ರಕ್ತಹೀನತೆ, ಅಪೌಷ್ಠಿಕತೆ ಬಗ್ಗೆ ಜಾಗೃತಿ ಅಗತ್ಯ: ಡಾ.ವರ್ಷ
ರಕ್ತಹೀನತೆ ಹಾಗೂ ಅಪೌಷ್ಠಿಕತೆಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಜಾಗೃತರಾಗುವ ಮೂಲಕ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಆರ್‌ಸಿಎಸ್‌ಕೆ ಕಾರ್ಯಕ್ರಮದ ವೈದ್ಯೆ ಡಾ.ವರ್ಷ ತಿಳಿಸಿದರು.
ತಿಪಟೂರು : ರಕ್ತಹೀನತೆ ಹಾಗೂ ಅಪೌಷ್ಠಿಕತೆಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಜಾಗೃತರಾಗುವ ಮೂಲಕ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಆರ್‌ಸಿಎಸ್‌ಕೆ ಕಾರ್ಯಕ್ರಮದ ವೈದ್ಯೆ ಡಾ.ವರ್ಷ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅನಿಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಶೇ.೪೭ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ವಿಶೇಷವಾಗಿ ಹೆಣ್ಣ ಮಕ್ಕಳು ಹಿಮೊಗ್ಲೋಬಿನ್ ಕೊರತೆಯಿಂದ ಶಾರೀರಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಆದ್ದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ರಕ್ತ ತಪಾಸಣೆ ಮಾಡಿ ಹಿಮೊಗ್ಲೋಬಿನ್ ಪ್ರಮಾಣ ಪತ್ತೆ ಹಚ್ಚಿ, ಕೊರತೆಯಿರುವ ವಿದ್ಯಾರ್ಥಿಗಳಿಗೆ ಪೊಲಿಕ್ ಆಮ್ಲ ಹಾಗೂ ಕಬ್ಬಿಣಾಂಶದ ಮಾತ್ರೆಗಳನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದರು.
ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ದಿನನಿತ್ಯದ ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳು, ಮೊಳಕೆ ಕಟ್ಟಿದ ಕಾಳುಗಳನ್ನು ಬಳಕೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬಹುದು. ಅನಿಮಿಯದಿಂದ ಗ್ರಹಿಕಾ ಶಕ್ತಿ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳ ರಕ್ತ ತಪಾಸಣೆ ಮಾಡಲಾಯಿತು. ಡಾ. ಸುಮನಾ ಬಾನು, ಸಿಬ್ಬಂದಿಗಳಾದ ರೇಖಾ, ನವ್ಯಾ, ಉಪನ್ಯಾಸಕ ಷಡಕ್ಷರಿ ಮತ್ತಿತರರಿದ್ದರು. ಅನಿಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ರಕ್ತಹೀನತೆ ಬಗ್ಗೆ ಅರಿವು ಮೂಡಿಸಿದ ವೈದ್ಯೆ ಡಾ. ವರ್ಷ.
ಅನ್ನಭಾಗ್ಯ ಅಕ್ಕಿಗೆ ಸಾರವರ್ಧಿತ ಅಕ್ಕಿ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಫೆ.22): ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದಾಗಿ, ಅಶಕ್ತತೆ (ಅನೀಮಿಯ), ಇರುಳು ಕುರುಡುತನ ಅಂತಹ ರೋಗಗಳು ಬರಬಹುದಾಗಿದೆ. ಅಲ್ಲದೇ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಅಪೌಷ್ಠಿಕತೆಗೆ ಬಲಿಯಾಗುತ್ತಾರೆ. ಇದನ್ನು ತಪ್ಪಿಸಲು ಹೆಚ್ಚಿನ ಪೋಷಕಾಂಶದ ಅಗತ್ಯತೆ ಇರುತ್ತದೆ.
ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ, ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆ.ಜಿ. ಅಕ್ಕಿಯ ಚೀಲದಲ್ಲಿ ಅರ್ಧ ಕೆ.ಜಿ.ಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ, ಐರನ್, ಫೋಲಿಕ್ ಆಸಿಡ್, ಬಿಕಾಂಪ್ಲೇಕ್ಸ, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
ಪ್ಲಾಸ್ಟಿಕ್ ಅಕ್ಕಿ ಎಂದು ಸಾರವರ್ಧಿತ ಅಕ್ಕಿ ಪಡೆಯಲು ಗ್ರಾಮಸ್ಥರು ಹಿಂದೇಟು
ಪ್ಲಾಸ್ಟಿಕ್ ಅಕ್ಕಿ ಎಂದು ತಪ್ಪು ಭಾವನೆ: ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ಹೊಳಪಿನಿಂದ ನೋಡಲು ಪ್ಲಾಸ್ಟಿಕ್ ರೀತಿಯಲ್ಲಿ ಕಾಣಿಸುತ್ತಿದ್ದು, ಸಾರ್ವಜನಿಕರು ಆತಂಕಗೊಳ್ಳಬಾರದು ವಿತರಣೆ ಮಾಡಲಾಗುತ್ತಿರುವ ಸಾರವರ್ಧಿತ ಅಕ್ಕಿಯನ್ನು ಉಪಯೋಗಿಸಿ, ಆರೋಗ್ಯವಂತರಾಗಲು ಕೋರಿದೆ. ಸಾರ್ವಜನಿಕ ವಿತರಣಾ ಪದ್ಧತಿಯಡಿ ಬಿಡುಗಡೆ ಮಾಡುವ ಅಕ್ಕಿಯನ್ನು ಸ್ವಂತಕ್ಕೆ ಉಪಯೋಗಿಸತಕ್ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಕುಟುಂಬಕ್ಕೆ ನೀಡಿದ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದೆಂದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಕ್ಷ್ಮೇಶ್ವರದಲ್ಲಿ ಅಕ್ಕಿ ಪಡೆಯಲು ಜನರು ಹಿಂದೇಟು: ಲಕ್ಷ್ಮೇಶ್ವರ : ಪಟ್ಟಣದ ನ್ಯಾ ಬೆಲೆ ಅಂಗಡಿಯಲ್ಲಿ ಗುರುವಾರ ಸಾರವರ್ಧಿತ ಅಕ್ಕಿ ಪೂರೈಸಿದ್ದು, ಇದು ಪ್ಲಾಸ್ಟಿಕ್ ಅಕ್ಕಿ ಎಂದು ಫಲಾನುಭವಿಗಳು ಅಕ್ಕಿ ಪಡೆಯಲು ನಿರಾಕರಿಸಿದ ಘಟನೆ ನಡೆದಿದೆ. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರವರ್ಧಿತ ಅಕ್ಕಿ ಎಂದು ತಿಳಿಸಿ ಗೊಂದಲ ದೂರ ಮಾಡಿದರು. ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ವಿತರಣೆ ಮಾಡುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿದೆ ಎಂಬ ತಪ್ಪು ಮಾಹಿತಿ ಮತ್ತು ಮಾಹಿತಿ ಕೊರತೆಯಿಂದ ಪಡಿತರ ಫಲಾನುಭವಿಗಳು ಆತಂಕಕ್ಕೀಡಾಗಿದ್ದರು. ಪಡಿತರ ಅಕ್ಕಿಯಲ್ಲಿ ಸೌತೆ ಬೀಜದಂತಹ ಅಕ್ಕಿ ಕಂಡುಬಂದ ಹಿನ್ನೆಲೆ ಇದು ಪ್ಲಾಸ್ಟಿಕ್ ಅಕ್ಕಿಯೇ ಎಂಬ ಗುಮಾನಿ ಹರಡಿ ಪಡಿತರ ಪಡೆಯಲು ಸಾಲುಗಟ್ಟಿನಿಂತ ಫಲಾನುಭವಿಗಳು ಪರಸ್ಪರ ಆತಂಕದಿಂದ ಮಾತನಾಡಿಕೊಳ್ಳುತ್ತ ನ್ಯಾಯಬೆಲೆ ಅಂಗಡಿಯವರಿಗೆ ನಮಗೆ ಈ ಅಕ್ಕಿ ಬೇಡ ಎಂದು ನಿರಾಕರಿಸಿದ ಪ್ರಸಂಗ ನಡೆಯಿತು.