಳಬೇಕು. ಅರುಣ್‌ ಸಿಂಗ್‌ ಬಿಜೆಪಿಗೆ ಉಸ್ತುವಾರಿಯಾಗಿದ್ದಾರೆ. ಯಡಿಯೂರಪ್ಪ ಅವರ ಉಸ್ತುವಾರಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಾತನಾಡುವುದರಿಂದ ಪಕ್ಷವು ಹಾಳಾಗುತ್ತದೆ ಎಂದು ಹೇಳಿದರು.

ಈಶ್ವರಪ್ಪ ವಿರುದ್ದ ಸಹಿ ಸಂಗ್ರಹ ಮಾಡುವುದೆಂದರೆ ಪಕ್ಷದ ವಿರುದ್ಧವೇ ಸಹಿ ಸಂಗ್ರಹ ಮಾಡಿದಂತಾಗುತ್ತದೆ. ಸಹಿ ಸಂಗ್ರಹ ಮಾಡಲು ಈಶ್ವರಪ್ಪನವರು ಅಂಥ ಯಾವ ತಪ್ಪು ಮಾಡಿಲ್ಲ. ನಿನ್ನೆ ಮೊನ್ನೆ ಬಂದವರು ಕಮೆಂಟ್‌ ಮಾಡುವ ಅವಶ್ಯಕತೆ ಇಲ್ಲ. ಈಶ್ವರಪ್ಪ ಮೂಲ ಬಿಜೆಪಿಗ. ನಾನು, ಯಡಿಯೂರಪ್ಪ ಬಿಜೆಪಿ ತೊರೆದು ಮತ್ತೆ ವಾಪಸ್‌ ಬಂದಿದ್ದೇವೆ. ಕೆ.ಎಸ್‌. ಈಶ್ವರಪ್ಪ ಬಿಜೆಪಿ ಬಿಟ್ಟಿಲ್ಲ. ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ ಎಂದರು.