ಕೆ.ಎಂ. ಮಂಜುನಾಥ್‌

ಬಳ್ಳಾರಿ(ಮೇ.21):  ಬಿಸಿಲುನಾಡು ಖ್ಯಾತಿಯ ಬಳ್ಳಾರಿಯೀಗ ಕೊರೋನಾ ‘ಡೇಂಜರಸ್‌ ಸ್ಪಾಟ್‌’ ಆಗಿ ಬದಲಾಗಿದೆ!ನಿತ್ಯ ದೃಢಗೊಳ್ಳುತ್ತಿರುವ ಸೋಂಕಿತರ ಪೈಕಿ ಬಳ್ಳಾರಿ ನಗರದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಸಾವಿನ ಪ್ರಕರಣಗಳಲ್ಲೂ ಅಧಿಕವಾಗಿದ್ದಾರೆ. ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಾಗಲೂ ಬಳ್ಳಾರಿ ನಗರ ಸೋಂಕು ಹಾಗೂ ಸಾವಿನ ಪ್ರಕರಣದಲ್ಲೂ ಮುಂಚೂಣಿಯಲ್ಲಿತ್ತು. ಎರಡನೇ ಅಲೆಯಲ್ಲೂ ಸಹ ನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

ಅವಳಿ ಜಿಲ್ಲೆಯಲ್ಲಿ ಈವರೆಗೆ 1163 ಜನರು ಕೊರೋನಾಗೆ ಬಲಿಯಾಗಿದ್ದು, ಇದರಲ್ಲಿ ಶೇ.63ರಷ್ಟು ಜನರು ಬಳ್ಳಾರಿ ನಗರ ನಿವಾಸಿಗಳೇ ಆಗಿದ್ದಾರೆ ಎಂಬುದು ಆಘಾತಕಾರಿ ಸಂಗತಿ. ಇದನ್ನು ಆರೋಗ್ಯ ಇಲಾಖೆಯೇ ಖಚಿತಪಡಿಸುತ್ತಿದ್ದು, ಜನರ ನಿರ್ಲಕ್ಷ್ಯವೇ ಸೋಂಕು-ಸಾವು ಹೆಚ್ಚಳಕ್ಕೆ ಕಾರಣ ಎನ್ನುತ್ತಿದೆ.

"

15 ದಿನದಲ್ಲಿ 7942 ಪ್ರಕರಣ:

ಕಳೆದ ಹದಿನೈದು ದಿನಗಳಲ್ಲಿ ಅವಳಿ ಜಿಲ್ಲೆಯಲ್ಲಿ ಖಚಿತಗೊಂಡಿರುವ ಸೋಂಕಿತರ ಪೈಕಿ ಬಳ್ಳಾರಿ ನಗರದ ಜನರಿಗೆ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ; ಸಾವಿಗೀಡಾದವರಲ್ಲಿ ಬಳ್ಳಾರಿ ನಗರ ನಿವಾಸಿಗಳು ಅಧಿಕ ಪ್ರಮಾಣದಲ್ಲಿದ್ದಾರೆ. ಮೇ 6ರಿಂದ ಈ ವರೆಗೆ ಅವಳಿ ಜಿಲ್ಲೆಯಲ್ಲಿ 22823 ಸೋಂಕಿತರು ಕಂಡು ಬಂದಿದ್ದು, ಬಳ್ಳಾರಿಯಲ್ಲಿಯೇ 7942 ಪ್ರಕರಣಗಳಿವೆ. ಇದರಲ್ಲಿ ಶೇ. 3.5ರಷ್ಟುಸುತ್ತಮುತ್ತಲ ಗ್ರಾಮೀಣ ಭಾಗದ ಜನರಲ್ಲಿ ಕಂಡು ಬಂದಿರುವ ಸೋಂಕಿನ ಪ್ರಕರಣಗಳಾಗಿವೆ. ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳು ಹೇಳುವ ಪ್ರಕಾರ ನಗರದಲ್ಲಿ ಮನೆ-ಮನೆಗೆ ತೆರಳಿ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ, ಮತ್ತಷ್ಟೂಸೋಂಕಿತರ ಸಂಖ್ಯೆ ಏರಿಕೆಯಾಗಲಿದೆ ಎನ್ನುತ್ತಾರೆ.

ರಾಜ್ಯದಲ್ಲೇ ಅತಿ ದೊಡ್ಡ ಜಿಂದಾಲ್‌ನಲ್ಲಿ 1000 ಬೆಡ್‌ನ ಕೋವಿಡ್‌ ಆಸ್ಪತ್ರೆ

ಚುನಾವಣೆ ಸಹ ಕಾರಣವಾಯ್ತು:

ಮಹಾನಗರ ಪಾಲಿಕೆ ಚುನಾವಣೆ ನಡೆಯದೇ ಹೋಗಿದ್ದರೆ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿರಲಿಲ್ಲ. ಸೋಂಕು ತೀವ್ರತೆ ಪಡೆಯುತ್ತಿರುವ ವೇಳೆಯಲ್ಲಿ ಚುನಾವಣೆ ಎದುರಾಯಿತು. ರಾಜಕೀಯ ನಾಯಕರು ಸಾವಿರಾರು ಜನರ ಸೇರಿಸಿ ಸಭೆ ನಡೆಸಿದರು. ಬೆಂಬಲಿಗರ ಕಟ್ಟಿಕೊಂಡು ಓಣಿ-ಓಣಿ ತಿರುಗಿದರು. ಒಂದಷ್ಟುದಿನಗೂಲಿಯ ಆಸೆಗಾಗಿ ಅನೇಕ ಬಡವರ್ಗದ ಜನರು ರಾಜಕೀಯ ಪಕ್ಷಗಳ ಧ್ವಜ ಹಿಡಿದುಕೊಂಡು ನಗರದಲ್ಲಿ ಸುತ್ತಾಡಿದರು. ರಾಜಕೀಯ ಚಟುವಟಿಕೆಗಳ ವೇಳೆ ಎಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಅನೇಕ ಮಹಿಳೆಯರು ಮಾಸ್ಕ್‌ ಇಲ್ಲದೆ ಧ್ವಜ ಹಿಡಿದುಕೊಂಡು ನಾಯಕರ ಹಿಂದೆ ಸಾಲುಗಟ್ಟಿಹೋಗುತ್ತಿರುವ ದೃಶ್ಯಗಳು ಕಂಡು ಬಂದವು. ಮಾಧ್ಯಮಗಳಲ್ಲಿ ಈ ಕುರಿತು ಟೀಕೆಗಳು ಬಂದರೂ ಲೆಕ್ಕಿಸದೆ, ಚುನಾವಣೆ ಕಾರ್ಯ ಮುಗಿಸಿಕೊಂಡರು. ಪರಿಣಾಮ; ನಗರದಲ್ಲಿ ಸೋಂಕಿತರ ಸಂಖ್ಯೆ ಏರುಮುಖ ಕಂಡಿದ್ದು ನಿಯಂತ್ರಣ ಮೀರುವಷ್ಟುಎಲ್ಲೆಡೆ ವೈರಾಣು ಹಬ್ಬಿಕೊಂಡಿದೆ.

ಸೋಂಕು ತೀವ್ರ ಏರಿಕೆಗೆ ಕಾರಣ

ಅವಳಿ ಜಿಲ್ಲೆಯಲ್ಲಿ ಕೋವಿಡ್‌ ತನ್ನ ಬಾಹು ವಿಸ್ತರಿಸಿಕೊಳ್ಳಲು ಹಾಗೂ ಸೋಂಕಿನ ತೀವ್ರತೆಗೆ ಸಾವಿಗೀಡಾದವರ ಸಂಖ್ಯೆ ಏರಿಕೆಯಾಗಲು ಮುಖ್ಯ ಕಾರಣ ಸೋಂಕಿತರ ನಿರ್ಲಕ್ಷ್ಯತನ ಎಂಬುದು ಗಮನಾರ್ಹ. ಮೊದಲ ಬಾರಿಗೆ ಕೊರೋನಾ ಕಂಡು ಬಂದಾಗ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿತ್ತು. ಸೋಂಕಿತರ ಮನೆಯ ಮೇಲೆ ಕಟ್ಟೆಚ್ಚರ ಇರುತ್ತಿತ್ತು. ಸೋಂಕಿತರ ಕೈಗೆ ಮುದ್ರೆ ಹಾಕಲಾಗುತ್ತಿತ್ತು. ಆದರೆ, ಇದೀಗ ಸೋಂಕಿತರನ್ನು ಹೋಂ ಐಸೋಲೇಷನ್‌ ಮಾಡಲಾಗುತ್ತಿದ್ದು, ಅವರ ಕಡೆ ಗಮನ ಹರಿಸಲಾಗುತ್ತಿಲ್ಲ. ಹೀಗಾಗಿ ಅನೇಕ ಕಡೆ ಸೋಂಕಿತರು ಮನೆಯಿಂದ ಹೊರಗಡೆ ಬರುತ್ತಿದ್ದು, ಎಲ್ಲರಂತೆ ಮಾರುಕಟ್ಟೆಗಳಿಗೂ ತೆರಳಿ ದಿನಸಿ, ಕಾಯಿಪಲ್ಲೆಗಳನ್ನು ಖರೀದಿಸುತ್ತಾರೆ. ಅನೇಕರು ತಮಗೆ ಸೋಂಕು ಇದೆ ಎಂದು ಖಚಿತವಾಗಿದ್ದರೂ ಯಾರಿಗೂ ತಿಳಿಸದೆ ಗೌಪ್ಯವಾಗಿಡುತ್ತಿದ್ದಾರೆ. ಇದರಿಂದಾಗಿ ಕೊರೋನಾ ಎಲ್ಲ ಕಡೆ ಹಬ್ಬುತ್ತಿದ್ದು, ನಿಯಂತ್ರಣ ಕೈ ಮೀರುವ ಹಂತ ತಲುಪಿದೆ.

ಜನರ ನಿರ್ಲಕ್ಷ್ಯದಿಂದಾಗಿಯೇ ಸೋಂಕು ನಗರದಲ್ಲಿ ಹೆಚ್ಚಾಗಲು ಕಾರಣ. ಸಾರ್ವಜನಿಕರು ಈಗಲಾದರೂ ಅರ್ಥ ಮಾಡಿಕೊಂಡು ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಸಹಕರಿಸಬೇಕು. ಸೋಂಕಿತರಿಗೆ ಮಾತ್ರ ಇದರ ಗಂಭೀರತೆ ಗೊತ್ತಾಗಿದೆ ವಿನಾ, ಅನೇಕರು ತಮ್ಮ ನಿರ್ಲಕ್ಷ್ಯ ಮುಂದುವರಿಸಿದ್ದಾರೆ ಎಂದು ಬಳ್ಳಾರಿ ಡಿಎಚ್‌ಒ ಡಾ. ಜನಾರ್ದನ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona