ಹುನಗುಂದ: ಕೂಲಿಕಾರರ ಜೊತೆ ಕೂಲಿಯಾಗಿ ದುಡಿದ ಜಿಪಂ ಸಿಇಒ!
ಕೂಲಿಕಾರರೊಂದಿಗೆ ಕೂಲಿಯಾದ ಸಿಇಒ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮುಗುನೂರು ಗ್ರಾಪಂ ವ್ಯಾಪ್ತಿಯ ಜಮೀನಿನಲ್ಲಿ ನಡೆದಿದ್ದ ಕೆಲಸದ ವೇಳೆ ಭೇಟಿ| ಕೈಯಲ್ಲಿ ಸಲಿಕೆ, ತಲೆ ಮೇಲೆ ಮಣ್ಣಿನ ಬುಟ್ಟಿ ಹೊತ್ತ ಸಿಇಒ| ಬಸರಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಶಾಲೆಗಳಿಗೆ ತೆರಳಿ ಶೌಚಾಲಯ ವೀಕ್ಷಣೆ|
ಬಾಗಲಕೋಟೆ(ಫೆ. 21): ಕೂಲಿ ಕಾರ್ಮಿಕರೊಂದಿಗೆ ತಾವು ಸಹ ಕೆಲಸದಲ್ಲಿ ಸಾಥ್ ನೀಡುವ ಮೂಲಕ ಜಿಪಂ ಸಿಇಒ ಗಂಗೂಬಾಯಿ ಮಾನಕರ ಕಾರ್ಮಿಕರಿಗೆ ಪ್ರೇರಣೆಯಾಗಿದ್ದಾರೆ.
ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗುರುವಾರ ಹುನಗುಂದ ತಾಲೂಕಿನ ಮುಗುನೂರು ಗ್ರಾಪಂ ವ್ಯಾಪ್ತಿಯ ಜಮೀನಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಪಿಆರ್‌ಇಡಿ ವತಿಯಿಂದ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಂ ಕಾಮಗಾರಿ ವೀಕ್ಷಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ಜಿಪಂ ಸಿಇಒ ಮಾನಕರ ಅವರು ಕಾರ್ಮಿಕರೊಂದಿಗೆ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಕೊಂಡು ಟ್ರ್ಯಾಕ್ಟರ್‌ಗಳಲ್ಲಿ ಹಾಕುವ ಮೂಲಕ ಕಾರ್ಮಿಕರಿಗೆ ಸಾಥ್ ನೀಡಿದ್ದಾರೆ.
ಕಾರ್ಮಿಕರಿಗೆ ಕೇವಲ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಸಿಗುವುದಲ್ಲದೇ ತಮ್ಮ ಜಮೀನುಗಳಲ್ಲಿ ಕೃಷಿ ಹಾಗೂ ತೋಟಗಾರಿಕೆಯ ವಿವಿಧ ಚಟುವಟಿಕೆಗಳನ್ನು ಕೈಗೊಂಡು ತಾವೇ ಕೆಲಸ ಮಾಡಿ ಕೂಲಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಉದ್ಯೋಗ ಖಾತರಿ ಯೋಜನೆ ದುಡಿಯುವ ಕೈಗಳಿಗೆ ಮಾತ್ರವಲ್ಲದೇ ರೈತರಿಗೂ ವರದಾನವಾಗಿ ಪರಿಣಮಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮಾನಕರ ತಿಳಿಸಿದರು. ಕೃಷಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಕೃಷಿ ಹೊಂಡ ಕಾಮಗಾರಿಗಳನ್ನು ಸಹ ವೀಕ್ಷಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಗನೂರು ವ್ಯಾಪ್ತಿಯ ಬಸರಿಕಟ್ಟಿಗ್ರಾಮಕ್ಕೆ ಭೇಟಿ ನೀಡಿ ಶಾಲೆಗಳಿಗೆ ತೆರಳಿ ಶೌಚಾಲಯಗಳನ್ನು ವೀಕ್ಷಿಸಿದರು. ನಂತರ ವಿವಿಧ ತರಗತಿಗಳ ಕೊಠಡಿಗೆ ತೆರಳಿ ಮಕ್ಕಳ ಕಲಿಕಾ ಮಟ್ಟವನ್ನು ಪರಿಶೀಲಿಸಿದರು. ಸರಕಾರದಿಂದ ಸಿಗುವ ಸೌಲಭ್ಯಗಳ ದೊರೆಯುತ್ತಿರುವ ಬಗ್ಗೆ ಕೇಳಿದರು. ನಂತರ ಬಸರಿಕಟ್ಟಿಯಿಂದ ಹೊರಟಾಗ ಹಾದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ನಡತೋಪುಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಎಂ.ಎಂ.ಸಜ್ಜನ ಅವರು ಪ್ರಸಕ್ತ ಸಾಲಿನಲ್ಲಿ 190 ಕಿಮೀ ನವರೆಗೆ ಗುರಿ ಹೊಂದಲಾಗಿತ್ತು. ಈ ಪೈಕಿ 192 ಕಿ.ಮೀ ನಷ್ಟುಗಿಡಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ರಕ್ಕಸಗಿ ಗ್ರಾಪಂ ವ್ಯಾಪ್ತಿಯ ಹೊನ್ನರಹಳ್ಳಿ ಗ್ರಾಮಕ್ಕೆ ತೆರಳಿದ ಮಾನಕರ ಸ್ವ-ಸಹಾಯ ಗುಂಪುಗಳಿಗೆ ನಿರ್ಮಿಸಲಾದ ವರ್ಕ ಶೆಡ್ ವೀಕ್ಷಿಸಿದರು. ವರ್ಕಶೆಡ್‌ನಲ್ಲಿರುವ ಸ್ವ-ಸಹಾಯ ಗುಂಪುಗಳಿಗೆ ಇರುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಅವರು ತಯಾರಿಸಿದ ಬ್ಯಾಗ್‌ಗಳನ್ನು ವೀಕ್ಷಿಸಿ, ವಿವಿಧ ಕೌಶಲ ತರಬೇತಿ, ಸಾಲ ಸೌಲಭ್ಯ, ಆರ್ಥಿಕ ಸಹಾಯಧನ, ತಿಂಡಿ ತಿನಿಸುಗಳ ತಯಾರಿಸುವುದರಿಂದ ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಸ್ವ-ಸಹಾಯ ಗುಂಪುಗಳಿಗೆ ವರ್ಕಶೆಡ್ ನಿರ್ಮಿಸಿಕೊಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 6 ವರ್ಕ್‌ಶೆಡ್ ಕಾಮಗಾರಿಗಳು ನಡೆಸಲಾಗುತ್ತಿದೆ. ಜಮಖಂಡಿ ತಾಲೂಕಿನ ಕಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ 2, ಸಾವಳಗಿಯಲ್ಲಿ 1, ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಹಾಗೂ ತುಳಸಿಗೇರಿಯಲ್ಲಿ ತಲಾ 1 ಹಾಗೂ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಪಂ ವ್ಯಾಪ್ತಿಯ ಹೊನ್ನರಹಳ್ಳಿಯಲ್ಲಿ 1 ನಿರ್ಮಿಸಲಾಗುತ್ತಿದೆ ಎಂದು ಮಾನಕರ ಹೇಳಿದ್ದಾರೆ.
ಭೇಟಿ ಸಂದರ್ಭದಲ್ಲಿ ಹುನಗುಂದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ, ಪಂಚಾಯತ ರಾಜ್ ಇಲಾಖೆಯ ಸಹಾಯಕ ಅಭಿಯಂತರ ಎಂ.ಎಂ.ಪಾಟೀಲ, ಎಡಿಪಿಸಿಯ ನಾಗರಾಜ ರಾಜನಾಳ, ಜಿಲ್ಲಾ ಐಇಸಿ ಸಂಯೋಜಕ ಪವನ ಕುಲಕರ್ಣಿ, ಜಿಲ್ಲಾ ಎಂ.ಐ.ಎಸ್ ಸಂಯೋಜಕ ಉಜ್ವಲ ಸಕ್ರಿ, ತಾಲೂಕು ಐಇಸಿ ಸಂಯೋಜಕ ಸುವರ್ಣ ಭಜಂತ್ರಿ, ತಾಂತ್ರಿಕ ಸಯೋಜಕ ವಿಜಯಕುಮಾರ ಚಿಂದಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಎಂ.ಎಸ್.ಗೋಡಿ, ಆವಿನ ಹುಲ್ಲಪ್ಪ ಸೇರಿದಂತೆ ಇತರರು ಇದ್ದರು.
ಅಮೀನಗಡದ ಕರದಂಟು ಸವಿದ ಸಿಇಒ
ಅಮೀನಗಡಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರು ಅಮೀನಗಡದ ಮೂಲ ಕರದಂಟು ತಯಾರಕರ ದಿ.ಸಾವಳಿಗೆಪ್ಪ ಐಹೊಳೆ ಅವರ ಮಗ ಬಸವರಾಜ ಐಹೊಳೆ ಅವರ ವಿಜಯಾ ಕರದಂಟಿನ ಅಂಗಡಿಗೆ ತೆರಳಿ ಬಗೆ ಬಗೆಯ ಕರದಂಟನ್ನು ಸವಿದರು. ಗ್ರಾಮೀಣ ಭಾಗದಲ್ಲಿ ತಯಾರಾಗುತ್ತಿರುವ ಈ ಕರದಂಟು ಬೆಂಗಳೂರು ನಗರದಲ್ಲಿ ಮಳಿಗೆಯನ್ನು ತೆರೆದಿರುವುದನ್ನು ಕಂಡು ಶ್ಲಾಘನೆ ವ್ಯಕ್ತಪಡಿಸಿದರು. ಇನ್ನು ಹೆಚ್ಚಿನ ರೀತಿಯಲ್ಲಿ ದೊಡ್ಡ ಉದ್ಯಮವಾಗಿ ಬೆಳೆಯಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಸಾವಳಿಗೆಪ್ಪನವರ ಮೊಮ್ಮಗನಾದ ಸಂತೋಷ ಐಹೊಳೆ ಅವರು ವಿವಿಧ ಖಾದ್ಯಗಳ ಮಾಹಿತಿಯನ್ನು ನೀಡಿದರು.