ಸವಣೂರು(ಏ.25): ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಪ್ರಕರಣವೊಂದು ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಕ್ಷೌರಿಕರೊಬ್ಬರು ಲಾಕ್‌ಡೌನ್‌ ಅವಧಿಯಲ್ಲಿ ಅಂಗಡಿ ತೆರೆದು ಕ್ಷೌರ ಕಾರ್ಯ ನಡೆಸುತ್ತಿದ್ದರು. ಆ ವೇಳೆ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಆತ ಹೇಳಿರುವ ವೀಡಿಯೋ ವೈರಲ್‌ ಆಗಿದೆ. ಗ್ರಾಮದ ಹಿರಿಯರೊಬ್ಬರ ಸೂಚನೆ ಮೇರೆಗೆ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಆತ ಹೇಳಿದ್ದಾನೆ. ಐದು ದಿನಗಳ ಹಿಂದೆಯೇ ಈ ಪ್ರಕರಣ ನಡೆದಿದ್ದರೂ ಶುಕ್ರವಾರ ಬೆಳಕಿಗೆ ಬಂದಿದೆ.

ಲಾಕ್‌ಡೌನ್‌ ಮಧ್ಯೆಯೂ ಕೊಟ್ಟೂರೇಶ್ವರನಿಗೆ ಪೂಜೆ ಸಲ್ಲಿಸಿದ ಶಾಸಕ ಪೂಜಾ​ರ್‌..!

ಇದು ಬೆಳಕಿಗೆ ಬರುತ್ತಿದ್ದಂತೆ ದಲಿತ ಸಂಘಟನೆಗಳ ಮುಖಂಡರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆ ಮಂತ್ರೋಡಿಯಲ್ಲಿ ಗ್ರಾಪಂ ಅಧ್ಯಕ್ಷರು, ದಲಿತ ಸಂಘಟನೆ ಮುಖಂಡರು, ಗ್ರಾಮಸ್ಥರು ಸಭೆ ನಡೆಸಿ ಈ ಕುರಿತು ಚರ್ಚಿಸಿದರು. ಬಳಿಕ ಆ ಕ್ಷೌರಿಕ ತನ್ನ ತಪ್ಪನ್ನು ಒಪ್ಪಿಕೊಂಡು ಸಭೆಯಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾನೆ.

ಇನ್ನು ಮುಂದೆ ದಲಿತರು ಸೇರಿದಂತೆ ಯಾವುದೇ ಸಮಾಜದವರಿಗೂ ಅವಕಾಶ ನಿರಾಕರಿಸುವಂತಿಲ್ಲ, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಲಾಯಿತು. ಗ್ರಾಮದಲ್ಲಿ ಇನ್ನು ಮುಂದೆ ದಲಿತರ ಶೋಷಣೆಗೆ ಆಗುವ ಶಿಕ್ಷೆ ಬಗ್ಗೆ ಎಲ್ಲ ಅಂಗಡಿಗಳಲ್ಲಿ ಪ್ರಕಟಣೆ ಪ್ರದರ್ಶಿಸಬೇಕು ಎಂದು ಸೂಚಿಸಲಾಯಿತು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿಗೇ ಮುಗಿಸಲು ತೀರ್ಮಾನಿಸಿದರು.