ವಿಜಯಪುರ(ಜ.16):  ನಾವು ಅಭಿವೃದ್ದಿ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೀಡಿದ್ದ ಭದ್ರತೆಯನ್ನ ಸಿಎಂ ಯಡಿಯೂರಪ್ಪ  ಹಿಂಪಡೆದಿದ್ದಾರೆ. ನಾವು ಕೇಳಿದರೆ ಹಣ ಇಲ್ಲ ಅಂತಾರೆ. ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್ ಕೇಳಿದರೆ ಹಣ ನೀಡುತ್ತಾರೆ. ನಾಲ್ಕೈದು ಜನ ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಸಿಎಂ ವಿರುದ್ಧ ಸ್ವಪಕ್ಷೀಯ ರೆಬಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಬಿಜೆಪಿ ಶಾಸಕನಾದ ನನಗೆ ರೂ. 100 ಕೋ. ನೀಡಲಿಲ್ಲ. ಜಮೀರ್‌ ಅಹ್ಮದ್‌ ಖಾನ್ ಗೆ ರೂ. 200 ಕೋಟಿ ನೀಡಿದ್ದಾರೆ. ಅವನು ಹಿಂದುಗಳನ್ನು ನಾಶ ಮಾಡುತ್ತಾನೆ, ಸಬ್ ಕೋ ಖತಂ ಕರೆಂಗೆ ಎಂದಿದ್ದಕ್ಕೆ ಅನುದಾನ ನೀಡುತ್ತಾರೆ. ಹಿಂದುಗಳ ಪರ ಮಾತನಾಡುವವರಿಗೆ ಭದ್ರತೆ ಹಿಂಪಡೆದಿದ್ದಾರೆ. ಹಿಂದುಗಳನ್ನು ವಿರೋಧಿಸುವವರಿಗೆ ರೂ. 200 ಕೋ. ನೀಡ್ತಾರೆ ಎಂದು ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ. 

ರಾಮ, ಸೀತೆ, ಬ್ರಹ್ಮ, ಸರಸ್ವತಿ, ಬಗ್ಗೆ ಹಿಂದೂ ದೇವಾನು ದೇವತೆಗಳ ಬಗ್ಗೆ ಅಪಮಾನ ಮಾಡಿದವರಿಗೆ ಸಚಿವ ಸ್ಥಾನ ನೀಡ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುರುಗೇಶ್‌ ನಿರಾಣಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. 
ಅತೃಪ್ತ ಶಾಸಕರು ಅಮಿತ್ ಶಾ ಭೇಟಿ ಬಗ್ಗೆ ನನಗೆ ಗೊತ್ತಿಲ್ಲ. ಸೋಮವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ. ಮಂಗಳವಾರ ಯಾರನ್ನು ಭೇಟಿಯಾಗುವ ಬಗ್ಗೆ ಇನ್ನೂ ಚಿಂತಿಸುತ್ತೇನೆ ಎಂದು ಹೇಳಿದ್ದಾರೆ. 

ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಬಿಎಸ್‌ವೈ, ನನಗೇನಾದ್ರೂ ಆದ್ರೆ ಸರ್ಕಾರವೇ ಹೊಣೆ ಎಂದ ಶಾಸಕ

ಸಚಿವ ಜಗದೀಶ್‌ ಶೆಟ್ಟರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಜಗದೀಶ್‌ ಶೆಟ್ಟರ್ ಅವರಂತೆ ನಾನೇನು ಕೀಳು ರಾಜಕಾರಣ ಮಾಡುವುದಿಲ್ಲ. ನಾನೇನು ಸಿಎಂ ಆದ ಬಳಿಕ ಸಚಿವನಾಗಿಲ್ಲ. ಅವರು ಸಚಿವರಾಗುವ ಅವಶ್ಯಕತೆ ಇರಲಿಲ್ಲ. ಯುವಕರಿಗೆ ಅವಕಾಶ ನೀಡಬಹುದಿತ್ತು. ನಾನ್ಯಾರ ಬಳಿಯೀ ಸಚಿವ ಸ್ಥಾನ‌ ನೀಡುವಂತೆ ಕೇಳಿಲ್ಲ. ಶೆಟ್ಟರ್ ಸುಮ್ಮನೆ ನನ್ನ ಬಗ್ಗೆ ಮಾತನಾಡಬಾರದು ಎಂದು ಟಾಂಗ್‌ ಕೊಟ್ಟಿದ್ದಾರೆ. 

ನನ್ನ ಬಳಿ ಬಹಳ‌‌ ಜನರ ಇತಿಹಾಸವಿದೆ. ಈಶ್ವರಪ್ಪ ನನ್ನ ಬಗ್ಗೆ ಮಾತನಾಡಬಾರದು. ನಾನೆಂದೂ ಸಚಿವರನ್ನಾಗಿ‌ ಮಾಡಿ ಅಂತ ಈಶ್ವರಪ್ಪ ಅವರ ಬಳಿ ಹೋಗಿಲ್ಲ. ನಾನೆಂದೂ ಲಾಬಿ ಮಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನನ್ನನ್ನು ಬಿಜೆಪಿಯಿಂದ ಆರು ವರ್ಷ ಉಚ್ಛಾಟಿಸಿದ್ದರಿಂದ ಜೆಡಿಎಸ್ ಸೇರಿದ್ದೆ, ಅದನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲ್ಲ. ನಾನು ಯಾವತ್ತಾದರೂ ಸಚಿವ ಸ್ಥಾನ ಕೇಳಿದ್ದೀನಾ ಎಂಬ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಲಿ. ನನ್ನ ಮಾತಿಗೆ ಸಿಎಂ‌ ಉತ್ತರಿಸಲ್ಲ. ಸಚಿವರ ಮೂಲಕ‌ ಉತ್ತರ ಕೊಡಿಸುತ್ತಾರೆ ಎಂದು ಹೇಳಿದ್ದಾರೆ. 

ಅನಂತ ಕುಮಾರ ಅವರಂಥ ಒಳ್ಳೆಯವರು ಹೋಗಿದ್ದಾರೆ. ನಮ್ಮಂಥ ಪ್ರಾಮಾಣಿಕರು ಒದರಾಡುತ್ತ ಹೋಗುವಂತಾಗಿದೆ. ಕರ್ನಾಟಕದ ವಿಚಾರಗಳನ್ನು ದೆಹಲಿಗೆ ಮುಟ್ಟಿಸುವವರೇ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ.