ಗದಗ(ಮೇ.09):  ಕೊರೋನಾ ವೈರಸ್‌ ತಡೆಗಟ್ಟಲು ಲಾಕ್‌ಡೌನ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು 3 ತಿಂಗಳ ಕಾಲ ಯಾವುದೇ ರೀತಿಯ ಸಾಲ ವಸೂಲಾತಿ ಮಾಡಬಾರದು ಎಂದು ಸರ್ಕಾರ ಆದೇಶಿಸಿದ್ದರೂ ಎಕ್ಸಿಸ್‌, ಇಂಡಸ್‌ ಬ್ಯಾಂಕ್‌ ಮತ್ತು ಮುತ್ತೂಟ್‌ ಫೈನ್ಸಾನ್‌ ಪ್ರತಿನಿಧಿಗಳು ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಸಾಲ ವಸೂಲಿಗಿಳಿದ ಘಟನೆ ಶುಕ್ರವಾರ ನಡೆದಿದೆ.

ಈ ಲಾಕ್‌ಡೌನ್‌ ಸಂದರ್ಭದಲ್ಲಿ ಕೈಗಳಿಗೆ ಕೂಲಿಯೂ ಇಲ್ಲದೇ ಕಂಗಾಲಾಗಿರುವ ಗ್ರಾಮೀಣ ಮಹಿಳೆಯರಿಗೆ ಈ ಬ್ಯಾಂಕುಗಳ ಸಾಲ ವಸೂಲಾತಿ ಕಿರಿಕಿರಿ ಎನಿಸಿದ್ದು, ಇಂದು ತಮ್ಮೂರಿಗೆ ಬಂದಿದ್ದ ಬ್ಯಾಂಕ್‌ ಮತ್ತು ಫೈನಾನ್ಸ್‌ ಪ್ರತಿಧಿಗಳ ಎದುರು ಮೊದಲು ಇಂಥ ಸಂಕಷ್ಟದಲ್ಲಿ ಸಾಲ ಮತ್ತು ಬಡ್ಡಿ ಕಟ್ಟಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಗೋಗರೆದಿದ್ದಾರೆ. ಇವರ ಗೋಳಿಗೆ ಸ್ಪಂdiಸದೇ ಇದ್ದಾಗ ಸದ್ಯ ನಮಗೆ ಸಾಲ ಮರುಪಾವತಿ ನಮ್ಮಿಂದ ಸಾಧ್ಯವಿಲ್ಲ, ಬೇಕಿದ್ದರೆ ನಮ್ಮ ಮನೆಗಳನ್ನು ಜಪ್ತಿ ಮಾಡಿ ಎಂದಿದ್ದಾರೆ.

RMP ವೈದ್ಯನಿಗೂ ಕೊರೋನಾ ಭೀತಿ: ಆತಂಕದಲ್ಲಿ ಜನತೆ

ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಡಂಬಳಕ್ಕೆ ಬಂದಿದ್ದ ಇಂಡಸ್‌ ಭಾರತ ಫೈನಾನ್ಸ್‌ (ಇಂಡಸ್‌ ಬ್ಯಾಂಕ್‌) ಮತ್ತು ಎಕ್ಸಿಸ್‌ ಬ್ಯಾಂಕ್‌ ಪ್ರತಿನಿಧಿಗಳು ಗ್ರಾಮದ ಮಹಾಳಿಂಗರಾಯ ದೇವಾಲಯ ಹಾಗೂ ಮೈಲಾರಲಿಂಗೇಶ್ವರ ದೇವಾಲಯದ ಹತ್ತಿರವಿರುವ ಮನೆಗಳಲ್ಲಿ ‘ಮಹಿಳಾ ಸ್ವಸಹಾಯ ಸಂಘ’ಗಳ ಸದಸ್ಯೆಯರನ್ನು ಕರೆಸಿಕೊಂಡು ‘ಸರ್ಕಾರ ಮೂರು ತಿಂಗಳು ಸಾಲ ಮರುಪಾವತಿ ಬ್ಯಾಂಕುಗಳು ಒತ್ತಾಯಿಸಬಾರದು ಎಂದು ಹೇಳಿದೆ. ಆದರೆ ನೀವು ಪಡೆದಿರುವ ಸಾಲದ ಬಡ್ಡಿ ಏರುತ್ತಲೇ ಹೋಗುತ್ತದೆ. ಮುಂದೆ ನಿಮಗೇ ಭಾರವಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಪ್ರತಿ ವಾರವೂ ಮರುಪಾವತಿ ಮಾಡಿ. ಇಲ್ಲದಿದ್ದರೇ ನಿಮಗೇ ಅಪಾಯ ಎಂದು ಬೆದರಿಸುವ ದನಿಯಲ್ಲಿ ಹೇಳಿದ್ದಾರೆ.

ಪಕ್ಕದ ಕಂದಾಪುರ ಗ್ರಾಮದಲ್ಲಿ ‘ಮುತ್ತೂಟ್‌ ಮೈಕ್ರೋಫೈನಾನ್ಸ್‌ ಲಿಮಿಟೆಡ್‌’ನ ಪ್ರತಿನಿಧಿಗಳಂತೂ ಲಾಕ್‌ಡೌನ್‌ ನಮಗೆ ಸಂಬಂಧಿಸಿಲ್ಲ. ನೀವು ಪಡೆದ ಸಾಲಕ್ಕೆ ವಾರದ ಬಡ್ಡಿ ತಪ್ಪದೇ ಕಟ್ಟಬೇಕು. ಸಾಲ ಪಡೆಯುವಾಗ ಯಾವ ಕರಾರು ಇತ್ತೋ ಅದೇ ಕರಾರಿನಂತೆ ನಡೆದುಕೊಳ್ಳಿ. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೆದರಿಸಿದ್ದಾರೆ.

ಕಳೆದ ವಾರವೇ ಫೋನ್‌ ಮಾಡಿ ವಾರದ ಬಡ್ಡಿ ಕಟ್ಟುವಂತೆ ಹೇಳುತ್ತಿದ್ದ ಪ್ರತಿನಿಧಿಗಳು ಇಂದು ಗ್ರಾಮಕ್ಕೆ ಬಂದು ಆವಾಜ್‌ ಹಾಕಿದ್ದರಿಂದ ಸಾಲ ಪಡೆದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಮಹಿಳೆಯರು ಎಷ್ಟೇ ಗೋಗರೆದರೂ ಅದನ್ನು ಕಿವಿಗೆ ಹಾಕಿಕೊಳ್ಳದೇ ವಾರದ ಬಡ್ಡಿ ಕಟ್ಟುವುದೊಂದೇ ಮಾರ್ಗ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂದರ್ಭದಲ್ಲಿ ‘ಕನ್ನಡಪ್ರಭಕ್ಕೆ ಪ್ರತಿಕ್ರೀಯಿಸಿದ ಪಾರವ್ವ ಉಪ್ಪಾರ, ಪ್ರೇಮವ್ವ ಮಠದ, ಅಬೇದಾ ತಾಂಬೋಟಿ, ಹುಲಿಗೆಮ್ಮ ಉಪ್ಪಾರ, ರೇಣುಕಾ ಕರೆಡ್ಡಿ, ರೇಣವ್ವ ಮೆಟ್ಟಿನ್‌ ಸೇರಿದಂತೆ ಹಲವು ಮಹಿಳೆಯರು ‘ನಾವು ತೆಗೆದುಕೊಂಡ ಸಾಲಕ್ಕೆ ಪ್ರತಿಯಾಗಿ ಪ್ರತಿ ಗುರುವಾರಕ್ಕೊಮ್ಮೆ ಕಂತು ಕಟ್ಟುತ್ತಾ ಬಂದಿದ್ದೇವೆ. ಈಗ ಕೊರೋನಾ ಹಾವಳಿಯಿಂದಾಗಿ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಕೂಲಿಯೂ ಇಲ್ಲ, ಎರಡು ಹೊತ್ತು ಕೂಳು ಸಿಗುವುದು ಕಷ್ಟವಾಗಿದೆ. ಹಾಗಾಗಿ ಮೂರು ವಾರದಿಂದ ಕಂತು ಕಟ್ಟಿಲ್ಲ. ಫೋನ್‌ ಮಾಡಿ ಸಾಲದ ಕಂತು ಕಟ್ಟುವಂತೆ ಹೇಳುತ್ತಿದ್ದರು. ಈಗ ಊರಿಗೆ ಬಂದು ನೀವು ಸಾಲ ಕಟ್ಟದಿದ್ದರೆ ಬಡ್ಡಿ ಹೆಚ್ಚಾಗುತ್ತದೆ. ಹೇಗಾದರೂ ಮಾಡಿ ಕಂತು ಕಟ್ಟಿಎಂದು ಒತ್ತಾಯಿಸುತ್ತಿದ್ದಾರೆ. ಇವರ ಕಿರಿಕಿಯಿಂದ ತಪ್ಪಿಸಿಕೊಳ್ಳಲು ಬೇರೆಯವರ ಬಳಿ ಕೈ ಸಾಲ ತೆಗೆದು ಕಂತು ಕಟ್ಟಲು ಮುಂದಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು. ಆ ಎಲ್ಲ ಮಹಿಳೆಯರ ಮುಖದಲ್ಲಿ ಆತಂಕ ಮನೆಮಾಡಿತ್ತು.

ಹ್ವಾರೆ ಇಲ್ಲಾ ಬಗಸಿ ಇಲ್ಲ. ಸರ್ಕಾರ ಕೊಟ್ಟಅಕ್ಕಿ ತಿನ್ನಾಕ್ಕತ್ತೀವಿ, ನಮಗ ಸಾಲ ಕಟ್ಟಾಕ ಆಗುವುದಿಲ್ಲ ಎಂದು ಬ್ಯಾಂಕಿನವರ ಮುಂದ ದೈನಾಸಿಪಟ್ಟಿವಿ. ಅವ್ರೇನ್‌ ಕೇಳುವಂಗ ಕಾಣಲಿಲ್ಲ. ಎಲ್ಲೆರ ಕೈಗಡ ಸಾಲ ಸಿಕ್ಕರ ನಿಮ್‌ ಕಂತ ಕಟ್ತೇವ್ರಿ ಅಂದೇವಿ. ಏನ್‌ ಮಾಡೂದ್ರೀ ನಮ್‌ ನಸೀಬ ಕೆಟ್ಟಐತಿ ಎಂದು ಗಂಗವ್ವ ಗೊರವರ ಹೇಳಿದ್ದಾರೆ.

ಈ ಗ್ರಾಮದಲ್ಲಿ 6 ಜನರುಳ್ಳ 2 ಸಂಘಗಳಿದ್ದು ನಾವು ಸಾಲ ಕಟ್ಟಬೇಕೆಂದು ಇವರ ಮೇಲೆ ಒತ್ತಾಯಿಸಿಲ್ಲ. ಲಾಕ್‌ಡೌನ್‌ ಸ್ವಲ್ಪ ಸಡಿಲಿಕೆ ಇರುವುದರಿಂದಾಗಿ ಇವರಿಗೆ ಅನುಕೂಲವಾಗುವಂತೆ ಇವರಿಗೆ ಸಾಲ ಕೊಡಲು ಬಂದಿದ್ದೇವೆ ಎಂದು ಎಕ್ಸಿಸ್‌ ಬ್ಯಾಂಕ್‌.ಸೀನಿಯರ್‌ಪೀಲ್ಡ್‌ ಎಕ್ಸಿಕ್ಯೂಟರ್‌ ವಿನೋದ ಸಿದ್ದೇಗೌಡರ ತಿಳಿಸಿದ್ದಾರೆ.

ಮಹಿಳಾ ಸಂಘದ ಫಲಾನುಭವಿಗಳಿಗೆ ಅನುಕೂಲತೆ ಇದ್ದರೆ ಮಾತ್ರ ಸಾಲ ಕಟ್ಟಬಹುದು, ಇಲ್ಲವಾದರೆ ಇಲ್ಲ. ಸುರಕ್ಷತಾ ಸಾಲವನ್ನು ಸಹ ಕೊಡುತ್ತಿದ್ದೇವೆ. ಅವರ ಮೇಲೆ ನಾವು ಯಾವುದೇ ಒತ್ತಡ ಹೇರಿಲ್ಲ ಎಂದು ಇಂಡಸ್‌ ಬ್ಯಾಂಕ್‌ನ ಪೀಲ್ಡ್‌ಮ್ಯಾನೇಜರ್‌, ಮಹೇಶ ಈರಗಾರ, ಅಜರುದ್ದೀನ್‌ ಕಾಳಜಿ ಅವರು ಹೇಳಿದ್ದಾರೆ.