ಬೆಳಗಾವಿ(ಜ.30): ರಮೇಶ್‌ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಡದಿದ್ದರೂ ಪರವಾಗಿಲ್ಲ, ಜಲಸಂಪನ್ಮೂಲ ಖಾತೆ ಬೇಕೆ ಬೇಕು ಎಂದು ವರಿಷ್ಠರ ಬಳಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಪಟ್ಟು ಹಿಡಿದಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ಅಣ್ಣ ರಮೇಶ್ ಜಾರಕಿಹೊಳಿ‌ಗೆ ಜಲಸಂಪನ್ಮೂಲ ಖಾತೆ ನೀಡುವಂತೆ ವರಿಷ್ಠರ ಬಳಿ ಬಾಲಚಂದ್ರ ಜಾರಕಿಹೊಳಿ‌ ಒತ್ತಡ ಹಾಕುತ್ತಿದ್ದಾರೆ ಎಂದು ಸುವರ್ಣನ್ಯೂಸ್‌ಗೆ ಬಾಲಚಂದ್ರ ಜಾರಕಿಹೊಳಿ‌ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕ್ಷೇತ್ರದ ಜನರಿಗೆ ಮಾತು ಕೊಟ್ಟು ಅಣ್ಣನನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ನೀರಿನ ಸೇವೆ ಮಾಡುವ ಸೌಭಾಗ್ಯ ನಿಮ್ಮ ಶಾಸಕರಿಗೆ ಸಿಗುತ್ತೆ ಎಂದು ಹೇಳಿದ್ದೇನೆ. ಉಪಚುನಾವಣೆ ವೇಳೆ ಗೋಕಾಕ ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ ಡಿಸಿಎಂ ಹುದ್ದೆ ನೀಡದಿದ್ದರೂ ಪರವಾಗಿಲ್ಲ ಜಲಸಂಪನ್ಮೂಲ ಖಾತೆಯನ್ನಾದರೂ ನೀಡಿ ಎಂದು ಬಿಜೆಪಿ ವರಿಷ್ಠರಿಗೆ ಬಾಲಚಂದ್ರ ಜಾರಕಿಹೊಳಿ‌ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ಸಿಎಂ ಯಡಿಯೂರಪ್ಪ ಬೆಳಗಾವಿ ಪ್ರವಾಸ ವೇಳೆಯೂ ಬಾಲಚಂದ್ರ ಜಾರಕಿಹೊಳಿ‌ ಗೈರಾಗಿದ್ದರು. ರಮೇಶ್ ಜಾರಕಿಹೊಳಿ‌ಗೆ ಜಲಸಂಪನ್ಮೂಲ ಖಾತೆ ನೀಡಲು ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಅಂತಾರಾಜ್ಯ ಜಲವಿವಾದಗಳು ಇದ್ದು ಖಾತೆ ನಿಭಾಯಿಸಲು ಅನುಭವ ಮುಖ್ಯವಾಗಿದೆ. ರಮೇಶ್ ಜಾರಕಿಹೊಳಿಗೆ ಅನುಭವದ ಕೊರತೆ ಇದೆ ಅಂತ ಪಕ್ಷದ ಕೆಲವು ವರಿಷ್ಠರ ಬಳಿ ಹೇಳಿದ್ದಾರೆ ಎನ್ನಲಾಗಿದೆ. 

ಆದರೆ, ಅಣ್ಣನ ರಮೇಶ್ ಪರ ಬ್ಯಾಟಿಂಗ್‌ ನಡೆಸಿರುವ ಬಾಲಚಂದ್ರ ಜಾರಕಿಹೊಳಿ ಅದೇನೇ ಆಗಲಿ ರಮೇಶ್‌ಗೆ ಜಲಸಂಪನ್ಮೂಲ ಖಾತೆಯೇ ನೀಡಿ ಅಂದಿದ್ದಾರಂತೆ ಎಂದು ತಿಳಿದು ಬಂದಿದೆ.