ದೊರೆಸ್ವಾಮಿ ಡೋಂಗಿ ಹೋರಾಟಗಾರ : ಯತ್ನಾಳ್
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಮತ್ತೊಮ್ಮೆ ಯತ್ನಾಳ್ ತಮ್ಮ ವಾಕ್ ಪ್ರಹಾರ ನಡೆಸಿದ್ದಾರೆ. ಅವರೊಬ್ಬ ಡೋಂಗಿ ಎನ್ನುವ ಹೇಳಿಕೆಗೆ ಈಗಲೂ ಬದ್ದ ಎಂದು ಹೇಳಿದ್ದಾರೆ.
ಶಿವಮೊಗ್ಗ [ಫೆ.28]: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಇದಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ವೀರ ಸಾವರ್ಕರ್ ಹಾಗೂ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಅವಹೇಳನಕಾ ರಿಯಾಗಿ ಮಾತನಾಡಿದ ಕಾಂಗ್ರೆಸ್ ನಾಯಕರು ಈ ದೇಶದ ಕ್ಷಮೆ ಯಾಚಿಸಲಿ. ಹಾಗೊಂದು ಪಕ್ಷ ಅವರು ಕ್ಷಮೆ ಯಾಚಿಸಿದ್ದೇ ಆದಲ್ಲಿ ನಾನೂ ಕೂಡ ಕ್ಷಮೆ ಯಾಚಿಸುತ್ತೇನೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸ್ವಾತಂತ್ರ್ಯ ಹೋರಾಟ ಗಾರ ದೊರೆಸ್ವಾಮಿ ಓರ್ವ ಡೋಂಗಿ ಸ್ವಾತಂತ್ರ್ಯ ಹೋರಾಟಗಾರನೆಂಬ ತಮ್ಮ ಹೇಳಿಕೆಗೆ ಈಗಲೂ ತಾವು ಬದ್ಧನಿರುವುದಾಗಿ ಹೇಳಿದರು.
ಅಂಡಮಾನ್‌ನಲ್ಲಿ ಕಾಲಾಪಾನಿ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರನ್ನು ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವಹೇಳನ ಮಾಡುತ್ತಾರೆ. ಕೀಳಾಗಿ ಕಾಣುತ್ತಾರೆ. ಇವರಿಗೆ ಹೀಗೆ ಮಾತನಾಡಲು ಯಾವ ಅರ್ಹತೆ, ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು ಮೊದಲು ಇವರೆಲ್ಲರೂ ಈ ದೇಶದ ಕ್ಷಮೆ ಯಾಚಿಸಬೇಕೆಂದರು.
ವೀರ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಒಪ್ಪಿಕೊಳ್ಳದೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಕುರಿತು ಕೂಡ ಅಸಭ್ಯ ಪದ ಬಳಕೆಯ ಮೂಲಕ ನಿಂದಿಸಿದ್ದಾರೆ. ದೇಶದ ಅತ್ಯಂತ ಗೌರವಾನ್ವಿತ ಪ್ರಧಾನಿ ಕುರಿತು ಈ ರೀತಿ ಮಾತನಾಡಿದರೆ ಒಪ್ಪಲು ಸಾಧ್ಯವೇ? ಈ ಕಾರಣಗಳಿಗಾಗಿ ಕಾಂಗ್ರೆಸ್ ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ...
ಕಾಂಗ್ರೆಸ್ ಸಂವಿಧಾನ ವಿರೋಧಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರವೇ ಸಿಎಎ ಕಾಯ್ದೆಯನ್ನು ರೂಪಿಸಲಾಗಿದ್ದು, ಇದೀಗ ಇದು ಕಾನೂನಾಗಿದೆ. ರಾಜ್ಯ ಸಭೆ ಮತ್ತು ಲೋಕಸಭೆಯಲ್ಲಿ ಈ ಮಸೂದೆ ಪಾಸ್ ಆಗಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಬೀದಿಗಿಳಿದು ಹೋರಾಟಕ್ಕೆ ಜನರನ್ನು ಪ್ರಚೋದಿಸುತ್ತಿದೆ. ಸಿಎಎ ವಿರೋಧಿ ಹೋರಾಟಗಾರರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ. ಅಂದರೆ ಕಾಂಗ್ರೆಸ್ ಸಂವಿಧಾನ ವಿರೋಧಿಗಳಿಗೆ ಬೆಂಬಲ ನೀಡುತ್ತದೆ ಎಂದು ಆರೋಪಿಸಿದ ಅವರು ಸಂವಿಧಾನ ವಿರೋಧಿಯಾದ ಕಾಂಗ್ರೆಸ್‌ಗೆ ನನ್ನ ಟೀಕಿಸುವ ಯಾವುದೇ ಹಕ್ಕಿಲ್ಲ ಎಂದರು.
ಅಮೆರಿ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಭಾರತ ಪ್ರವಾಸದಲ್ಲಿರುವಾಗ ದೆಹಲಿಯಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಭಾರತದ ಆಂತರಿಕ ವಿಷಯದ ಕುರಿತು ಪಾಕ್‌ನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡುತ್ತಾರೆ. ಆರ್‌ಎಸ್‌ಎಸ್ ಬೆಂಬಲಿತ ಹಿಂಸಾಚಾರ ಎನ್ನುತ್ತಾರೆ. ಈ ರೀತಿ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.