Asianet Suvarna News Asianet Suvarna News

ಆಘಾತಕಾರಿ ಸುದ್ದಿ: ಕೊರೋನಾ ಅವಧಿಯಲ್ಲಿ ಭೀಕರ ‘ಮರಣ ಮೃದಂಗ’..!

ಸಹಜ, ಕೊರೋ​ನಾ ಸಾವು ಸೇರಿ ಈ ವರ್ಷ ನಿತ್ಯ ಸರಾ​ಸರಿ 200 ಸಾವು| ಕಳೆದ ವರ್ಷ ಸರಾ​ಸರಿ 176 ಮಂದಿ ನಿತ್ಯ ಮೃತ​ಪ​ಟ್ಟಿ​ದ್ದ​ರು| ಆಗ​ಸ್ಟ್‌​ನ​ಲ್ಲಂತೂ ನಿತ್ಯ 128 ಹೆಚ್ಚು​ವರಿ ಸಾವು| 7 ತಿಂಗಳಲ್ಲಿ ಬರೋಬ್ಬರಿ 4,958 ಮಂದಿ ಹೆಚ್ಚುವರಿ ಬಲಿ| 24 ರಷ್ಟು ಸಾವು ಹೆಚ್ಚ​ಳ| 

Average of 200 Deaths Every Day in Bengaluru in During Coronagrg
Author
Bengaluru, First Published Oct 8, 2020, 8:14 AM IST
  • Facebook
  • Twitter
  • Whatsapp

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಅ.08): ವಿಶ್ವಾದ್ಯಂತ 2020ನೇ ವರ್ಷದಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ಸೋಂಕಿ​ನ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಮರಣ ಮೃದಂಗ ಮೊಳಗಿದೆ. ​ಕೊರೋನಾ ಹಾವಳಿ ಆರಂಭವಾದ ನಂತರ ನಗರದಲ್ಲಿ ಸಹಜ ಸಾವು, ಇತರ ಕಾರ​ಣ​ಗ​ಳಿಗೆ ಸಂಭ​ವಿ​ಸಿದ ಸಾವು​ಗಳು ಹಾಗೂ ಕೊರೋನಾ ಸಂಬಂಧಿ ಸಾವು​ಗಳು ಸೇರಿ​ದಂತೆ ನಿತ್ಯ ಸರಾಸರಿ 200 ಸಾವು ಸಂಭವಿಸಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ನಿತ್ಯ 24 ಸಾವು ಹೆಚ್ಚುವರಿಯಾಗಿ ಸಂಭವಿಸಿದಂತಾಗಿದೆ!

ಇನ್ನು ಕೊರೋನಾ ತಾರಕಕ್ಕೇರಿದ ಆಗಸ್ಟ್‌ ತಿಂಗಳಲ್ಲಂತೂ ನಿತ್ಯ ಸರಾಸರಿಗಿಂತ ಬರೋಬ್ಬರಿ 128 ಮಂದಿ ಹೆಚ್ಚುವರಿಯಾಗಿ ಸಾವನ್ನಪ್ಪಿದ್ದಾರೆ. ಅರ್ಥಾತ್‌ ಪ್ರತಿ ಗಂಟೆಗೆ 5.3 ಮಂದಿ ಸರಾಸರಿಗಿಂತ ಹೆಚ್ಚು ಬಲಿಯಾಗಿದ್ದಾರೆ. ಈ ಅಂಕಿ-ಅಂಶ ಸ್ವತಃ ತಜ್ಞರನ್ನೇ ಬೆಚ್ಚಿ ಬೀಳಿಸಿದೆ.

ಬೆಂಗಳೂರಿನಲ್ಲಿ ಮೊದಲ ಕೊರೋನಾ ಸಾವು ಉಂಟಾದ ಮಾ.12ರ ಬಳಿಕ ಸೆಪ್ಟೆಂಬರ್‌ವರೆಗೆ ಉಂಟಾದ ಸಾವು ಹಾಗೂ ಇದೇ ಅವಧಿಯಲ್ಲಿ ಕಳೆದ ವರ್ಷದಲ್ಲಿ ಉಂಟಾದ ಸಾವುಗಳನ್ನು ಹೋಲಿಸಿದರೆ ಏಳು ತಿಂಗಳಲ್ಲಿ ಬರೋಬ್ಬರಿ 4,958 ಮಂದಿ ಹೆಚ್ಚುವರಿಯಾಗಿ ಬಲಿಯಾಗಿದ್ದಾರೆ.

ಕೊರೋನಾ ತಡೆಗೆ ಶಕ್ತಿ ಮೀರಿ ಶ್ರಮ: ಸಚಿವ ಸೋಮಣ್ಣ

2019ನೇ ಸಾಲಿನಲ್ಲಿ ಮಾಚ್‌ರ್‍ನಿಂದ ಸೆಪ್ಟೆಂಬರ್‌ವರೆಗೆ 36,962 ಮಂದಿ ಸಾವನ್ನಪ್ಪಿದ್ದರೆ 2020ರ ಇದೇ ಅವಧಿಯಲ್ಲಿ ಬರೋಬ್ಬರಿ 41,920 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 4,958 (ಶೇ.11.8) ರಷ್ಟು ಹೆಚ್ಚಾಗಿದೆ. ಆದ​ರೆ, ಆರೋಗ್ಯ ಇಲಾಖೆಯು ಈ ಅವಧಿಯಲ್ಲಿ ಕೊರೋನಾದಿಂದ ಬಲಿಯಾಗಿರುವುದು 2,936 ಮಂದಿ ಮಾತ್ರ ಎಂದು ಹೇಳುತ್ತಿದೆ. ಈ ಆಘಾತಕಾರಿ ಅಂಕಿ-ಅಂಶಗಳು ರಾಜ್ಯ ಜನನ ಮತ್ತು ಮರಣ ನೋಂದಣಾಧಿಕಾರಿಗಳ ವರದಿಯಲ್ಲಿ ಬಹಿರಂಗಗೊಂಡಿದ್ದು ಎರಡೂ ವರ್ಷದ ಜನನ-ಮರಣ ಅಂಕಿ-ಅಂಶಗಳ ಸಂಪೂರ್ಣ ವರದಿ ‘ಕನ್ನಡಪ್ರಭಕ್ಕೆ’ ಲಭ್ಯವಾಗಿದೆ.

ನಿತ್ಯ 200 ಮಂದಿ ಸಾವು!

ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಬೆಂಗಳೂರಿನಲ್ಲಿ ನಿತ್ಯ 200 ಮಂದಿ ಬಲಿಯಾಗಿದ್ದಾರೆ. ಕೊರೋನಾ ಸೋಂಕು ತಾರಕಕ್ಕೇರಿದ ಆಗಸ್ಟ್‌ನಲ್ಲಂತೂ ಬರೋಬ್ಬರಿ 9,340 ಜೀವ ಕಳೆದುಕೊಂಡಿದ್ದು ನಿತ್ಯ 311 ಮಂದಿಯಂತೆ ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್‌ ತಿಂಗಳಲ್ಲಿ ನಿತ್ಯ 290 ಮಂದಿಯಂತೆ 8,710 ಮಂದಿ ಕೊನೆಯುಸಿರೆಳೆದಿದ್ದಾರೆ. ಇದು ಕಳೆದ ವರ್ಷದ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ಸಾವಿಗೆ ಹೋಲಿಸಿದರೆ ಬರೋಬ್ಬರಿ ದುಪ್ಪಟ್ಟು ಮಂದಿ ಸಾವನ್ನಪ್ಪಿದ್ದಾರೆ.

ಮಾಸ್ಕ್‌ ಧರಿಸದೆ ಓಡಾಡುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಅನ್‌ಲಾಕ್‌ ಬಳಿಕ 4 ತಿಂಗಳಲ್ಲೇ 29 ಸಾವಿರ ಬಲಿ:

ಲಾಕ್‌ಡೌನ್‌ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಂಕು ನಿಯಂತ್ರಣದಲ್ಲಿತ್ತು. ಲಾಕ್‌ಡೌನ್‌ ವಿನಾಯಿತಿ ದೊರೆತ ಬಳಿಕ ಜೂನ್‌ನಿಂದ ಸೆಪ್ಟೆಂಬರ್‌ ವೇಳೆಗೆ 4 ತಿಂಗಳಲ್ಲೇ 29,408 ಮಂದಿ ಜೀವ ಕಳೆದುಕೊಂಡಿದ್ದಾರೆ. ಲಾಕ್‌ಡೌನ್‌ ಜಾರಿಯಲ್ಲಿದ್ದ ಮೊದಲ ಮೂರು ತಿಂಗಳಲ್ಲಿ ಕೇವಲ 12 ಸಾವಿರ ಸಾವು ದಾಖಲಾಗಿದ್ದು, ಅನ್‌ಲಾಕ್‌ನ ನಾಲ್ಕು ತಿಂಗಳಲ್ಲಿ 29 ಸಾವಿರಕ್ಕೂ ಹೆಚ್ಚು ಸಾವು ಉಂಟಾಗಿದೆ. ಹೀಗಾಗಿ ಕೊರೋನಾ ಹಿನ್ನೆಲೆಯಲ್ಲಿಯೇ ಈ ಪ್ರಮಾಣದ ಸಾವು ದಾಖಲಾಗಿರುವ ಅನುಮಾನ ಮೂಡಿದ್ದು, ಕೊರೋನಾದಿಂದಲೇ ಮೃತಪಟ್ಟಅಧಿಕೃತ ಅಂಕಿ-ಅಂಶಗಳಲ್ಲಿ ಇಷ್ಟೂ ಏರಿಕೆಯನ್ನು ಆರೋಗ್ಯ ಇಲಾಖೆ ತೋರಿಸಿಲ್ಲ. ಹೀಗಾಗಿ ಕೊರೋನಾ ಸಾವುಗಳನ್ನು ದೃಢಪಡಿಸುವಲ್ಲಿಯೂ ಇಲಾಖೆ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಬೆಂಗಳೂರು ನಗರದ ಸಾವಿನ ವಿವರ ತಿಂಗಳು 2019 2020
ಮಾರ್ಚ್‌ 5,400 4,716
ಏಪ್ರಿಲ್‌ 4,806 3,327
ಮೇ 5,899 4,469
ಜೂನ್‌ 4,687 4,881
ಜುಲೈ 5,778 6,477
ಆಗಸ್ಟ್‌ 5,481 9,340
ಸೆಪ್ಟಂಬರ್‌ 5,411 8,710
ಒಟ್ಟು 36,962 41,920

ಕೊರೋನಾ ತಾರಕಕ್ಕೇರಿದ ತಿಂಗಳಲ್ಲಿನ ವ್ಯತ್ಯಾಸ

ತಿಂಗಳು 2019 2020 ಸಾವಿನ ಏರಿಕೆ
ಆಗಸ್ಟ್‌ 5,481 9,340 3859
ಸೆಪ್ಟಂಬರ್‌ 5,411 8,710 3299

ಕೊರೋನಾ ಸಾವಿನ ಲೆಕ್ಕದಲ್ಲೇ ಲೋಪ?

ಕೊರೋನಾ ಶುರುವಾದ ತಿಂಗಳಿನಿಂದ ಈವರೆಗೆ ಒಟ್ಟು 7 ತಿಂಗಳಲ್ಲಿ ಕಳೆದ ವರ್ಷಕ್ಕಿಂತ 4,956 ಹೆಚ್ಚು ಸಾವು ಸಂಭವಿಸಿದೆ. ಆದರೆ, ಈ ಅವಧಿಯಲ್ಲಿ ಆರೋಗ್ಯ ಇಲಾಖೆ ಪ್ರಕಾರ 2,936 ಮಾತ್ರ. ಹೀಗಾಗಿ ಕೊರೋನಾದಿಂದ ಮೃತಪಟ್ಟವರನ್ನೂ ಪರೀಕ್ಷೆ ಮಾಡಿ ಕೊರೋನಾ ಸಾವು ಎಂದು ದೃಢಪಡಿಸುವಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ವಿಫಲವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಉಳಿದಂತೆ ಸೋಂಕಿತ ಮನೆಯಲ್ಲಿ ಮೃತಪಟ್ಟರೆ ಪರೀಕ್ಷೆ ಮಾಡುತ್ತಿಲ್ಲ. ಕೊರೋನಾ ಸಾವು ಎಂದು ತಿಳಿದರೆ ಕುಟುಂಬ ಸದಸ್ಯರಿಗೆ ಉಂಟಾಗುವ ಹಿಂಸೆಗೆ ಹೆದರಿ ಬಹುತೇಕರು ಇಲಾಖೆ ಗಮನಕ್ಕೆ ತಾರದೆ ಸಹಜ ಸಾವು ಎಂದು ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಹೀಗೆ ವಿವಿಧ ಕಾರಣಗಳಿಂದ ಕೊರೋನಾ ಸಾವುಗಳು ಮರೆಮಾಚಲಾಗುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.
 

Follow Us:
Download App:
  • android
  • ios