ಅಮೀನಗಡ (ನ.23):  ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ ತಮ್ಮ ಸ್ವಗ್ರಾಮ ಸೂಳೇಬಾವಿಯಲ್ಲಿ ಜೋಳಿಗೆ ಹಿಡಿದು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್‌ ಭವನ ಕಟ್ಟಲು ನಿಧಿ ಸಂಗ್ರಹಣೆಗಿಳಿದಿದ್ದಾರೆ.

ಸುಳೇಬಾವಿಯ ಶ್ರೀರಾಜರಾಜೇಶ್ವರಿ ಪತ್ತಿನ ಸಹಕಾರಿ ಸಂಘದಿಂದ ಜೋಳಿಗೆ ಹಿಡಿಯಲು ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಪಕ್ಷದ ಭವನದ ಕಟ್ಟಡಕ್ಕಾಗಿ ಜಾಗ ಖರೀದಿಸಲಾಗಿತ್ತು. ಕಟ್ಟಡವೂ ಇನ್ನೂ ಸಂಪೂರ್ಣವಾಗಿಲ್ಲ. ಸ್ವಂತ ಸ್ಥಳವಿದ್ದರೂ ಜಿಲ್ಲಾ ಕಾಂಗ್ರೆಸ್‌ ಕಚೇರಿ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದೆ.

ನಾನು ಭಿಕ್ಷೆ ಎತ್ತಲೂ ಸಿದ್ಧ : ಡಿಕೆ ಶಿವಕುಮಾರ್

 ಒಂದು ವರ್ಷದ ಹಿಂದೆ ನಾನು ಜಿಲ್ಲಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ, ಕಟ್ಟಡದ ಬಗ್ಗೆ ಕುಲಂಕೂಷವಾಗಿ ಪರಿಶೀಲಿಸಿ, ಹೇಗಾದರೂ ಮಾಡಿ ಕಟ್ಟಡವನ್ನು ಸಂಪೂರ್ಣ ಗೊಳಿಸಲೇಬೇಕೆಂದು ಸಂಕಲ್ಪ ಮಾಡಿ ಹೆಜ್ಜೆ ಇಟ್ಟಿದ್ದೇನೆ. ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳ ಮೂಲಕ ಹಣ ಸಂಗ್ರಹಿಸಿ, ಕಟ್ಟಡದ ಇನ್ನುಳಿದ ಭಾಗವನ್ನು ಸಂಪೂರ್ಣಗೊಳಿಸಬೇಕೆಂದಿದ್ದೇನೆ ಎಂದರು.