Karnataka Politics: ಬಾಬು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ
ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಒಕ್ಕಲಿಗ ಸಮಾಜದ ಪ್ರಭಾವಿ ನಾಯಕರು ಆದ ಬಾಬು ಹನುಮಾನ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಕೆ.ಆರ್. ನಗರ (ನ.29): ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಒಕ್ಕಲಿಗ ಸಮಾಜದ ಪ್ರಭಾವಿ ನಾಯಕರು ಆದ ಬಾಬು ಹನುಮಾನ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಚಿವರಾದ ಅಶ್ವತ್ ನಾರಾಯಣ್, ಕೆ. ಗೋಪಾಲಯ್ಯ, ನಾರಾಯಣಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಸಮ್ಮುಖದಲ್ಲಿ ಬಿಜೆಪಿ (bjp) ಬಾವುಟ ಹಿಡಿಯುವ ಮೂಲಕ ಪಕ್ಷಕ್ಕೆ ಪಾದಾರ್ಪಣೆ ಮಾಡಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನ ಮಾತನಾಡಿ, ಕಳೆದ 25 ವರ್ಷಗಳ ಹಿಂದೆಯೇ ಬಾಬು ಹನುಮಾನ್ ಅವರ ತಂದೆ ಎಸ್.ಎ. ಗೋವಿಂದರಾಜು ಕೆ.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ದಾಖಲೆಯ 26 ಸಾವಿರ ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದರು ಎಂದು ಶ್ಲಾಘಿಸಿದರು.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬಾಬು ಹನುಮಾನ್ ಅವರು ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸೇರಿ ಸಂಘಟನೆ ಮಾಡುವುದರೊಂದಿಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಗೆರೆ ದಾಟಲು ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ… ಮಾತನಾಡಿ, ಬಾಬು ಹನುಮಾನ್ ಅವರ ಸೇರ್ಪಡೆಯಿಂದ ಕೆ.ಆರ್. ನಗರ ಕ್ಷೇತ್ರದಲ್ಲಿ ಪಕ್ಷವು ಮತ್ತಷ್ಟುಬಲಶಾಲಿಯಾಗಲಿದ್ದು, ಸಂಘಟನೆಯ ವಿಚಾರದಲ್ಲಿ ನಾವು ಅವರಿಗೆ ಎಲ್ಲಾ ಸಹಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ಸಚಿವರಾದ ಕೆ. ಗೋಪಾಲಯ್ಯ,ಕೆ.ಸಿ. ನಾರಾಯಣಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಮಾತನಾಡಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬಾಬು ಹನುಮಾನ್ ಅವರನ್ನು ಸ್ವಾಗತಿಸಿ ಎಲ್ಲರೊಂದಿಗೂ ನಿರಂತರ ಸಂಪರ್ಕ ಇರಿಸಿಕೊಂಡು ಉತ್ತಮ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು.
ಪಕ್ಷಕ್ಕೆ ಸೇರ್ಪಡೆಯಾದ ನಂತರ ವೇದಿಕೆಯಲ್ಲಿ ಮಾತನಾಡಿದ ಬಾಬು ಹನುಮಾನ್ ನಮ್ಮ ತಂದೆ ಎಸ್.ಎ. ಗೋವಿಂದರಾಜು ಅವರು ಎರಡು ದಶಕಗಳ ಹಿಂದೆಯೇ ಕೆ.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಚಾಪೂ ಮೂಡಿಸಿದ್ದರು, ಹಾಗಾಗಿ ನಾನು ಸಹ ಇಂದು ಮಾತೃ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘಟನೆ ಮಾಡುತ್ತೇನೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಯು. ಕೃಷ್ಣಭಟ್, ಜಿಲ್ಲಾ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮೇಲೂರು ಮಂಜುನಾಥ್, ಪುರಸಭೆ ಸದಸ್ಯರಾದ ರಂಗಸ್ವಾಮಿ, ನಂಜುಂಡ, ಬಿಜೆಪಿ ಮುಖಂಡರಾದ ತಂದ್ರೆ ಪುಟ್ಟಸ್ವಾಮಿ, ಸಾ.ರಾ. ರಮೇಶ್, ದರ್ಶನ್ ಮತ್ತಿತರರು ಬೆಂಗಳೂರಿನ ಕಚೇರಿಯ ಬಳಿ ಬಾಬು ಹನುಮಾನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಸನ್ಮಾನಿಸಿದರು.
-- ತತ್ವ, ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಬಿಜೆಪಿ ಸೇರ್ಪಡೆ- ಬಾಬು ಹನುಮಾನ್-
ಬಿಜೆಪಿ ತತ್ವ ಮತ್ತು ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಬಾಬು ಹನುಮಾನ್ ಹೇಳಿದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಶರತ್ತು ವಿಧಿಸದೆ ಪಕ್ಷಕ್ಕೆ ಸೇರಿದ್ದು, ಕ್ಷೇತ್ರದ ಎಲ್ಲ ಮುಖಂಡರು ಕಾರ್ಯಕರ್ತರ ಜೊತೆ ಸೇರಿ ದುಡಿಯುತ್ತೇನೆ ಎಂದು ತಿಳಿಸಿದರು. ಪಕ್ಷದ ಹಿರಿಯರ ಮಾರ್ಗದರ್ಶನದಂತೆ ಬೆಂಗಳೂರು ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕೆ.ಆರ್. ನಗರ ಕ್ಷೇತ್ರದ ಮುಖಂಡರು ಕಾರ್ಯಕರ್ತರ ಜೊತೆ ಸಭೆ ನಡೆಸಿ ಕಾರ್ಯ ಚಟುವಟಿಕೆ ಆರಂಭಿಸುತ್ತೇನೆ ಎಂದು ಮಾಹಿತಿ ನೀಡಿದರು.
ಪಕ್ಷಕ್ಕೆ ಸೇರ್ಪಡೆಯಾಗಿರುವುದು ನನಗೆ ಅತೀವ ಸಂತಸವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕೆಲಸಗಳನ್ನು ಮತ್ತಷ್ಟುಪ್ರಚುರಪಡಿಸಿ ಮತದಾರರಿಗೆ ಮನವರಿಕೆ ಮಾಡಿಕೊಡುವುದಾಗಿ ನುಡಿದರು.
ಪಕ್ಷದ ಹಿರಿಯರು ನನಗೆ ಅಗತ್ಯ ಮಾರ್ಗದರ್ಶನ ಮಾಡಬೇಕು ಮತ್ತು ಕಾರ್ಯಕರ್ತರು ನನ್ನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.