ಮೈಸೂರು(ಜ.22): ಬಿಜೆಪಿ ಮತ್ತಿತರ ಪಕ್ಷಗಳು ಭಾವನಾತ್ಮಕ ರಾಜಕಾರಣ ಮಾಡುವ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌. ಶಂಕರ್‌ ಆರೋಪಿಸಿದ್ದಾರೆ. 

ನಗರದ ಇಂದಿರಾ ಭವನದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್‌ ಸಮರ್ಪಣೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರಲ್ಲಿ ದ್ವೇಷ, ಅಸೂಯೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್‌ ಎಂದಿಗೂ ಭಾವನಾತ್ಮಕ ರಾಜಕೀಯ ಮಾಡಿಲ್ಲ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಅದಕ್ಕೆ ಈಗಿಂದಲೇ ಕಾರ್ಯ ಯೋಜನೆ ರೂಪಿಸಲಾಗಿದೆ. ಬಿಜೆಪಿ ಸರ್ಕಾರದ ಜನ ವಿರೋಧಿ ಧೋರಣೆ ವಿರುದ್ಧ ಪ್ರತಿಭಟಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುದು. ಮುಂದಿನ 2022ರಲ್ಲಿಯೇ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಮತಯಾಚನೆ ಆರಂಭಿಸಲಾಗುವುದು. ಈ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಕಾಂಗ್ರೆಸ್‌ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ರಾಜ್ಯದ ಅಭಿವೃದ್ಧಿ ಮತ್ತು ನ್ಯಾಯಕ್ಕಾಗಿ ಸದಾ ಶ್ರಮಿಸುತ್ತಿದೆ. ಆದರೆ ಬಿಜೆಪಿಯವರು ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜೆಡಿಎಸ್ ಮುಖಂಡಗೆ ಬಿಜೆಪಿಗೆ ಆಹ್ವಾನ : BSY ವಿರುದ್ಧ ವಿಶ್ವನಾಥ್ ಕಿಡಿ

ಕರ್ನಾಟಕಕ್ಕೆ ಕಾಂಗ್ರೆಸ್‌ ಕೊಡುಗೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಪ್ರಶ್ನಿಸಿದ್ದಾರೆ. ಅವರಿಗೆ ರಾಜ್ಯದಲ್ಲಿ ನಿರ್ಮಾಣವಾಗಿರುವ ಬೃಹತ್‌ ಕಾರ್ಖಾನೆ, ಜಲಾಶಯ ನೋಡಬೇಕು. ಅದು ಯಾರ ಕಾಲದಲ್ಲಿ ಯಾರು ಮುಖ್ಯಮಂತ್ರಿ ಆಗಿದ್ದಾಗ ನಿರ್ಮಾಣವಾಯಿತು ಎಂಬುದನ್ನು ಅರಿಯಬೇಕು. ಈಗ ಬದುಕು ಕಟ್ಟುವ ರಾಜಕಾರಣಕ್ಕಿಂತ ಭಾವನಾತ್ಮಕ ರಾಜಕಾರಣ ಹೆಚ್ಚಾಗಿದೆ. ಕಾಂಗ್ರೆಸ್‌ ಇಡೀ ದೇಶದಲ್ಲಿ ಜನರ ಬದುಕು ಕಟ್ಟುವ ರಾಜಕೀಯ ಮಾಡಿದೆ. ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್‌ ದೊಡ್ಡ ಸವಾಲು ಎದುರಿಸುತ್ತಿದೆ. ನಾಯಕರ ನಿರೀಕ್ಷೆ ಹುಸಿಯಾಗಿ ಆಘಾತ ನೀಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯನ್ನು ನನಗೆ ನೀಡುವ ಮೂಲಕ ಹೊಸ ಜವಾಬ್ದಾರಿ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಪಕ್ಷಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಪಕ್ಷದ ಅಧ್ಯಕ್ಷರು ತಳಮಟ್ಟದಿಂದ ಪಕ್ಷ ಸಂಘಟಿಸುತ್ತಿದ್ದಾರೆ. ಅವರೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು. ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರದ 16 ಮಂದಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಅವರನ್ನು ಸಾಂಪ್ರದಾಯಿಕವಾಗಿ ಬರ ಮಾಡಿಕೊಂಡು ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಮಾಜಿ ಶಾಸಕ ವಾಸು, ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌, ಹರೀಶ್‌ ಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ. ಮರಿಗೌಡ ಇದ್ದರು.