ಉಡುಪಿ[ಫೆ.26]: ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸುಮಾರು 11 ಕೆ.ಜಿ. ತೂಕದ 5 ಕೋಟಿ ರುಪಾಯಿ ವೆಚ್ಚದ ಚಿನ್ನದ ಪಲ್ಲಕಿಯನ್ನು ತಯಾರಿಸಲಾಗಿದೆ.

ಉಡುಪಿಯ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ ಸಂಸ್ಥೆಯವರು ಈ ಪಲ್ಲಕಿಯನ್ನು ತಯಾರಿಸಿದ್ದು, ಮಂಗಳವಾರ ಅದನ್ನು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.

ಈ ಪಲ್ಲಕ್ಕಿಯನ್ನು 22 ಕ್ಯಾರೆಟ್‌ನಷ್ಟುಶುದ್ಧ ಚಿನ್ನದಿಂದ ತಯಾರಿಸಲಾಗಿದ್ದು, ಬಿಎಸ್‌ಐ ಹಾಲ್‌ಮಾರ್ಕ್ ಮೂಲಕ ದೃಢೀಕರಿಸಲಾಗಿದೆ. ಈ ಪಲ್ಲಕ್ಕಿ ನಿರ್ಮಾಣಕ್ಕೆ ಸುಮಾರು 1.50 ತಿಂಗಳು ಸಮಯ ತಗಲಿದೆ. ದೇವರ ಭಕ್ತರು ನೀಡಿದ ಚಿನ್ನದಿಂದ ಈ ಪಲ್ಲಕ್ಕಿಯನ್ನು ತಯಾರಿಸಲಾಗಿದೆ.

ಈ ಸಂದರ್ಭದಲ್ಲಿ ದೇವಾಲಯದ ಅನುಮಂಶಿಕ ವ್ಯವಸ್ಥಾಪಕ ಟ್ರಸ್ಟಿಎನ್‌.ಎಸ್‌. ಮನೋಹರ್‌ ಶೆಟ್ಟಿ, ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ, ಧಾರ್ಮಿಕ ದತ್ತಿ ವಿಭಾಗದ ಸಹಾಯಕ ಆಯುಕ್ತ ವೆಂಕಟೇಶ್‌, ಕಾರ್ಯನಿರ್ವಾಹಕ ಅಧಿಕಾರಿ ಜಯಮ್ಮ, ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್‌, ನಿರ್ದೇಶಕ ರಾಮದಾಸ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಲ್ಲಕ್ಕಿಯನ್ನು ನಿರ್ಮಿಸಿದ ಅರ್ಜುನ್‌ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.