ಮಾಗಡಿ :[ಸೆ.11]:  ಬೆಂಗಳೂರು ಸಹ​ಕಾರಿ ಹಾಲು ಒಕ್ಕೂಟ (ಬಮುಲ್) ಸೆ.1 ರಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ ಒಂದು ರುಪಾಯಿ ನೀಡ​ಲಿದೆ ಎಂದು ಬಮುಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಮುಲ್‌ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರತಿ ಒಂದು ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ 1 ರು. ನೀಡಬೇಕೆಂದು ತೀರ್ಮಾನಿಸಿದ್ದಾರೆ. ಇದರಿಂದ ಬಮುಲ್‌ ವ್ಯಾಪ್ತಿಗೆ ಒಳಪಡುವ ಬೆಂಗಳೂರು ನಗರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 12 ತಾಲೂಕುಗಳಲ್ಲಿ 1.20 ಲಕ್ಷ ಎಂಪಿಸಿಎಸ್‌ಗಳಿದ್ದು, ಇದರಲ್ಲಿರುವ ಒಟ್ಟು 3.50 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ಬಮೂಲ್‌ ಸಂಸ್ಥೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 25 ರು. ನೀಡುತ್ತಿದೆ. 3.5 ರಿಂದ 4.1 ಫ್ಯಾಟ್‌, 8.5 ಎಸ್‌ಎನ್‌ಎಫ್‌ ಬಂದರೆ 20 ಪೈಸೆ. 4.2 ಫ್ಯಾಟ್‌ ಬಂದರೆ 25 ಪೈಸೆ ನೀಡುತ್ತಿದ್ದು, ಹೆಚ್ಚು ಫ್ಯಾಟ್‌ ಬರುವ ಹಾಲು ಉತ್ಪಾದಕರಿಗೆ ಹಣ ನೀಡುವಂತೆ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಈಗ ಒಂದು ರು. ಹೆಚ್ಚಿಸಿರುವುದರಿಂದ ಹಾಲು ಉತ್ಪಾಕರಿಗೆ 26 ರಿಂದ 27 ರು. ಸಿಗುತ್ತಿದೆ. ಎಲ್ಲಾ ಒಕ್ಕೂಟಗಳಿಗಿಂತ ಬಮುಲ್‌ ರೈತರಿಗೆ ಹೆಚ್ಚು ಹಣ ನೀಡುತ್ತಿದೆ . ಹಾಲು ಉತ್ಪಾದಕರಿಗೆ ಸರ್ಕಾರ 6 ರು. ಪ್ರೋತ್ಸಾಹ ಧನ ನೀಡುತ್ತಿದ್ದು, ಪ್ರತಿ ಲೀಟರ್‌ ಹಾಲಿಗೆ 32 ರು. ಪಡೆಯಲಿದ್ದಾರೆ ಎಂದು ನರಸಿಂಹಮೂರ್ತಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದು ಟನ್‌ ಪಶು ಆಹಾರಕ್ಕೆ ಈ ಹಿಂದೆ ಬಮುಲ್‌ ವತಿಯಿಂದ 600 ರು. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಕಳೆದ ಆಗಸ್ಟ್‌ನಿಂದ 1000 ರು. ಗಳಿಗೆ ಏರಿಕೆ ಮಾಡಲಾಗಿದೆ. ಬಮುಲ್‌ನಲ್ಲಿ ಪ್ರತಿ ದಿನ 17 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಕನಕಪುರದಲ್ಲಿ ಪೌಡರ್‌ ಹಾಗೂ ಚೀಸ್‌ ಪ್ಲಾಂಟ್‌ ಪ್ರಾರಂಭವಾಗಿದೆ. ಚೀಸ್‌ ಮಾರಾಟ ಕಡಿಮೆಯಾಗಿದೆ ಎಂದರು.

ಪ್ರತಿದಿನ 20 ಟನ್‌ ಚೀಸ್‌ ಮಾರಾಟವಾದರೆ ರೈತರಿಗೆ ಇನ್ನೂ ಒಂದು ರು. ಹೆಚ್ಚಿಗೆ ನೀಡಬಹುದು. ಚೀಸ್‌ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ತಜ್ಞ ಮಾರಾಟಗಾರರನ್ನು ನೇಮಿಸಿಕೊಳ್ಳಲು ಬಮುಲ್‌ ಮುಖ್ಯ ವ್ಯವಸ್ಥಾಪಕರ ಗಮನಕ್ಕೆ ತರಲಾಗಿದ್ದು, ವಾರ್ಷಿಕವಾಗಿ ಬಮುಲ್‌ 25 ಕೋಟಿ ರು. ಲಾಭ ಗಳಿಸುತ್ತಿದೆ ಎಂದು ವಿವರಿಸಿದರು.

ಪ್ರತಿದಿನ ಒಕ್ಕೂಟದಲ್ಲಿ 17 ಲಕ್ಷ ಲೀಟರ್‌ ಹಾಲು ಸಂಗ್ರವಾಗುತ್ತಿದ್ದು, ಅದರಲ್ಲಿ 9 ಲಕ್ಷ ಲೀಟರ್‌ ದ್ರವರೂಪದ ಹಾಲು ಹಾಗೂ ಒಂದು ಲಕ್ಷ ಲೀಟರ್‌ ಮೊಸರು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಉಳಿದ ಹಾಲನ್ನು ವಿವಿಧ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಹಾಲು ಉತ್ಪಾದಕರಿಗೆ ಒಂದು ರು. ಹೆಚ್ಚುವರಿಯಾಗಿ ನೀಡಲು ನಿರ್ಧರಿಸುವ ಬಮುಲ್‌ ತೀರ್ಮಾನದಿಂದ ಗ್ರಾಹಕರಿಗೆ ಯಾವುದೇ ಹೊರೆ ಇರುವುದಿಲ್ಲ. ಮಾರುಕಟ್ಟೆಯ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನರಸಿಂಹಮೂರ್ತಿ ಹೇಳಿದರು.