Asianet Suvarna News Asianet Suvarna News

ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ

ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ಆತಂಕ ಎದುರಾಗಿದೆ. ಸಾಲ ಮರು ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದ ದಾರಿ ಕಾಣದೆ ಕಂಗಾಲಾಗಿದ್ದಾರೆ. 

Bank Notice To Farmers For Loan Settlement in Dharwad
Author
Bengaluru, First Published Sep 2, 2019, 7:59 AM IST

ಬಸ​ವ​ರಾಜ ಹಿರೇ​ಮ​ಠ

ಧಾರ​ವಾಡ [ಸೆ.02]:  ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರೈತರ ಸಾಲ ಮನ್ನಾ ಯೋಜನೆ ಹುಟ್ಟುಹಾಕಿರುವ ಗೊಂದಲ ಇನ್ನೂ ಬಗೆಹರಿಯುವಂತೆ ಕಾಣುತ್ತಿಲ್ಲ. ಹಳೆ ಸರ್ಕಾರ ಹೋಗಿ ಹೊಸ ಸರ್ಕಾರ ಬಂದರೂ ಕೃಷಿಗಾಗಿ ಸಾಲ ಮನ್ನಾ ಮಾಡಿದ ಫಲಾನುಭವಿ ರೈತರಿಗೆ ಬ್ಯಾಂಕ್‌ಗಳಿಂದ ನೋಟಿಸ್‌ ಬರುವುದು ನಿಂತಿಲ್ಲ. ಸಾಲ ಮನ್ನಾ ಆಗಲಿದೆ ಎನ್ನುವುದಕ್ಕೆ ಪೂರಕವಾಗಿ ಸರ್ಕಾರದಿಂದ ಋುಣಮುಕ್ತ ಪತ್ರ ಬಂದ ಬಳಿಕವೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಹತ್ತಾರು ರೈತರಿಗೆ ಬ್ಯಾಂಕ್‌ ನೋಟಿಸ್‌ ಬಂದಿದೆ. ಇದರಿಂದ ಸಾಲ ಮನ್ನಾ ಆಗೋ ಖುಷಿಯಲ್ಲಿದ್ದ ರೈತರೀಗ ಬ್ಯಾಂಕ್‌ ನೋಟಿಸ್‌ ನೋಡಿ ಕಂಗಾಲಾಗಿದ್ದಾರೆ. ಒಂದು ಕಡೆ ಸಾಲವೂ ಮನ್ನವೂ ಆಗದೆ ಬಡ್ಡಿ ಕೈಮೀರಿ ಹೋಗಿದೆ, ಇನ್ನೊಂದು ಕಡೆ ಈ ಬಾರಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಈ ರೈತರೆಲ್ಲ ಪ್ರತಿ ವರ್ಷ ತಾವು ಪಡೆದ ಬೆಳೆ​ಸಾ​ಲದ ಬಡ್ಡಿ ತುಂಬಿ ನವೀ​ಕ​ರಣ ಮಾಡಿ​ಕೊ​ಳ್ಳು​ತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಲಮನ್ನಾ ಘೋಷಣೆ ನಂಬಿ ಕಳೆದ ವರ್ಷದಿಂದ ಸಾಲ ನವೀಕರಣ ಮಾಡಿಕೊಂಡಿರಲಿಲ್ಲ. ಇದೀಗ ಅಂತಹ ರೈತರು ಪಡೆದ ಸಾಲ​ದಲ್ಲಿ ಬರೀ 25 ಸಾವಿರ ರು. ಮಾತ್ರ ಮನ್ನಾ ಆಗಿದ್ದು, ಉಳಿದ ಬೆಳೆಸಾ​ಲಕ್ಕೆ ಬ್ಯಾಂಕ್‌​ಗಳು ಶೇ.14ರಷ್ಟುಬಡ್ಡಿ ವಿಧಿ​ಸಿ​ ನೋಟಿಸ್‌ ನೀಡಿದ್ದಾರೆ. ಯಾರು ನಿರಂತರ ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ರು. ಮನ್ನಾ ಮಾಡಲಾಗಿದೆ. ಇದು ಸರ್ಕಾರದ ನಿಯಮ. ಅದರಂತೆಯೇ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಕುರಿತು ಬಹುತೇಕ ರೈತರಿಗೆ ಸರಿಯಾದ ಮಾಹಿತಿಯೇ ಇಲ್ಲ, ಜತೆಗೆ ಆ ರೀತಿಯ ನಿಯಮಾವಳಿ ಇದ್ದರೆ ಋುಣಮುಕ್ತ ಪತ್ರ ಮನೆಗೆ ಕಳುಹಿಸಿ ಯಾಕೆ ಮೋಸ ಮಾಡಬೇಕಿತ್ತು ಎಂದು ಆಕ್ರೋಶದಿಂದ ರೈತರು ಪ್ರಶ್ನಿಸುತ್ತಿದ್ದಾರೆ.

ಬಡ್ಡಿ ಶೇ.4 ರಿಂದ 14ಕ್ಕೇರಿಕೆ: ಪ್ರತಿ ವರ್ಷದಂತೆ ಬೆಳೆ​ಸಾಲ ನವೀ​ಕ​ರಣ ಮಾಡಿ​ಕೊಂಡಿ​ದ್ದರೆ ರೈತರು ಶೇ.4ರ ಪ್ರಮಾ​ಣದಲ್ಲಿ ಬಡ್ಡಿ ತುಂಬ​ಬೇ​ಕಾ​ಗಿತ್ತು. ಆದರೆ, ಇದೀಗ ನಿಯಮಾವಳಿ ಪ್ರಕಾರ ಶೇ.11 ರಿಂದ ಶೇ.14 ರಷ್ಟುಬಡ್ಡಿ ತುಂಬಬೇಕು. ನೆರೆಗೆ ಸಿಲುಕಿ ಬೆಳೆ​ ಕಳೆ​ದು​ಕೊಂಡ ರೈತರು ಈಗ ಬೆಳೆಯೂ ಕೈಸೇರದೆ, ಆ ಕಡೆ ಸಾಲದ ಮೊತ್ತವೂ ಜಾಸ್ತಿಯಾಗಿ ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಯಡಿಯೂರಪ್ಪ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೋಟಿ​ಸ್‌​ನ​ಲ್ಲೇ​ನಿ​ದೆ?: ಸರ್ಕಾರದ ಬೆಳೆ ಸಾಲಮನ್ನಾ ಯೋಜನೆ 2018ರ ಅನ್ವಯ ತಮ್ಮ ಖಾತೆಗೆ 25000  ರು. ಜಮೆ ಆಗಿದೆ. ಈಗ 2019ರ ಮಾರ್ಚ್ 31ಕ್ಕೆ ಉಳಿದ ಬೆಳೆಸಾಲಕ್ಕೆ ಬಡ್ಡಿ ಸೇರಿ ತುಂಬಬೇಕಿದೆ. ತಾವೂ ಈ ಕೂಡಲೇ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ಬಾಕಿ ಸಾಲವನ್ನು ಮರುಪಾವತಿ ಮಾಡಿ ಮತ್ತೆ ಬೆಳೆ ಸಾಲ ಪಡೆಯಬಹುದು ಎಂದು ತಿಳಿಸಲಾಗಿದೆ.

 

ಸಾಲಮನ್ನಾ ಆಯ್ತು ಎನ್ನು​ವ​​ಷ್ಟ​ರಲ್ಲೇ ಮನೆಗೆ ಬ್ಯಾಂಕ್‌​ನಿಂದ ಬೆಳೆ​ಸಾಲ ತುಂಬುವ ನೋಟಿಸ್‌ ಬಂದಾಗ ಶಾಕ್‌ ಆದೆ​ವು. ಬರೀ 25 ಸಾವಿರ ರು. ಮಾತ್ರ ಮನ್ನಾ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾ​ರಿ​ಸಿ​ದರೆ ಸರ್ಕಾ​ರ​ವನ್ನೇ ಕೇಳಿ ಎನ್ನು​ತ್ತಾರೆ. 5 ಲಕ್ಷ ರು. ಸಾಲ ಪಡೆ​ದಿದ್ದು ಅದೀಗ 6,08,642 ರು. ಆಗಿದೆ. 1.80 ಲಕ್ಷ ರು. ಬಡ್ಡಿ​ ರೂಪ​ದ​ಲ್ಲಿದ್ದು ಆಕಾ​ಶವೇ ತಲೆ ಮೇಲೆ ಬಿದ್ದಂತಾ​ಗಿದೆ.

-ಪ್ರವೀಣ ಭೂಸ​ನೂ​ರ​ಮಠ, ನೋಟಿಸ್‌ ಪಡೆ​ದಿ​ರುವ ಕುಂದಗೋಳದ ರೈತ

2 ಲಕ್ಷ ರುಪಾಯಿ ಬೆಳೆಸಾಲ ಮನ್ನಾ ಮಾಡ್ತೇವಿ ಎಂದು ಹೇಳಿ ಬರೀ  25 ಸಾವಿರ ಮಾತ್ರ ಮನ್ನಾ ಮಾಡಿ ಸರ್ಕಾರ ಮೋಸ ಮಾಡಿ​ದೆ. ಬ್ಯಾಂಕ್‌​ನ​ವರು ಈಗ ಏನೇನೋ ರೂಲ್ಸ್‌ ಹೇಳು​ತ್ತಿ​ದ್ದಾರೆ. ಮನೆಗೆ ನೋಟಿಸ್‌ ಕಳು​ಹಿ​ಸಿದ್ದು ಏನು ಮಾಡ​ಬೇಕೆಂಬ ಗೊಂದಲದಲ್ಲಿದ್ದೇವೆ. ಇಷ್ಟುವರ್ಷ ಬರ​ಗಾ​ಲ​ದಿಂದ ಬೆಳೆ ಬಂದಿಲ್ಲ. ಈ ಬಾರಿ ವಿಪ​ರೀತ ಮಳೆ​ಯಾಗಿ ದಿಕ್ಕೇ ತೋಚದಂತಾಗಿದೆ. ಯಡಿ​ಯೂ​ರಪ್ಪ ಸರ್ಕಾ​ರವಾದರೂ ನಮ್ಮಂತ ರೈತರ ಸಂಕಷ್ಟಆಲಿ​ಸ​ಬೇಕು.

- ಆನಂದಪ್ಪ ಬಸಪ್ಪ ಸುಣ​ಗಾರ, ನೋಟಿಸ್‌ ಪಡೆ​ದಿ​ರುವ ಕುಂದಗೋಳ ರೈತ​ರು

ಸರ್ಕಾರದ ನಿಯಮಾವಳಿ ಪ್ರಕಾರ ಅರ್ಹ ರೈತರ ಲಕ್ಷ ಸಾಲ ಮನ್ನಾ ಮಾಡಲಾಗಿದೆ, ಯಾರು ನಿರಂತರ ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ಮನ್ನಾ ಮಾಡಲಾಗಿದೆ. ಸರ್ಕಾರದ ನಿಯಮಾವಳಿ ತಿಳಿದು ಬೆಳೆಸಾಲ ನವೀಕರಣ ಮಾಡಿಕೊಂಡಿದ್ದರೆ ಈಗ ಬಡ್ಡಿ ಜಾಸ್ತಿ ಆಗುತ್ತಿರಲಿಲ್ಲ. ಈ ಗೊಂದಲ ಮೂಡುತ್ತಿರಲಿಲ್ಲ.

- ಈಶ್ವರನಾಥ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಧಾರವಾಡ

(ಸಾಂದರ್ಭಿಕ ಚಿತ್ರ )

Follow Us:
Download App:
  • android
  • ios