ಸಮಾಜಕ್ಕೆ ಕೆಲಸ ಮಾಡುವವರು ಇಲ್ಲಿ ಯಾರು ಇಲ್ಲ. ಎಲ್ಲರೂ ತಮ್ಮ ತಮ್ಮ‌ ಸ್ವಾರ್ಥಕ್ಕಾಗಿ ಈ ಟ್ರಸ್ಟ್‌ಗಳನ್ನು ಬಳಸಿದ್ದಾರೆ. ಎಷ್ಟೋ ಜನರು ಇದರಿಂದ ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ ಮಾಡಿದ್ದಾರೆ.

ವಿಜಯಪುರ (ಏ.15): ಸಮಾಜಕ್ಕೆ ಕೆಲಸ ಮಾಡುವವರು ಇಲ್ಲಿ ಯಾರು ಇಲ್ಲ. ಎಲ್ಲರೂ ತಮ್ಮ ತಮ್ಮ‌ ಸ್ವಾರ್ಥಕ್ಕಾಗಿ ಈ ಟ್ರಸ್ಟ್‌ಗಳನ್ನು ಬಳಸಿದ್ದಾರೆ. ಎಷ್ಟೋ ಜನರು ಇದರಿಂದ ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ. ಇದರಿಂದ ಸಮಾಜಕ್ಕೆ ಹೇಗೆ ಒಳ್ಳೆಯದಾಗುತ್ತೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ಶ್ರೀಗಳ ಉಚ್ಚಾಟನೆ ಕುರಿತು ಮಾತನಾಡಿ, ಉಚ್ಚಾಟನೆ ಮಾಡಿದವರು, ಮಾಡಿಸಿಕೊಂಡವರು ಇಬ್ಬರು ಅವರೇ ಇದ್ದಾರೆ.

ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡಲು ಈ ಟ್ರಸ್ಟ್‌ಗಳು ಇದ್ದಾವೆ. ಹಿಂದೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ₹11 ಕೋಟಿ ಹಣ ಕೊಟ್ಟಿದ್ದಾರೆ. ಗ್ರಾಮ ಪಂಚಾಯತ್ ಪಿಡಿಒ ಸಹಿ ಕೂಡ ನಕಲಿ ಮಾಡಿದ್ದಾರೆ. ಹೀಗಿದ್ದಾಗ ಈ ಟ್ರಸ್ಟ್‌ ಅನ್ನು ಹೇಗೆ ನಂಬುತ್ತಿರಿ? ಇವರು ಹೇಗೆ ಸಮಾಜಕ್ಕೆ ಒಳ್ಳೆಯದು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಈ ಕೂಡಲಸಂಗಮ ಟ್ರಸ್ಟ್ ಕೂಡ ಅದೆ ಇದೆ. ಅದು ಒಂದು ಖಾಸಗಿ ಆಸ್ತಿ ಆಗಿದೆ. ಈ ಎರಡೂ ಟ್ರಸ್ಟ್‌ಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ವಿಧಾನಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಬೇಕು ಅಂದುಕೊಂಡೆ.

ಆದರೆ, ನಮ್ಮದೇ ಸರ್ಕಾರ ಇದ್ರೂ ಸ್ಪೀಕರ್‌ಗೆ ಹೇಳಿ ಇದು ಚರ್ಚೆಗೆ ಬಾರದಂತೆ ತಡೆದರು. ಈ ಟ್ರಸ್ಟ್‌ನವರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನಮ್ಮ‌ ಸಮಾಜದವರ 1 ಕೋಟಿ ಮತಗಳಿವೆ ಅಂತ ಹೇಳಿದ್ದಾರೆ ಎಂದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ದೂರು ವಿಚಾರವಾಗಿ ಮಾತನಾಡಿದ ಅವರು, ಸಂತ್ರಸ್ತೆಯ ವಿಡಿಯೋ ನಾನು ನೋಡಿದ್ದೇನೆ. ದೂರು ಕೊಟ್ಟಿಲ್ಲ ಅಂದ ಮೇಲೆ ತನಿಖೆ ಆಗಲಿ. ಅದು ಯಾರ ಸಹಿ ಇದೆ, ಡುಪ್ಲಿಕೇಟ್ ಇದೆಯೋ ಎಂಬುದು ತನಿಖೆ ಆಗಲಿ. ಅವರಿಗೆ ಶಿಕ್ಷೆ ಆಗಲಿ. ನಾವೇನು ಯಾರ ಪರವಾಗಿ ಮಾತನಾಡಲ್ಲ ಎಂದರು.

ಎಫ್‌ಐಆರ್‌ ಆಗಿದೆ

ಸ್ವಾಮೀಜಿಗಳ ಮೇಲೆ ಬಂದಿರುವ ಆಪಾದನೆಯಿಂದ ಅವರು ಮುಕ್ತ ಆಗಬೇಕು. ಅವರು ಏನು ಮಾಡಿಲ್ಲ ಅನ್ನೋದನ್ನ ಸಮಾಜಕ್ಕೆ ಹೇಳಬೇಕು. ಇದರಲ್ಲಿ ಏನಾಗಿದೆ ಡುಪ್ಲಿಕೇಟ್ ಸಹಿ ಆಗಿದೆ ಅಂತ ಸಂತ್ರಸ್ತೆ ಹೇಳಿದ್ದಾಳೆ. ಈಗಾಗಲೆ ಎಫ್‌ಐಆರ್‌ ಆಗಿದೆ. ಪೊಲೀಸರು ಈಗ ತನಿಖೆ ನಡೆಸಿದ್ದಾರೆ. ಪೊಲೀಸರ ವರದಿ ಏನು ಬರುತ್ತೆ ನೋಡೋಣ. ಆದರೂ ಸ್ವಾಮೀಜಿಗಳಿಗೆ ಹೇಳಲು ಬಯಸುತ್ತೇನೆ, ಇದರಿಂದ ಮುಕ್ತ ಆಗಲು ಏನೇನು ಮಾಡಬೇಕು? ಸಮಾಜದಲ್ಲಿ ನಿಮ್ಮ ಬಗ್ಗೆ ಸಂಶಯ ಮೂಡಿದೆಯಲ್ಲ ಅದರಿಂದ ನೀವು ಹೊರಬರಲು ಪ್ರಯತ್ನ ಮಾಡಬೇಕು ಎಂದರು.

ಹರಿಹರ ಪಂಚನಸಾಲಿ ಪೀಠದ ಗಲಾಟೆ ವಿಚಾರಕ್ಕೆ ಪ್ರಕ್ರಿಯಿಸಿದ ಯತ್ನಾಳ, ಲಿಂಗಾಯತ ಪಂಚಮಸಾಲಿಯ ಎರಡು ಟ್ರಸ್ಟ್‌ನಲ್ಲಿ ನಡೆದಿದೆ. ನೋಡಿ ಎರಡು ಪೀಠದ ಟ್ರಸ್ಟ್‌ಗಳು ನಂಬಿಕೆ ಕಳೆದುಕೊಂಡಿವೆ. ಯಾರು ಹಣ ತಿಂದಿದ್ದಾರೆ ಅಂತಾ ನಡೆದಿದೆ. ಇದು ಎರಡು ಕಡೆ ಅದೆ ನಡೆದಿದೆ. ಇದನ್ನ ಖಾಸಗಿ ಆಸ್ತಿ ಮಾಡಿಕೊಂಡವರು ಇದ್ದಾರೆ. ಎರಡೂ ಟ್ರಸ್ಟ್‌ನವರು ಅವರೇ ಇದ್ದಾರೆ. ಇವರಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ. ಯಾರು ಪ್ರಾಮಾಣಿಕರಿದ್ದಾರೆ ಎಂದು ಪ್ರಶ್ನೆ ಮಾಡಿದರು.