ಸಿದ್ಧಲಿಂಗಸ್ವಾಮಿ ವೈ.ಎಂ.

ಬಳ್ಳಾರಿ(ಏ.22):  ಸ್ವಾಗತ, ಅಭಿನಂದನೆ, ಶುಭಾಶಯಗಳ ಕುರಿತು ಫ್ಲೆಕ್ಸ್‌, ಬ್ಯಾನರ್‌ ಬೋರ್ಡ್‌ಗಳೇ ರಾರಾಜಿಸುತ್ತಿದ್ದ ಜಾಗದಲ್ಲೀಗ ಕೊರೋನಾ ವೈರಸ್‌ ಕುರಿತು ಜಾಗೃತಿ ಮೂಡಿಸುತ್ತಿರುವ ವೈದ್ಯರ ಭಾವಚಿತ್ರಗಳು ಹಾಗೂ ವೈರಾಣು ಕುರಿತು ಅರಿವಿನ ಸಂದೇಶದ ಮಾಹಿತಿಗಳು ಕಂಡು ಬರುತ್ತಿವೆ!

ಕೊರೋನಾ ವೈರಾಣು ದಿನೇ ದಿನೇ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಸಾಗಿದ್ದು, ಈ ನಿಟ್ಟಿನಲ್ಲಿ ನಿಯಂತ್ರಣಕ್ಕಾಗಿ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರತಿನಿತ್ಯ ಧ್ವನಿಮುದ್ರಿಕೆ, ಕರಪತ್ರ, ಬೀದಿನಾಟಕ ಸೇರಿದಂತೆ ನಾನಾ ರೀತಿಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿವೆ. ಇದರ ಜತೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ನಗರದಲ್ಲಿ ಕೊರೋನಾ ವೈರಸ್‌ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ಫ್ಲೆಕ್ಸ್‌, ಬ್ಯಾನರ್‌ಗಳನ್ನು ನಗರದಲ್ಲಿ ಅಳವಡಿಸಲಾಗಿದೆ.

ಕೊರೋನಾ ಕಾಟ: ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದ ಐಸೋಲೆಷನ್‌ ಕೋಚ್‌ ರೈಲು

ಎಲ್ಲೆಲ್ಲಿ ಅಳವಡಿಕೆ?

ನಗರದ ಮಹಾನಗರ ಪಾಲಿಕೆ, ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ, ಎಚ್‌.ಆರ್‌. ಗವಿಯಪ್ಪ ವೃತ್ತ, ಸುಧಾ ಕ್ರಾಸ್‌, ಎಸ್‌ಪಿ ವೃತ್ತದ ಬಳಿ, ಡಾ. ರಾಜ್‌ಕುಮಾರ್‌ ಉದ್ಯಾನದ ಮುಂಭಾಗ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಕೊರೋನಾ ವೈರಸ್‌ ಕುರಿತು ಜನರು ವಹಿಸಬೇಕಾದ ಎಚ್ಚರಿಕೆಯ ಕುರಿತ ಸಂದೇಶವನ್ನು ಸಾರುವ ಫ್ಲೆಕ್ಸ್‌ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಜಾಗೃತಿಗೆ ಮುಂದಾಗಿದೆ. ಸಾಮಾನ್ಯವಾಗಿ ಅಳವಡಿಸಲಾಗುವ ಫ್ಲೆಕ್ಸ್‌, ಬ್ಯಾನರ್‌ಗಳಿಗಿಂತ ವಿಶೇಷವಾಗಿ ಈ ಬಾರಿ ಬಳ್ಳಾರಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಾವಣ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ ಸೇರಿ​ದಂತೆ ವೈದ್ಯ​ರ ಭಾವಚಿತ್ರದೊಂದಿಗೆ ಕೊರೋನಾ ವೈರಸ್‌ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಾಲುಗಳುಳ್ಳ ಮಾಹಿತಿಯನ್ನು ಅಳವಡಿಸಿರುವುದು ವಿಶೇಷವೆನಿಸಿದೆ.

ಮಾಸಿಹೋದ ಹಳೇ ಬ್ಯಾನರ್‌ಗಳು

ಲಾಕ್‌ಡೌನ್‌ಗೂ ಮುನ್ನ ನಗರದಲ್ಲಿ ಬಹು ದೊಡ್ಡ ಗಾತ್ರಗಳಲ್ಲಿ ಆಕರ್ಷಣೀಯ ಮಾದರಿಯಲ್ಲಿ ಅಳವಡಿಸಲಾಗಿದ್ದ ನಾನಾ ಬಗೆಯ ಫ್ಲೆಕ್ಸ್‌ ಬ್ಯಾನರ್‌ ಬೋರ್ಡ್‌ಗಳು ಬಣ್ಣ ಕಳೆದುಕೊಂಡು ಮಾಸಿಹೋಗಿವೆ, ಈಚೆಗೆ ಉಂಟಾದ ಮಳೆ-ಬಿರುಗಾಳಿಗೆ ಕೆಲವಡೆ ಹರಿದುಹೋದರೆ, ಇನ್ನೂ ವಿವಿಧೆಡೆ ಇದ್ದ ಸ್ಥಳದಿಂದ ಮಾಯವಾಗಿವೆ. ಇದರಿಂದ ಸದ್ಯ ಹೊಸದಾಗಿ ಅಳವಡಿಸಲಾಗಿರುವ ಕೊರೋನಾ ವೈರಸ್‌ ಕುರಿತು ಜಾಗೃತಿ ಮೂಡಿಸುವ ಫ್ಲೆಕ್ಸ್‌ ಬ್ಯಾನರ್‌ ಬೋರ್ಡ್‌ಗಳು ಆಕರ್ಷಿಸುತ್ತಿವೆ.

ಮಹಾಮಾರಿ ಕೊರೋನಾ ರೋಗ ಹರಡದಂತೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆಯು ಪ್ರತಿನಿತ್ಯ ಅನೇಕ ರೀತಿಯ ಜಾಗೃತಿ ಕಾರ್ಯಕ್ರಮಗಳು ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಜನರು ಮನೆಯಲ್ಲೇ ಇರುವುದರೊಂದಿಗೆ ಕೊರೋನಾ ಹರಡುವಿಕೆ ಮತ್ತಷ್ಟುಉಲ್ಬಣವಾಗದಿರಲು ಜಾಗೃತಿ ಹೊಂದಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಈಗಾಗಲೇ ಕೊರೋನಾ ವೈರಸ್‌ ಹರಡುವಿಕೆ ಬಗ್ಗೆ ಸಾಕಷ್ಟುಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಎಲ್ಲರೂ ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಕೊರೋನಾ ರೋಗ ಹರಡದಂತೆ ಜಾಗರೂಕತೆ ವಹಿಸಬೇಕಾಗಿದೆ ಎಂದು ಬಳ್ಳಾರಿ ಲೆಕ್ಕಪರಿಶೋಧಕ ಸಿದ್ಧರಾಮೇಶ್ವರ ಗೌಡ ಹೇಳಿದ್ದಾರೆ.