ಸಂತ್ರಸ್ತರು ಶಾಲೆಯಲ್ಲಿ, ಮಕ್ಕಳು ಬಯಲಲ್ಲಿ!

ಸಂತ್ರಸ್ತರು ಶಾಲೆಯಲ್ಲಿ, ಮಕ್ಕಳು ಬಯಲಲ್ಲಿ!| ಧನ್ನೂರಿನ ಕರ್ನಾಟಕ ಶಾಲೆ ಕೊಠಡಿಗಳಲ್ಲಿ ಸಂತ್ರಸ್ತರ ವಾಸ| ಶಾಲೆ ಮುಂಭಾಗದ ಬಯಲಲ್ಲೇ ಮಕ್ಕಳಿಗೆ ಪಾಠ

Bagalkot Flood Victims Staying in Schools Where As Students Are Learning Lessons In ground

ಮಲ್ಲಿಕಾರ್ಜುನ ದರಗಾದ

ಹುನಗುಂದ[ಸೆ.23]: ಉತ್ತರ ಕರ್ನಾಟಕದಲ್ಲಿ ತಿಂಗಳ ಹಿಂದೆ ಅಬ್ಬರಿಸಿದ್ದ ಮಹಾಪ್ರವಾಹ ಶಾಂತವಾಗಿ ಹಲವು ದಿನಗಳಾದರೂ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿಲ್ಲ. ಪರಿಣಾಮ ಸಂತ್ರಸ್ತರು ಪರಿಹಾರ ಕೇಂದ್ರವಾಗಿದ್ದ ಶಾಲಾ ಕೊಠಡಿಗಳಲ್ಲೇ ಈಗಲೂ ವಾಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಬಯಲಲ್ಲೇ ಪಾಠ ಕೇಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಇದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಕಂಡು ಬರುತ್ತಿರುವ ಸದ್ಯದ ಸ್ಥಿತಿ. ಅಧಿಕಾರಿಗಳು ಮತ್ತು ಸಂತ್ರಸ್ತ ಕುಟುಂಬಗಳ ಸಂಘರ್ಷ ಶಾಲಾ ವಿದ್ಯಾರ್ಥಿಗಳ ಪಾಠ ಬೋಧನೆಯ ಮೇಲೆ ಪರಿಣಾಮ ಬೀರಿದೆ.

ಕೃಷ್ಣಾ ನದಿಯಿಂದ ಸಂತ್ರಸ್ತರಾದ ಧನ್ನೂರ ಗ್ರಾಮದ ಸುಮಾರು 22 ಕುಟುಂಬಗಳ 110 ಜನರು ಶಾಲೆಯ ಆರೇಳು ಕೊಠಡಿಗಳನ್ನು ಕಳೆದ ಒಂದು ತಿಂಗಳಿನಿಂದ ವಾಸಿಸುತ್ತಿರುವುದರಿಂದ ವಿದ್ಯಾರ್ಥಿಗಳು ಬಯಲಲ್ಲಿ ಕುಳಿತು ಶಿಕ್ಷಣ ಪಡೆಯುತ್ತಿದ್ದಾರೆ. ಇದು ಮಕ್ಕಳ ಗುಣಮಟ್ಟದ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಶಿಕ್ಷಕರು ಮತ್ತು ಪಾಲಕರನ್ನು ಕಾಡುತ್ತಿದೆ.

ಎಲ್‌ಕೆಜಿಯಿಂದ ಪಿಯುಸಿವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ ಸರ್ಕಾರ ತಾಲೂಕಿಗೊಂದು ಮಂಜೂರು ಮಾಡಿದ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಇದು ಕೂಡಾ ಒಂದಾಗಿದೆ. ಎಲ್‌ಕೆಜಿಯಿಂದ ಪಿಯುಸಿವರೆಗೆ ಸದ್ಯ 653 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿರುವ 21 ಕೊಠಡಿಗಳು ವಿದ್ಯಾರ್ಥಿಗಳ ಪಾಠ ಬೋಧನೆಗೆ ಸಾಲುತ್ತಿಲ್ಲ.

ಬಯಲಲ್ಲಿ ಪಾಠ:

ಈ ಮೊದಲೇ ವಿದ್ಯಾರ್ಥಿಗಳ ಪಾಠ ಬೋಧನೆಗೆ ಕೊಠಡಿಗಳ ಕೊರತೆ ಎದುರಿಸುತ್ತಿರುವ ಶಿಕ್ಷಕರು ಸಂತ್ರಸ್ತ ಕುಟುಂಬಗಳ ಅತಿಕ್ರಮಣದಿಂದ ಮತ್ತಷ್ಟುತೊಂದರೆಗೆ ಸಿಲುಕಿದ್ದಾರೆ. ಈ ಸ್ಥಿತಿಯಿಂದ ಅಸಹಾಯಕರಾಗಿ ಕೆಲವು ತರಗತಿಗಳ ಪಾಠ ಬೋಧನೆಯನ್ನು ಶಾಲಾ ಆವರಣದಲ್ಲಿರುವ ಮರದ ಕೆಳಗೆ, ಶಾಲಾ ಪಡಸಾಲೆಯಲ್ಲಿ ನೀಡುತ್ತಿದ್ದಾರೆ. ಶಾಲೆಯೂ ಹುನಗುಂದ-ಮುದ್ದೇಬಿಹಾಳ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವುದರಿಂದ ಈ ರಸ್ತೆಯಲ್ಲಿ ಓಡಾಡುವ ವಾಹನಗಳ ಸದ್ದು ವಿದ್ಯಾರ್ಥಿಗಳ ಪಾಠ ಬೋಧನೆಗೆ ಕಿರಿಕಿರಿಯಾಗಿದೆ.

ಆವರಣದಲ್ಲೇ ತಿಪ್ಪೆಗುಂಡೆ:

ಸಂತ್ರಸ್ತ ಕುಟುಂಬದ ಸದಸ್ಯರು ತಮ್ಮ ಜೊತಗೆ ತಮ್ಮ ಜಾನುವಾರುಗಳನ್ನು ತಂದು ಶಾಲಾ ಆವರಣದಲ್ಲಿಯೇ ಕಟ್ಟಿರುವುದರಿಂದ ಇಡೀ ಆವರಣ ಗಲೀಜಿನಿಂದ ಕೂಡಿದೆ. ಜಾನುವಾರುಗಳು ಹಾಕುವ ಸೆæಗಣಿಯನ್ನು ಇಲ್ಲಿಯೇ ಕೂಡಿ ಹಾಕಿರುವುದರಿಂದ ಅದು ದುರ್ವಾಸನೆ ಬೀರಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪಾಯ ಎದುರಾಗಿದೆ.

ಪರಿಹಾರ ಪಡೆದ ಕುಟುಂಬಗಳು

ಈ ಕುಟುಂಬಗಳಿಗೆ ತಗÜಡಿನ ಶೆಡ್‌ಗಳನ್ನು ನಿರ್ಮಿಸಿಕೊಡಲು ನಿರಾಕರಿಸುತ್ತಿರುವುದನ್ನು ತಾಲೂಕು ಆಡಳಿತ ಸಮರ್ಥನೆ ಮಾಡಿಕೊಂಡಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಗ್ರಾಮವೆಂದು ಘೋಷಣೆಯಾದ ಧನ್ನೂರ ಗ್ರಾಮದ ಎಲ್ಲ ಕುಟುಂಬಗಳಿಗೆ 1994ರಲ್ಲಿಯೇ ಮನೆ ಪರಿಹಾರ ಹಣ ನೀಡಿ, ಪುನರ್ವಸತಿ ಸ್ಥಳದಲ್ಲಿ ನಿವೇಶನದ ಹಕ್ಕುಪತ್ರ ನೀಡಲಾಗಿದೆ. ಈ ಕಾರಣಕ್ಕೆ ಈಗ ಅವರಿಗೆ ಯಾವುದೇ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಅದರೆ, ಈ ಸಂತ್ರಸ್ತ ಕುಟುಂಬಗಳು ಇದಕ್ಕೆ ಒಪ್ಪುತ್ತಿಲ್ಲ. ಪ್ರವಾಹದಿಂದ ಹಳೆ ಗ್ರಾಮದಲ್ಲಿನ ನಮ್ಮ ಮನೆಗಳು ಮರಳಿ ವಾಸ ಮಾಡದ ಸ್ಥಿತಿಗೆ ತಲುಪಿವೆ. ಪುನರ್ವಸತಿ ಕೇಂದ್ರದಲ್ಲಿ ಮನೆ ಕಟ್ಟಿಕೊಳ್ಳಲು ಸದ್ಯ ನಮ್ಮಲ್ಲಿ ಹಣ ಇಲ್ಲ. ಈ ಕಾರಣಕ್ಕೆ ನಮಗೆ ತಾತ್ಕಾಲಿಕ ತಗಡಿನ ಶೆಡ್‌ಗಳನ್ನು ನಿರ್ಮಿಸಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios