ಬೆಂಗಳೂರು(ಜ.29):  ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಭೂಮಿ ಒತ್ತುವರಿಗಳನ್ನು ತೆರವುಗೊಳಿಸಿ ವಾಪಸ್‌ ಪಡೆದು, ಆ ಜಮೀನಿನಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

ಮಂಗಳವಾರ ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಅಕ್ರಮ- ಸಕ್ರಮ ಯೋಜನೆ ಅಡಿಯಲ್ಲಿ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ’ ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎಲ್ಲರಿಗೂ ಸೂರು ಕಲ್ಪಿಸಬೇಕೆಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಅದರಂತೆ ರಾಜ್ಯ ಸರ್ಕಾರ ಎಲ್ಲರಿಗೂ ಸೂರು ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸೂರು ರಹಿತರ ಸಮೀಕ್ಷೆ ನಡೆಸಿ ಪ್ರತಿಯೊಬ್ಬರಿಗೂ ಮನೆಗಳನ್ನು ಕಟ್ಟಿಕೊಡಲಾಗುವುದು. ಸರ್ಕಾರಿ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಅಲ್ಲಿ ಬಡ ಜನರಿಗೆ ಸೂರು ಕಲ್ಪಿಸುತ್ತೇವೆ. ಇದಕ್ಕಾಗಿ ರಾಜ್ಯಾದ್ಯಂತ ಯಾವುದೇ ಭಾಗದಲ್ಲಿ ಎಂತಹ ಬಲಾಡ್ಯರೇ ಆಗಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದರೆ ನಿರ್ಧಾಕ್ಷಿಣ್ಯವಾಗಿ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ, ಸರ್ಕಾರಕ್ಕೆ ವಾಪಸ್‌ ಪಡೆಯಬೇಕು ಎಂದು ಸೂಚನೆ ನೀಡಿದರು.

ಇನ್ನು ಆರು ತಿಂಗಳಲ್ಲಿ ರಾಜ್ಯದ ಚಿತ್ರಣವನ್ನೇ ಬದಲಿಸುತ್ತೇವೆ. ಮಾತನಾಡುವುದೇ ಸಾಧನೆಯಾಗಬಾರದು. ನಾವು ಮಾಡಿದ ಕೆಲಸಗಳು ಸಾಧನೆಗಳಾಗಬೇಕು. ಅಂತಹ ಕೆಲವವನ್ನು ಮಾಡಿ ತೋರಿಸುತ್ತೇವೆ ಎಂದರು.

ಲಂಚ ಕೇಳಿದರೆ ಮಾಹಿತಿ ಕೊಡಿ:

ಪ್ರಸ್ತುತ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 10 ಸಾವಿರ ಜನರಿಗೆ ವಾಸದ ಮನೆಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಲ್ಲೂ ಫಲಾನುಭವಿಗಳಿಗೆ ಹಂತ ಹಂತರವಾಗಿ ಹಕ್ಕುಪತ್ರ ವಿತರಿಸಲಾಗುವುದು. ಫಲಾನುಭವಿಗಳು ಯಾವುದೇ ಅಧಿಕಾರಿಗಳಿಗೆ ಲಂಚ ನೀಡಬಾರದು. ಯಾರಾದರೂ ನಿಮ್ಮನ್ನು ಒಂದು ರುಪಾಯಿ ಕೇಳಿದರೂ ನಮಗೆ ಮಾಹಿತಿ ನೀಡಿ. ತಕ್ಷಣವೇ ಅಂತಹ ಅಧಿಕಾರಿಯನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಒತ್ತುವರಿ ಸಮೀಕ್ಷೆಗೆ ಈಗಾಗಲೇ ಶಾಸಕ ಬೋಪಯ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆ ಸಮಿತಿ ವರದಿ ನೀಡಿದ ಕೂಡಲೇ ತೆರವಿಗೆ ಕ್ರಮ ವಹಿಸಲಾಗುವುದು. ಅದೇ ರೀತಿ ಮುಖ್ಯಮಂತ್ರಿಗಳು ಸೂಚಿಸಿರುವಂತೆ ರಾಜ್ಯಾದ್ಯಂತ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ ಸರ್ಕಾರಕ್ಕೆ ವಾಪಸ್‌ ಪಡೆಯಲು ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ.ಮೋಹನ್‌, ಮುನಿಸ್ವಾಮಿ, ಶಾಸಕರಾದ ಅರವಿಂದ ಲಿಂಬಾವಳಿ, ಸತೀಶ್‌ ರೆಡ್ಡಿ, ರವಿ ಸುಬ್ರಹ್ಮಣ್ಯ, ಎಸ್‌.ರಘು, ಬಿ.ಎಸ್‌.ಬಸವರಾಜು, ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ, ಮೇಯರ್‌ ಗೌತಮ್‌ ಕುಮಾರ್‌ ಮತ್ತಿತರು ಉಪಸ್ಥಿತರಿದ್ದರು.

ಅಶೋಕ್‌-ಸೋಮಣ್ಣಗೆ ಕಿವಿ ಹಿಂಡಿದ ಸಿಎಂ

ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ಆ ಭೂಮಿಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಮನೆ ಕಟ್ಟಿಕೊಡುವ ಮೂಲಕ ತಾವು ಸಚಿವರಾಗಿದ್ದಕ್ಕೆ ಸಾರ್ಥಕವಾಯಿತು ಎಂಬುದನ್ನು ತೋರಿಸಿ ಎಂದು ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರಾದ ಆರ್‌.ಅಶೋಕ್‌ ಮತ್ತು ವಿ.ಸೋಮಣ್ಣ ಅವರಿಗೆ ಪರೋಕ್ಷವಾಗಿ ತಮ್ಮ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುವಂತೆ ಕಿವಿ ಹಿಂಡಿದರು.

ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸರ್ಕಾರಕ್ಕೆ ವಾಪಸ್‌ ಪಡೆಯಬೇಕು. ಈ ನಿಟ್ಟಿನಲ್ಲಿ ಆರ್‌.ಅಶೋಕ್‌ ಅವರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಅಂತಹ ಜಾಗದಲ್ಲಿ ಬಡವರಿಗೆ, ನಿರ್ಗತಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲು ಹಾಗೂ ಸರ್ಕಾರಿ ಕಾರ್ಯಗಳಿಗೆ ಬಳಸಬೇಕು. ಆ ನಿಟ್ಟಿನಲ್ಲಿ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಅವರು ಕ್ರಮವಹಿಸಬೇಕು. ಸರ್ಕಾರಿ ಭೂಮಿ ವಾಪಸ್‌ ಪಡೆದು ಪ್ರತಿಯೊಬ್ಬರಿಗೂ ಸೂರು ಒದಗಿಸಿದಾಗ ಮಾತ್ರ ತಾವು ಸಚಿವರಾಗಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.

ಇದೇ ವೇಳೆ, ಇಬ್ಬರು ಸಚಿವರ ಕಾರ್ಯವೈಖರಿಯನ್ನು ಹೊಗಳಿದ ಅವರು, ಬೆಂಗಳೂರು ನಗರದಲ್ಲಿ 9 ಸಾವಿರ ಮತ್ತು ಗ್ರಾಮಾಂತರದಲ್ಲಿ 1 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ಗೌರವ ತರುವ ಐತಿಹಾಸಿಕ ಸಮಾರಂಭ. ಇದನ್ನು ಸಚಿವ ಅಶೋಕ್‌ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಲ್ಲೂ ಸ್ಥಳೀಯರಿಗೆ ಹಕ್ಕುಪತ್ರ ವಿತರಣೆ ನಡೆಯಲಿದೆ. ಅದೇ ರೀತಿ ವಸತಿ ಸಚಿವ ಸೋಮಣ್ಣ ಅವರು ಬೆಂಗಳೂರನ್ನು ಕೊಳಗೇರಿ ಮುಕ್ತ ನಗರವಾಗಿಸಲು ಮುಂದಾಗಿದ್ದಾರೆ. ನಗರದಲ್ಲಿ ಬಡವರಿಗೆ 1 ಲಕ್ಷ ಮನೆಗಳ ನಿರ್ಮಾಣ ಮಾಡಲು ಹೊರಟಿದ್ದಾರೆ. ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.