ಶ್ರೀ ರಾಮೇಶ್ವರ ಹೋಟೆಲ್ನಲ್ಲಿ ಕೇವಲ 12 ರೂಪಾಯಿಗೆ ಇಡ್ಲಿ, ಪುರಿ, ಉಪ್ಪಿಟ್ಟು ಮತ್ತು ಮಿರ್ಚಿ ಬಜ್ಜಿ ನೀಡಲಾಗುತ್ತಿದೆ. ದುಬಾರಿ ಜಗತ್ತಿನಲ್ಲೂ ಮಾಲೀಕ ಶಿವಬಸಪ್ಪ ತಮ್ಮ ಮಗನೊಂದಿಗೆ ಸೇರಿ ಕೆಲಸಗಾರರಿಲ್ಲದೆ ಹೋಟೆಲ್ ನಡೆಸುತ್ತಾ ಗ್ರಾಹಕರ ತೃಪ್ತಿಯೇ ಮುಖ್ಯ ಎಂದು ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದ್ದಾರೆ.
Karnataka Trending Video: ಇಂದು ಹೋಟೆಲ್ ಹೋಗಿ ತಿಂಡಿ ಮಾಡಿದ್ರೆ 100 ರೂಪಾಯಿ ಹೋಗುತ್ತದೆ. ಈ ದುಬಾರಿ ದುನಿಯಾದಲ್ಲಿ ಕೆಲ ಹೋಟೆಲ್ಗಳು ಇಂದಿಗೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ತಮ್ಮ ಗ್ರಾಹಕರಿಗೆ ನೀಡುತ್ತಾರೆ. ಕಳೆದ 35 ವರ್ಷಗಳಿಂದ ಹೋಟೆಲ್ ನಡೆಸುತ್ತಿರೋ ಇವರು, ಗ್ರಾಹಕರು ತೃಪ್ತಿಯಾಗಿ ಇಲ್ಲಿಂದ ಹೋದ್ರೆ ಸಾಕು ಅಂತಾರೆ. ಬೆಲೆಗಳು ಹೆಚ್ಚಾಗುತ್ತಿದೆ ಅನ್ನೋದು ಗೊತ್ತಿದೆ. ಆದ್ರೂ ನಾವು ಇನ್ನಿತರ ವಿಧಾನಗಳ ಮೂಲಕ ಹಣ ಉಳಿತಾಯ ಮಾಡ್ಕೊಂಡು ಕಡಿಮೆ ಬೆಲೆಯಲ್ಲಿ ತಿಂಡಿ ನೀಡುತ್ತವೆ ಅಂತಾರೆ.
ಇಲ್ಲಿ ಸಿಗುತ್ತೆ ರುಚಿಯಾದ ಪುರಿ, ಇಡ್ಲಿ, ಉಪ್ಪಿಟ್ಟು, ಬಜ್ಜಿ
ಈ ಹೋಟೆಲ್ನಲ್ಲಿ ನಿಮಗೆ ರುಚಿಯಾದ ಪುರಿ ಮತ್ತು ಚಟ್ನಿ, ಇಡ್ಲಿ ಸಾಂಬಾರ್, ಉಪ್ಪಿಟ್ಟು ಮತ್ತು ಮಿರ್ಚಿ ಬಜ್ಜಿ ಸಿಗುತ್ತದೆ. ಗರಿಗರಿಯಾದ ಪುರಿಯನ್ನು ಹುರಿಗಡಲೆ (ಪುಟಾಣಿ)ಚಟ್ನಿಯಲ್ಲಿ ಅದ್ದಿ ತಿಂದ್ರೆ ಸ್ವರ್ಗಕ್ಕೆ ಮೂರೇ ಗೇಣು. ಇನ್ನುಳಿದಂತೆ ಮೃದುವಾದ ಇಡ್ಲಿ ಮೇಲೆ ನುಗ್ಗೆಕಾಯಿ ಸಾಂಬಾರ್ ಹಾಕಿ, ಪಕ್ಕದಲ್ಲಿ ಕೊಡುವ ತೆಂಗಿನಕಾಯಿ ಚಟ್ನಿ ಕಾಂಬಿನೇಷನ್ ನಿಮಗೆ ರೋಮಾಂಚನವನ್ನ ನೀಡುತ್ತದೆ. ಸಾಫ್ಟ್ ಉಪ್ಪಿಟ್ಟು ಸಹ ಈ ಹೋಟೆಲ್ನಲ್ಲಿ ಸಿಗುತ್ತದೆ. ಇಲ್ಲಿಯ ಜನರು ಸಂಜೆ ಆದ್ರೆ ಮಿರ್ಜಿ ಬಜ್ಜಿಯನ್ನು ಹುಡುಕಿಕೊಂಡು ಬರುತ್ತಾರೆ. ಯಾವುದು ಈ ಹೋಟೆಲ್? ಎಲ್ಲಿದೆ ಎಂದು ನೋಡೋಣ ಬನ್ನಿ.
ಎಲ್ಲಿದೆ ಹೋಟೆಲ್?
ವೈರಲ್ ವಿಡಿಯೋ ಪ್ರಕಾರ, ಈ ಹೋಟೆಲ್ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಜಿಲ್ಲೆಯ ಹುನ್ನೂರ ಗ್ರಾಮದಲ್ಲಿದೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರೋ ಪ್ರವೀಣ್ (Praveen Pattar) ಎಂಬವರು ತಮ್ಮ ಇನ್ಸ್ಟಾಗ್ರಾಂನಲ್ಲಿ (praveenjkd1) 12 ರೂಪಾಯಿಗೆ ರುಚಿಯಾದ ತಿಂಡಿಯನ್ನು ನೀಡುವ ಶ್ರೀ ರಾಮೇಶ್ವರ ಹೋಟೆಲ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು, ಹೋಟೆಲ್ ಮಾಲೀಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಹೋಟೆಲ್ ಮಾಲೀಕರು ಏನು ಹೇಳುತ್ತಾರೆ?
ಕಳೆದ 35 ವರ್ಷಗಳಿಂದ ಈ ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದೇನೆ. ನಮ್ಮಲ್ಲಿ ಪುರಿ, ಇಡ್ಲಿ, ಉಪ್ಪಿಟ್ಟು ಮತ್ತು ಬಜ್ಜಿ ಸಿಗುತ್ತದೆ. ಈ ತಿಂಡಿಗೆ ಜೊತೆಯಾಗಿ ಕಡಲೆಹಿಟ್ಟಿನ ಚಟ್ನಿ, ಕಾಯಿ ಚಟ್ನಿ ಮತ್ತು ಸಾಂಬಾರ್ ಕೊಡುತ್ತವೆ. ಈ ಮೊದಲು 5 ರಿಂದ 6 ರೂಪಾಯಿಯಲ್ಲಿ ತಿಂಡಿ ಮಾರಾಟ ಮಾಡಲಾಗುತ್ತಿತ್ತು. ಈಗ ಬೆಲೆ 12 ರೂಪಾಯಿಗೆ ತಲುಪಿದೆ. ಹೋಟೆಲ್ ಆರಂಭದಲ್ಲಿ ತಿಂಡಿಯನ್ನು ಕೇವಲ 3 ರೂಪಾಯಿಗೆ ನೀಡಲಾಗುತ್ತಿತ್ತು. ಹಾಗೆಯೇ ಹೋಟೆಲ್ ಕೆಲಸಕ್ಕೆ ಯಾವುದೇ ಕೆಲಸಗಾರರನ್ನು ಇಟ್ಕೊಂಡಿಲ್ಲ. ಮಗ ಮಲ್ಲಪ್ಪನೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಜನರು ಇಲ್ಲಿಗೆ ಬಂದು ತಿಂಡಿ ತಿಂತಾರೆ. ಇದರೊಂದಿಗೆ ದಿನಕ್ಕೆ ಸುಮಾರು ನೂರು ಪ್ಲೇಟ್ ಪಾರ್ಸೆಲ್ ಮಾಡುತ್ತೇವೆ ಎಂದು ಶ್ರೀ ರಾಮೇಶ್ವರ ಹೋಟೆಲ್ ಮಾಲೀಕರಾದ ಶಿವಬಸಪ್ಪ ಕಕ್ಕೇವಾಡಿ ಹೇಳುತ್ತಾರೆ.
ಈ ವೈರಲ್ ವಿಡಿಯೋ ನೋಡಿರುವ ಜನರು, ಇದು ನಮ್ಮೂರಿನ ಹೆಮ್ಮೆಯ ಹೋಟೆಲ್. ನಿಜವಾಗ್ಲೂ ಇಲ್ಲಿ ನಿಮಗೆ 12 ರೂಪಾಯಿಗೆ ತಿಂಡಿ ಸಿಗುತ್ತದೆ. ನಾನು ಬಾಲ್ಯದಿಂದಲೂ ಇಲ್ಲಿ ತಿಂಡಿ ಸೇವಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಬೆಂಗಳೂರಿನಲ್ಲೊಂದು ಸಣ್ಣ ಟೀ ಕುಡಿದ್ರೆ 20 ರಿಂದ 25 ರೂಪಾಯಿ ಕೊಡಬೇಕು ಆದ್ರೆ ಇಲ್ಲಿ 12 ರೂಪಾಯಿಗೆ ತಿಂಡಿ ಅಂದ್ರೆ ನಂಬಲೇಬೇಕು. ನಾವು 2008 to 2012 ವೆರೆಗೆ ಇದೆ ಹೋಟೆಲ್ ನಲ್ಲಿ ಟಿಫನ್ ಮಾಡಿದ್ದು, one of the best hotel. ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






