ಬಾಗಲಕೋಟೆ: ಹೆಣ್ಣು ಭ್ರೂಣಲಿಂಗ ಪತ್ತೆ, ಆಸ್ಪತ್ರೆ ಮೇಲೆ ಜಿಪಂ ಸಿಇಒ ದಾಳಿ

ಹೆಣ್ಣು ಭ್ರೂಣಲಿಂಗ ಪತ್ತೆ ನಡೆಸುತ್ತಿದ್ದ ಆಸ್ಪತ್ರೆ ಮೇಲೆ ದಾಳಿ| ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಬಸವ ಪಾಲಿ ಕ್ಲಿನಿಕ್‌| ವೈದ್ಯ ಮೋಹನ ಚಟ್ಟೇರ ವಿರುದ್ಧ ಪ್ರಕರಣ ದಾಖಲು|ಬಿ.ಎ.ಎಂ.ಎಸ್‌. ವೈದ್ಯೆ ಡಾ.ನಿವೇದಿತಾ ವಿರುದ್ಧ ಸಹ ತನಿಖೆಗೆ ಕ್ರಮ|

Bagalkot Zilla Panchayat CEO Gangubai Manakar Attack on Hospital for Female Fetal Detection

ಬಾಗಲಕೋಟೆ(ಮಾ.01): ಕಾನೂನು ಬಾಹಿರವಾಗಿ ಹೆಣ್ಣು ಭ್ರೂಣಲಿಂಗ ಪತ್ತೆ ನಡೆಸುತ್ತಿದ್ದ ಬೀಳಗಿಯ ಬಸವ ಕ್ಲಿನಿಕ್‌ ಮೇಲೆ ಜಿಪಂ ಮುಖ್ಯಕಾರ್ಯನಿರ್ವಹಣಾ​ಕಾರಿ ಗಂಗೂಬಾಯಿ ಮಾನಕರ ನೇತೃತ್ವದ ತಂಡ ಅ​ಧೀಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶನಿವಾರ ದಾಳಿ ನಡೆಸಿ ಬಸವ ಪಾಲಿ ಕ್ಲಿನಿಕ್‌ನ ವೈದ್ಯ ಮೋಹನ ಚಟ್ಟೇರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೇ ಇನ್ನೋರ್ವ ಬಿ.ಎ.ಎಂ.ಎಸ್‌. ವೈದ್ಯೆ ಡಾ.ನಿವೇದಿತಾ ವಿರುದ್ಧ ಸಹ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಪ್ರಕರಣಗಳ ಬಗ್ಗೆ ಸೂಕ್ಷ್ಮವಾಗಿ ಸಿಇಒ ಅವರು ನಿಗಾವಹಿಸಿದ್ದು, ಇಂದು ಜಿಲ್ಲಾ ಆರೋಗ್ಯಾ​ಧಿಕಾರಿ ಆನಂತ ದೇಸಾಯಿ ಹಾಗೂ ರೆಡಿಯೋಲಾಜಿಸ್ಟ್‌ ತಂಡದ ಜೊತೆಗೆ ದಿಢೀರವಾಗಿ ಆಸ್ಪತ್ರೆಗೆ ದಾಳಿ ನಡೆಸಿದಾಗ ಅನ​ಧಿಕೃತ ಭ್ರೂಣಲಿಂಗ ಪತ್ತೆ ಮಾಡುವ ಬಗ್ಗೆ ದಾಖಲೆ ಲಭಿಸಿವೆ. ವೈದ್ಯನ ವಿರುದ್ಧ ಬೀಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿರುವುದಾಗಿ ಸಿಇಒ ಗಂಗೂಬಾಯಿ ಮಾನಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಳಕಲ್ಲನಲ್ಲಿ ಕಳೆದೆರಡು ವರ್ಷಗಳ ಹಿಂದೆ ಇಂತಹ ಪ್ರಕರಣ ದಾಖಲಾಗಿತ್ತು. ಕಳೆದೆರಡು ವರ್ಷಗಳಿಂದೀಚೆ ರಾಜ್ಯದಲ್ಲಿ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ. ಅಲ್ಲದೇ ಇಂಥಹ ಅನ​ಧೀಕೃತ ಭ್ರೂಣಲಿಂಗ ಪತ್ತೆ ಪ್ರಕರಣಗಳು ನಡೆಯದಂತೆ ಹಲವಾರು ಜಾಗೃತಿ ಕಾರ‍್ಯಕ್ರಮಗಳು ಹಮ್ಮಿಕೊಂಡಿದ್ದರೂ ಪುನಃ ಈಗ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಇಒ ಹಾಗೂ ಡಿಎಚ್‌ಒ ಅವರುಗಳಿಗೆ ಅಧಿಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಡಾ.ಪಟ್ಟಣಶೆಟ್ಟಿ, ಡಾ.ರುದ್ರೇಶ ಹಾಗೂ ಡಾ.ಅನಿಲ ಕಾನಡೆ, ರೆಡಿಯೋಲಾಜಿಸ್ಟಗಳು ಸೇರಿದಂತೆ ವೈದ್ಯರ ತಂಡ ದಾಳಿ ನಡೆಸಿದೆ.

ತಂಡವು ದಾಳಿ ನಡೆಸಿದಾಗ ಯಾವುದೇ ರೀತಿಯ ನಿಗದಿತ ರಜಿಸ್ಟರ್‌ ಇರಲಿಲ್ಲ. ಕೇವಲ ಕೆಲ ರೋಗಿಗಳು ಹೆಸರು ಮಾತ್ರ ನಮೂದಿಸಲಾಗಿದ್ದು, ಗರ್ಭದ ಸ್ಕಾ್ಯನಿಂಗ್‌ ಚಿತ್ರಗಳು ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಇದ್ದವು. ವೈದ್ಯರು ನೀಡುವ ಚಿತ್ರಗಳು ಭ್ರೂಣಲಿಂಗ ಪತ್ತೆಯ ವರದಿಯು ಸಹ ಸರಿಯಾಗಿರಲಿಲ್ಲ. ಇಂಥಹ ಪ್ರಕರಣಗಳಿಂದಾಗಿ ಹೆಣ್ಣು ಭ್ರೂಣ ಹತ್ಯೆ ಗರ್ಭಪಾತ ನಡೆಯುವ ಪ್ರಕರಣಗಳು ಹೆಚ್ಚಾಗುತ್ತದೆಯೆಂದು ಸಿಇಒ ಮಾನಕರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂಥ ಅನಿರೀಕ್ಷಿತ ದಾಳಿಗಳನ್ನು ಸಹ ಆಗಾಗ ಕೈಗೊಂಡು ಅನ​ಧೀಕೃತ ಭ್ರೂಣಲಿಂಗ ಪತ್ತೆಗೆ ಕಡಿವಾಣ ಹಾಕಲಾಗುವುದೆಂದು ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios