ರಾಮಕೃಷ್ಣ ದಾಸರಿ

ರಾಯಚೂರು [ಜ.05]:  ದೇಶದಾದ್ಯಂತ ಪೌರತ್ವ ಕಾಯಿದೆ ಜಾರಿ(ಸಿಎಎ) ಕುರಿತು ಪರ ವಿರೋಧದ ಚರ್ಚೆ, ಹೋರಾಟಗಳು ನಡೆಯುತ್ತಿರುವ ಸಮಯದಲ್ಲಿಯೇ ರಾಜ್ಯದ ಸಿಂಧನೂರಿನಲ್ಲಿರುವ ಪುನರ್ವಸತಿ ಶಿಬಿರಗಳಲ್ಲಿರುವ ಸುಮಾರು 20 ಸಾವಿರ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರ ವಿತರಣಾ ಸಮಾರಂಭದ ಸಿದ್ಧತೆ ಸದ್ದಿಲ್ಲದೆ ನಡೆದಿದೆ.

ಜ.15ರೊಳಗೆ ಕಾರ್ಯಕ್ರಮ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದ್ದು, ಈ ಸಮಾರಂಭಕ್ಕೆ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್‌ ಶಾ ಅವರನ್ನು ಆಹ್ವಾನಿಸಲು ಸಂಸದ ಸಂಗಣ್ಣ ಕರಡಿ ಮತ್ತು ಬಿಜೆಪಿ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಬಳಿಕ ಬಾಂಗ್ಲಾದೇಶ ನಿರಾಶ್ರಿತರಿಗೆ ಪೌರತ್ವ ಪ್ರಮಾಣ ಪತ್ರ ವಿತರಿಸಿದ ದೇಶದ ಮೊದಲ ಸಮಾರಂಭ ಇದಾಗಲಿದೆ. ಕೊಪ್ಪಳ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಸಿಂಧನೂರಿನ 5 ಕ್ಯಾಂಪ್‌ಗಳ ಪೈಕಿ 2, 3, 4 ಮತ್ತು 5ನೇ ಕ್ಯಾಂಪ್‌ಗಳಲ್ಲಿರುವ ಸುಮಾರು 20 ಸಾವಿರ ನಿವಾಸಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ.

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ:

ಸಿಂಧನೂರಿನ 5 ಆರ್‌ಎಚ್‌ ಕ್ಯಾಂಪ್‌ಗಳಲ್ಲಿ ಸುಮಾರು 20 ಸಾವಿರ ಪೌರತ್ವ ಪಡೆಯುವ ಫಲಾನುಭವಿಗಳು ಕಂಡು ಬರುತ್ತಾರೆ. ಆದ್ದರಿಂದ ಸಿಂಧನೂರಿನಲ್ಲಿ ಜ.15ರೊಳಗೆ ಪೌರತ್ವ ಪ್ರಮಾಣಪತ್ರ ವಿತರಣಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ದಿನಾಂಕ ನಿಗದಿ ಪಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ಗೆ ಕಳೆದ ಡಿ.31ರಂದು ಪತ್ರ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿವೆ ಎಂದು ತಿಳಿದುಬಂದಿದೆ.

ಇಲ್ಲಿಂದಲೇ ಪ್ರಾರಂಭಿಸುವ ತವಕ:

ಕರ್ನಾಟಕ ರಾಜ್ಯದಲ್ಲಿ ಸಿಂಧನೂರು ಬಿಟ್ಟರೆ ಬಾಂಗ್ಲಾ ನಿರಾಶ್ರಿತರು ಎಲ್ಲೂ ಇಲ್ಲ. ತೀವ್ರ ವಿರೋಧ ಹಾಗೂ ವಿವಾದದಲ್ಲಿಯೇ ಜಾರಿಗೊಂಡಿರುವ ಸಿಎಎಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿರುವ ಸಮಯದಲ್ಲಿ ರಾಯಚೂರು ಜಿಲ್ಲೆಯಿಂದಲೇ ಪೌರತ್ವ ಪ್ರಮಾಣಪತ್ರ ವಿತರಿಸುವುದರ ಮೂಲಕ ಇಲ್ಲಿಂದಲೇ ಸಿಎಎ ಪ್ರಾರಂಭಿಸಬೇಕು ಎನ್ನುವ ತವಕವನ್ನು ಸ್ಥಳೀಯ ಬಿಜೆಪಿ ಮುಖಂಡರು ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಸಂಸದ ಸಂಗಣ್ಣ ಕರಡಿ ಅವರು ಒಂದು ಹೆಜ್ಜೆ ಮುಂದೆಯಿಟ್ಟು ಸಮಾರಂಭದ ಆಯೋಜನೆಯ ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ.

ಪೌರತ್ವ ಕಾಯ್ದೆಗೆ ವಿದೇಶಗಳಲ್ಲೂ ಬೆಂಬಲ ಕ್ರೋಡೀಕರಣ...

ಅಂದು ಬಂದ 700 ಜನ ಈಗ 30 ಸಾವಿರ ಆದರು

1971ರ ಬಾಂಗ್ಲಾದೇಶ ವಿಮೋಚನೆ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಬಾಂಗ್ಲಾದಿಂದ ವಲಸೆ ಬಂದವರಿಗೆ ಸಿಂಧನೂರಿನಲ್ಲಿ ಪುನರ್ವಸತಿ ಕೇಂದ್ರ ಮಾಡಿಕೊಟ್ಟಿದ್ದರು. 1984ರಲ್ಲಿ ಕೆಲವರಿಗೆ ಪೌರತ್ವ ನೀಡಲಾಗಿತ್ತು. ಅದನ್ನು ಬಿಟ್ಟರೆ ಇಲ್ಲಿತನಕ ಅವರಿಗೆ ಪೌರತ್ವ ಲಭಿಸಿರಲಿಲ್ಲ. ಅಂದು ಕೇವಲ 700 ವಲಸಿಗರು ಬಂದು ಇಲ್ಲಿ ನೆಲೆ ಕಂಡುಕೊಂಡಿದ್ದರು. ಇಂದು ಅಲ್ಲಿರುವವರ ಜನಸಂಖ್ಯೆಯೇ 30 ಸಾವಿರ ಗಡಿ ದಾಟಿದೆ. ಇದರಲ್ಲಿ 20 ಸಾವಿರಕ್ಕೂ ಅಧಿಕ ಹಿಂದೂ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರ ಲಭಿಸಿಲ್ಲ. ಇಲ್ಲಿನ ನಿವಾಸಿಗಳಿಗೆ ಪೌರತ್ವ ನೀಡುವಂತೆ ಸಂಸದ ಸಂಕಣ್ಣ ಕರಡಿ ನಡೆಸಿದ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ 2016ರಲ್ಲಿ ಪೌರತ್ವ ನೀಡುವ ಬಗ್ಗೆ ಗೆಜೆಟ್‌ ಹೊರಡಿಸಿತ್ತು. ಆದರೆ ಇನ್ನೂ ಪೌರತ್ವ ಪ್ರಮಾಣ ಪತ್ರ ವಿತರಿಸಿರಲಿಲ್ಲ.

ಮಂಗಳೂರು ಗಲಭೆ : ಹೊರಬಿತ್ತು ಕಮ್ಮಕ್ಕು ನೀಡಿದ ಸ್ಫೋಟಕ ಮಾಹಿತಿ ...

ಹಳೇ ಕಾಯ್ದೆ ಪ್ರಕಾರವೇ ಪೌರತ್ವ ಪ್ರಮಾಣಪತ್ರ

ಸಿಂಧನೂರಿನ ಬಾಂಗ್ಲಾ ನಿರಾಶ್ರಿತರಿಗೆ ಹಳೆಯ ಪೌರತ್ವ ಕಾಯ್ದೆ(1955) ಪ್ರಕಾರವೇ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಹಿಂದಿನ ಕಾಯ್ದೆ ಪ್ರಕಾರ ಭಾರತದ ಪೌರತ್ವ ಪಡೆಯಬೇಕಾದರೆ ಇಲ್ಲಿ 11 ವರ್ಷಗಳ ಕಾಲ ನೆಲೆಸಬೇಕಿತ್ತು. ಈಗಿನ್ನೂ ಅನುಷ್ಠಾನಗೊಳ್ಳಬೇಕಾಗಿರುವ ತಿದ್ದುಪಡಿ ಕಾಯ್ದೆಯ ಪ್ರಕಾರ ಪೌರತ್ವ ಪಡೆಯಬೇಕಾದರೆ 5 ವರ್ಷ ನೆಲೆಸಿದರೂ ಸಾಕಾಗುತ್ತದೆ. 1984ರಿಂದಲೂ ಸಿಂಧನೂರಿನ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ನೀಡುವ ಬಗ್ಗೆ ಕೇಂದ್ರ ಸರ್ಕಾರದಿಂದ 2016ರಲ್ಲಿ ಗೆಜೆಟ್‌ ಹೊರಡಿಸಿರುವುದಿರಿಂದ ಇದು ಹಳೆಯ ಕಾಯ್ದೆಯ ವ್ಯಾಪ್ತಿಗೊಳಪಡಲಿದೆ.