ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ ಬಹುತೇಕ ನಿಶ್ಚಿತವಾಗಿದ್ದು, ಇಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ RTA ಸಭೆ ನಡೆಯಲಿದೆ. ಮೊದಲ 2 ಕಿ.ಮೀ.ಗೆ ₹30 ರಿಂದ ₹35ಕ್ಕೆ ಏರಿಕೆ ಸಾಧ್ಯತೆ ಇದೆ. ಆಟೋ ಚಾಲಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ.
ಮತ್ತೆ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ಒಂದಿದೆ. ಇನ್ಮುಂದೆ ಆಟೋದಲ್ಲಿ ಪ್ರಯಾಣಿಸಲು ಜೇಬು ಗಟ್ಟಿಯಾಗಿರಬೇಕು ಎಂಬುದು ಖಚಿತ, ಏಕೆಂದರೆ ಆಟೋ ದರ ಹೆಚ್ಚಳ ಇದೀಗ ಬಹುತೇಕ ನಿರ್ಧಾರವಾಗಿದೆ. ಆಟೋ ದರ ಏರಿಕೆಯ ಕುರಿತು ಇಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ RTA ಸಭೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಈ ಸಭೆಯಲ್ಲಿ ಬೆಂಗಳೂರು RTO ಗಳು, RTA ಅಧಿಕಾರಿಗಳು ಹಾಗೂ ಬೆಂಗಳೂರು ಟ್ರಾಫಿಕ್ ಡಿಸಿಪಿ ಸೇರಿ ಹಲವಾರು ಉನ್ನತಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಆಟೋ ಚಾಲಕರ ಸಂಘಟನೆಗಳು ಜೂನ್ 12 ರಂದು ರಸ್ತೆಗಿಳಿದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ, ಜಿಲ್ಲಾ ಆಡಳಿತ ತಕ್ಷಣವೇ ಕ್ರಮಕೈಗೊಂಡು ಸಭೆ ಕರೆದಿದೆ. ಈಗಾಗಲೇ ಹಲವಾರು ಸಲ ಸಭೆಗಳನ್ನು ನಡೆಸಿ ಅಂತಿಮಮಟ್ಟಕ್ಕೆ ತಲುಪಿದ ದರ ಏರಿಕೆಯ ಪ್ರಸ್ತಾಪದಲ್ಲಿ, ಪ್ರಸ್ತುತ ಮೊದಲ 2 ಕಿ.ಮೀ ಪ್ರಯಾಣದ ಮಿನಿಮಮ್ ದರವನ್ನು ₹30 ರಿಂದ ₹35 ಗೆ ಏರಿಸುವ ಸಲಹೆಯನ್ನು RTA ನೀಡಿದ್ದು, ದರ ಏರಿಕೆ ಬಹುತೇಕ ಖಚಿತವಾಗಿದೆ.
ಆಟೋ ಚಾಲಕರ ಲಾಭ-ನಷ್ಟಗಳನ್ನು, ಇಂಧನದ ಬೆಲೆ ಹಾಗೂ ಜೀವನೋಪಾಯದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆದರೆ, 2 ಕಿ.ಮೀ ನಂತರದ ಪ್ರತಿ ಕಿ.ಮೀ ಗೆ ಈಗಿರುವ ₹15 ದರದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು RTA ಸೂಚನೆ ನೀಡಿದೆ. ಇಂದಿನ ಸಭೆಯಲ್ಲಿ ಈ ದರಗಳನ್ನು ಅಂತಿಮಗೊಳಿಸುವ ಸಾಧ್ಯತೆ ತುಂಬಾ ಹೆಚ್ಚು.
