ಬಹುನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ (ಬಿಬಿಸಿ- ಪಿಆರ್‌ಆರ್‌1) ಯೋಜನೆಗೆ ಸಂಬಂಧಿಸಿದಂತೆ ತುಮಕೂರು ರಸ್ತೆ ಮತ್ತು ನಗರದ ಹೊರ ವಲಯದಲ್ಲಿರುವ ಬಳ್ಳಾರಿ ರಸ್ತೆ ಸಂಪರ್ಕಿಸುವ 19.80 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಟೆಂಡರ್‌

ಬೆಂಗಳೂರು : ಬಹುನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ (ಬಿಬಿಸಿ- ಪಿಆರ್‌ಆರ್‌1) ಯೋಜನೆಗೆ ಸಂಬಂಧಿಸಿದಂತೆ ತುಮಕೂರು ರಸ್ತೆ ಮತ್ತು ನಗರದ ಹೊರ ವಲಯದಲ್ಲಿರುವ ಬಳ್ಳಾರಿ ರಸ್ತೆ ಸಂಪರ್ಕಿಸುವ 19.80 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಟೆಂಡರ್‌ ಆಹ್ವಾನಿಸಿದೆ.

Add Asianetnews Kannada as a Preferred SourcegooglePreferred

74 ಕಿ.ಮೀ ರಸ್ತೆ ನಿರ್ಮಿಸುವ ಯೋಜನೆ

ಬೆಂಗಳೂರು ಬ್ಯುಜಿನೆಸ್‌ ಕಾರಿಡಾರ್‌ (ಬಿಬಿಸಿ) 74 ಕಿ.ಮೀ ರಸ್ತೆ ನಿರ್ಮಿಸುವ ಯೋಜನೆಯಾಗಿದ್ದು ಭೂಸ್ವಾಧೀನ ಪ್ರಗತಿಯ ಆಧಾರದ ಮೇಲೆ ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಅಂದಾಜು 3,348 ಕೋಟಿ ರು. ವೆಚ್ಚ ಆಗಲಿದೆ. ಮಾದಾವರ (ನೈಸ್‌ ರಸ್ತೆ ಸಂಪರ್ಕ), ದೊಡ್ಡಬಳ್ಳಾಪುರ ಜಂಕ್ಷನ್‌ ಮತ್ತು ಬಳ್ಳಾರಿ ರಸ್ತೆ (ಕಾಲಿನ್ಸ್‌ ಏರೋಸ್ಪೇಸ್‌ ಸಮೀಪ) ಮೂರು ಪ್ರಮುಖ ಇಂಟರ್‌ಚೇಂಜ್‌ ಒಳಗೊಂಡಿದೆ. ಟೆಂಡರ್ ಅಂತಿಮಗೊಂಡ ನಂತರ ಕಾಮಗಾರಿ ಪೂರ್ಣಗೊಳಿಸಲು 36 ತಿಂಗಳ ಸಮಯ ನಿಗದಿಪಡಿಸಲಾಗಿದೆ.

ಹೆಸರಘಟ್ಟ ಜಂಕ್ಷನ್‌ ಬಳಿ ಅಂಡರ್‌ಪಾಸ್‌, ಸುಮಾರು 5 ಕಿ.ಮೀ ಮೇಲ್ಸೇತುವೆ ಮತ್ತು ಪ್ರಮುಖ ಸೇತುವೆಗಳು, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮಾರ್ಗಗಳಲ್ಲಿ ಮೂರು ರೈಲ್ವೆ ಮೇಲ್ಸೇತುವೆ ಈ ಯೋಜನೆಯ ಭಾಗವಾಗಿದೆ. ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಅವಧಿ ನಿಗದಿಪಡಿಸಲಾಗಿದ್ದು, ಟೆಂಡರ್‌ ಪಡೆದ ಕಂಪನಿಯು 10 ವರ್ಷಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಮಾಡಬೇಕಿದೆ.

ಬೆಂಗಳೂರು ಬಿಜಿನೆಸ್‌ ಕಾರಿಡಾರ್‌ ತುಮಕೂರು ರಸ್ತೆಯ ಮಾದನಾಯಕಹಳ್ಳಿ ಬಳಿಯ ನೈಸ್ ಜಂಕ್ಷನ್ ಸಮೀಪದಿಂದ ಆರಂಭಗೊಂಡು, ಹೆಸರುಘಟ್ಟ ರಸ್ತೆ ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ಹಳೇ ಮದ್ರಾಸ್ ರಸ್ತೆ ವೈಟ್‌ಫೀಲ್ಡ್ ಚನ್ನಸಂದ್ರ ಸರ್ಜಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ತಲುಪಲಿದೆ.

16 ಮೇಲ್ಸೇತುವೆಗಳನ್ನು ನಿರ್ಮಿಸುವ ಯೋಜನೆ

ಹೆಸರಘಟ್ಟ ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರ ವೈಟ್‌ಫೀಲ್ಡ್ ಹೊಸೂರು ರಸ್ತೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಹಾಗೂ 395 ಸಣ್ಣ ಜಂಕ್ಷನ್‌ಗಳ ಮೇಲೆ ಪಿಆರ್‌ಆರ್‌ ಹಾದು ಹೋಗಲಿದೆ. ಜಾರಕಬಂಡೆ ಕೆರೆ ತಿರುಮೇನಹಳ್ಳಿ ಕೆರೆ ಚಿನ್ನಗಾನಹಳ್ಳಿ ಕೆರೆ ಗುಂಜೂರು ಕೆರೆ ಚಿಕ್ಕತೋಗೂರು ಕೆರೆಗಳ ಮೇಲೆ ಸೇರಿದಂತೆ ಒಟ್ಟು 16 ಮೇಲ್ಸೇತುವೆಗಳನ್ನು ನಿರ್ಮಿಸುವ ಯೋಜನೆಯಾಗಿದೆ.

ಎರಡನೇ ಹಂತದಲ್ಲಿ ಬಳ್ಳಾರಿ ರಸ್ತೆ ಮತ್ತು ಹೆಣ್ಣೂರು ರಸ್ತೆಯ ಮೂಲಕ ಹೊರ ಮದ್ರಾಸ್ ರಸ್ತೆಯ ನಡುವಿನ ಮಾರ್ಗದ ನಿರ್ಮಾಣ ಮಾಡಲು ಬಿಡಿಎ ಯೋಜಿಸಿದೆ. ಮೂರನೇ ಹಂತದಲ್ಲಿ ಈ ಮಾರ್ಗವನ್ನು ಹೊಸೂರು ರಸ್ತೆಯವರೆಗೆ ವಿಸ್ತರಿಸಲು ಬಿಡಿಎ ಯೋಜನೆ ರೂಪಿಸಿದೆ.