'ಕೊರೋನಾ ಸೋಂಕಿನ ಭೀತಿಯಿಂದ ಹಸ್ತಲಾಘವ ಮಾಡದೆ ಬರಿ ಕೈಮುಗಿಯುತ್ತಿದ್ದೇನೆ'

ಹಸ್ತಲಾಘವದಿಂದ ಕೊರೋನಾ ವೈರಸ್‌ ಬರುತ್ತದೆಯೇ?|ಸ್ಪಷ್ಟೀಕರಣ ಬಯಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌| ಆರೋಗ್ಯವಂತರಿಂದ ಸೋಂಕು ತಗಲುವುದಿಲ್ಲ. ಆದರೆ ಶೀತ, ಕೆಮ್ಮು, ಜ್ವರದ ಲಕ್ಷಣ ಬಂದವರು ಸೀನುವಾಗಾಗಲಿ, ಕೆಮ್ಮುವಾಗಾಗಲಿ ಮಾಸ್ಕ್‌ ಧರಿಸಬೇಕು: ಸಚಿವ ಸುಧಾಕರ್‌| 

B C Patil Talks Over coronavirus in Vidhansabhe Session

ಹಾವೇರಿ(ಮಾ.05): ಆತ್ಮೀಯರನ್ನೂ ಸಹ ಹಸ್ತಲಾಘವ ಮಾಡಲೂ ಕೊರೋನಾ ಭೀತಿ ಆವರಿಸಿಬಿಟ್ಟಂತಾಗಿದೆ. ಹೀಗಾಗಿ ಹಸ್ತಲಾಘವದಿಂದ ಕೊರೋನಾ ಹರಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್‌ ವಿವರ ಕೇಳಿದ್ದಾರೆ.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌, ಆತ್ಮೀಯರನ್ನು ಭೇಟಿಯಾದಾಗ ಹಸ್ತಲಾಘವ ಮಾಡುವುದು ಸಹಜ. ಆದರೆ ಕೊರೋನಾ ಸೋಂಕಿನ ಭೀತಿಯಿಂದಾಗಿ ಹಸ್ತಲಾಘವ ಮಾಡುವುದೂ ಬೇಡವೋ ಎಂಬ ಗೊಂದಲದಿಂದ ಕೈಮುಗಿಯುತ್ತಿದ್ದೇನೆ. ಆಗ ಕೆಲವರಿಗೆ ತಾವು ಸಚಿವನಾಗಿದ್ದರಿಂದ ಹಸ್ತಲಾಘವ ಮಾಡುತ್ತಿಲ್ಲ ಎಂಬ ಭಾವ ಬರುವುದು ಸಹಜ. ಹೀಗಾಗಿ ಸಚಿವರು ಹಸ್ತಲಾಘವದಿಂದ ಸೋಂಕು ಹರಡುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದರು.

ಆಗ ಉತ್ತರ ನೀಡಿದ ವೈದ್ಯಕೀಯ ಸಚಿವ ಸುಧಾಕರ್‌, ಆರೋಗ್ಯವಂತರಿಂದ ಸೋಂಕು ತಗಲುವುದಿಲ್ಲ. ಆದರೆ ಶೀತ, ಕೆಮ್ಮು, ಜ್ವರದ ಲಕ್ಷಣ ಬಂದವರು ಸೀನುವಾಗಾಗಲಿ, ಕೆಮ್ಮುವಾಗಾಗಲಿ ಮಾಸ್ಕ್‌ ಧರಿಸಬೇಕು. ಕೈ ಅಡ್ಡ ಹಿಡಿದು ಸೀನದೇ ಕರವಸ್ತ್ರ ಬಳಸಬೇಕು. ಸೋಂಕಿತರ ಕೈಯಲ್ಲಿನ ಬೆವರಿನಿಂದ ಸಹ ಕೊರೋನಾ ಹರಡುವ ಸಾಧ್ಯತೆಯಿದೆ. ಹೀಗಾಗಿ ಹಸ್ತಲಾಘವಕ್ಕಿಂತ ಕೈಮುಗಿದು ನಮಸ್ಕರಿಸುವುದೇ ಒಳ್ಳೆಯದು. ಇದು ನಮ್ಮ ಸಂಸ್ಕೃತಿ ಕೂಡ ಎಂದು ಸಲಹೆ ನೀಡಿದರು.
 

Latest Videos
Follow Us:
Download App:
  • android
  • ios