ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ
ಸರ್ಕಾರ ಕಬ್ಬಿಗೆ ಎಸ್‌ಎಪಿ ದರ ನಿಗದಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.
ಮೈಸೂರು (ಅ.09): ಸರ್ಕಾರ ಕಬ್ಬಿಗೆ ಎಸ್‌ಎಪಿ ದರ ನಿಗದಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.
ಕಬ್ಬು ಬೆಳೆಗೆ ಎಸ್‌ಎಪಿ ದರ ನಿಗದಿ, ವಿದ್ಯುತ್ ಖಾಸಗೀಕರಣ ಕೈ ಬಿಡುವುದು, ಕೆಆರ್‌ಎಸ್ (KRS) ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ರೈತ ಸಂಘದ ನಡೆಸಿದ ಪ್ರತಿಭಟನೆಯಿಂದಾಗಿ ಸರ್ಕಾರ ಅ. 15 ರೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದೆ. ಆದರೂ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದರು.
ರಾಜ್ಯದಲ್ಲಿ ಅಡಿಕೆ (Areca) ಉತ್ಪಾದನೆ ಹೆಚ್ಚಾಗಿರುವುದರಿಂದ ಬೆಲೆ ಕುಸಿತವಾಗಿದೆ. ಆದರೂ ಆ ಪ್ರದೇಶದ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್‌ಕುಮಾರ್ ಕಟೀಲ್ ಮತ್ತು ಪ್ರತಪಾ ಸಿಂಹ ಅವರು ಏಕೆ ಧ್ವನಿ ಎತ್ತುತ್ತಿಲ್ಲ. 15 ಸಾವಿರ ಟನ್ ಅಡಿಕೆ ಭೂತಾನ್‌ನಿಂದ ಆಮಾದಾಗುತ್ತಿದೆ. ಇದರಿಂದ ರೈತರಿಗೆ ದ್ರೋಹ ಎಸಗಿದಂತೆ ಆಗಿದೆ. ಇದನ್ನು ಖಂಡಿಸಿ ತಿಂಗಳ ಕೊನೆಯಲ್ಲಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಸರ್ಕಾರ (Karnataka Govt) ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ.
ಈ ಹಿಂದೆ ಕಾಂಗ್ರೆಸ್ ಶೇ. 10 ರಷ್ಟುಕಾರ್ಪೊರೇಟ್ ಏಜೆಂಟ್ ಆಗಿದ್ದರೆ, ಬಿಜೆಪಿ ಶೇ. 90ರಷ್ಟುಏಜೆಂಟ್ ಆಗಿದೆ. ದೇಶವನ್ನು ವಕ್ಕರಿಸಿರುವ ಜ್ವಲಂತ ಸಮಸ್ಯೆ ದೇಶದ ಜನತೆ ಮುಂದುವರಿದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧವಾಗಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಂಬಾಕು ಮಾರುಕಟ್ಟೆಅ. 10 ರಿಂದ ಆರಂಭವಾಗುತ್ತಿದೆ. ಅತಿವೃಷ್ಟಿಹಿನ್ನೆಲೆ ತಂಬಾಕು ಬೆಳೆಗೆ ನಷ್ಟವಾಗಿದೆ. ಮಾರುಕಟ್ಟೆಪ್ರಾರಂಭಕ್ಕೂ ಮುನ್ನ ವರ್ತಕರು ತಂಬಾಕು ಬೆಳೆಗಾರರ ಸಭೆ ನಡೆಸಿ ಕೆಜಿಗೆ . 220 ಪ್ರಾರಂಭದ ಬೆಲೆ ನಿಗದಿಪಡಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪ್ರಸನ್ನ ಎನ್. ಗೌಡ, ಮಂಡಕಳ್ಳಿ ಮಹೇಶ್, ಪಿ. ಮರಂಕಯ್ಯ, ಮಧು ಚಂದನ್ ಇದ್ದರು.
ಕಬ್ಬು ದರ ನಿಗದಿಗೆ ವಾರದಲ್ಲಿ ಸಭೆ
ಬೆಂಗಳೂರು
ಪ್ರಸಕ್ತ ಸಾಲಿನ ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಪ್ರತಿನಿಧಿಗಳ ಸಭೆಯನ್ನು ವಾರದಲ್ಲಿ ಕರೆಯಲಾಗುವುದು. ನ್ಯಾಯಯುತ ಬೆಲೆ ಕೊಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಕಬ್ಬು ದರ ನಿಗದಿ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ರೈತ ಮುಖಂಡರ ಜೊತೆ ಚರ್ಚಿಸಿದ ವೇಳೆ ಈ ಭರವಸೆ ನೀಡಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕಬ್ಬು ದರ ನಿಗದಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಮುಂಭಾಗ ಜಮಾಯಿಸಿದ್ದ ರೈತ ಮುಖಂಡರನ್ನು ಕರೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಪ್ರತಿನಿಧಿಗಳ ಸಭೆಯನ್ನು ವಾರದಲ್ಲಿ ಕರೆಯಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಟನ್ ಕಬ್ಬಿಗೆ ಉತ್ತರ ಪ್ರದೇಶದಲ್ಲಿ 3500 ರು., ಪಂಜಾಬ್‌ನಲ್ಲಿ 3800 ಹಾಗೂ ಗುಜರಾತ್‌ನಲ್ಲಿ 4400 ರು. ನೀಡುತ್ತಿದ್ದಾರೆ. ರಾಜ್ಯದಲ್ಲಿ ನ್ಯಾಯಯುತ ದರ ನಿಗದಿಪಡಿಸುವಂತೆ ಮನವಿ ಮಾಡಿದಾಗ, ‘ಕಬ್ಬು ಉತ್ಪಾದನಾ ವೆಚ್ಚ ಅಧಿಕವಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಕೊಡಿಸಲಾಗುವುದು. ಈ ಬಗ್ಗೆ ಸಭೆ ಕರೆದು ದರ ಅಂತಿಮಗೊಳಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಕುರುಬೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.