ರುದ್ರಪ್ಪ ಆಸಂಗಿ 

ವಿಜಯಪುರ(ಸೆ.18):ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು, ಪೊಲೀಸರು ಕೊರೋನಾ ವಾರಿಯರ್ಸ್‌ ಆಗಿ ಕಾರ್ಯೋನ್ಮುಖರಾಗಿದ್ದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಕೊರೋನಾ ವಿರುದ್ಧ ಸದ್ದಿಲ್ಲದೆ ಹೋರಾಡುತ್ತಿದ್ದಾನೆ.

ಮೂಲತಃ ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದ ಮುನ್ನೇಸಾ ಮನಗೂಳಿ ಎಂಬುವರು ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿ ಬಾಡಿಗೆ ಆಟೋ ಓಡಿಸಿಕೊಂಡು ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದಾರೆ. ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಿರುವ ಮುನ್ನೇಸಾ ಅವರು ಒಂದಿಲ್ಲೊಂದು ಸಾಮಾಜಿಕ ಕಾರ್ಯದಲ್ಲಿ ಆಟೋ ಚಾಲನೆ ಜೊತೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಿಎ ಪದವೀಧರರಾಗಿರುವ ಮುನ್ನೇಸಾ ಮನಗೂಳಿ ಅವರು ಸರ್ಕಾರಿ ನೌಕರಿ ಸಿಗದೆ ಬಾಡಿಗೆ ಆಟೋ ಓಡಿಸಿ ಬುದುಕು ಸಾಗಿಸುತ್ತಿದ್ದಾರೆ.

ಇಡೀ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವಿರುದ್ಧ ಜನ ಜಾಗೃತಿ ಜೊತೆಗೆ ಪ್ರಯಾಣಿಕರಿಗೆ ಉಚಿತ ಮಾಸ್ಕ್‌, ಸ್ಯಾನಿಟೈಸರ್‌ ಪೂರೈಸುವ ಮೂಲಕ ಕೊರೋನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯಪುರದಲ್ಲಿ ದಿನಂಪ್ರತಿ ಆಟೋ ಓಡಿಸುವ ಮುನ್ನೇಸಾ ಮನಗೂಳಿ ಅವರು ಸ್ವತಃ ತಾವು ಮಾಸ್ಕ್‌ ಹಾಕಿಕೊಂಡು ಆಗಾಗ ಆಟೋ ಹಾಗೂ ತಮ್ಮ ಕೈಗಳನ್ನು ಸ್ಯಾನಿಟೈಸರ್‌ ಮಾಡಿಕೊಳ್ಳುವ ಮೂಲಕ ಸುರಕ್ಷಿತವಾಗಿ ಆಟೋ ಓಡಿಸುತ್ತಿದ್ದಾರೆ.

ವಿಜಯಪುರ, ಕಲಬುರಗಿಯಲ್ಲಿ ಭೂ ಕಂಪನ : ಕುಸಿದ ಗೋಡೆಗಳು

ಮುನ್ನೇಸಾ ಅವರು ಮಾಸ್ಕ್‌ ಇಲ್ಲದೆ ಆಟೋ ಓಡಿಸುವುದಿಲ್ಲ. ಆಟೋದಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್‌ ಕಡ್ಡಾಯಗೊಳಿಸಿದ್ದಾರೆ. ಒಂದೊಮ್ಮೆ ಯಾವುದೇ ಪ್ರಯಾಣಿಕರು ಮಾಸ್ಕ್‌ ಇಲ್ಲದೆ ಆಟೋ ಪ್ರಯಾಣಿಸಿದರೆ ಅಂಥ ಪ್ರಯಾಣಿಕರಿಗೆ ಆಟೋದಿಂದ ಕೆಳಗಿಳಿಸುವುದಿಲ್ಲ. ಆಟೋದಲ್ಲಿಯೇ ಹಿಂಬದಿಯಲ್ಲಿ ಪ್ರಯಾಣಿಕರು ಕೂರುವ ಸ್ಥಳದಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ನ ವ್ಯವಸ್ಥೆ ಮಾಡಿದ್ದಾರೆ. ಸ್ಯಾನಿಟೈಸರ್‌ ಬಾಟಲಿಯನ್ನು ಆಟೋದಲ್ಲಿ ಇಡಲಾಗಿದೆ.

ಕೆಲ ಪ್ರಯಾಣಿಕರು ಒಂದೊಂದೆ ಮಾಸ್ಕ್‌ ತೆಗೆದುಕೊಳ್ಳುವ ಬದಲು ಮೂರ್ನಾಲ್ಕು ಮಾಸ್ಕ್‌ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಆಗ ಆಟೋ ಚಾಲಕ ಮುನ್ನೇಸಾ ಪ್ರಯಾಣಿಕರ ಜೊತೆಗೆ ಎಂದಿಗೂ ತಕರಾರು ಮಾಡುವುದಿಲ್ಲ. ಮಾಸ್ಕ್‌, ಸ್ಯಾನಿಟೈಸರ್‌ ಮುಗಿದರೆ ಮತ್ತೆ ಮಾರುಕಟ್ಟೆಯಲ್ಲಿ ತಾವು ದುಡಿದ ಹಣದಿಂದಲೇ ಖರೀದಿಸಿ ಮತ್ತೆ ಪ್ರಯಾಣಿಕರಿಗೆ ಉಚಿತವಾಗಿ ಮಾಸ್ಕ್‌ ಪೂರೈಸುತ್ತಾರೆ. ಗರ್ಭಿಣಿ, ಬಾಣಂತಿಯರು, ವಿಕಲಚೇತನ, ಸೈನಿಕರು, ಮಾಜಿ ಸೈನಿಕರಿಗೆ ಉಚಿತ ಆಟೋ ಸೇವೆ ಒದಗಿಸುತ್ತ ಸಾಮಾಜಿಕ ಕೆಲಸದಲ್ಲಿ ತಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ. ಈಗ ಕೊರೋನಾ ವಿರುದ್ಧ ಜನ ಜಾಗೃತಿಗೆ ತಮ್ಮ ಆಟೋ ಚಾಲನೆ ಜೊತೆಗೆ ಮಾಡುತ್ತಿದ್ದಾರೆ.

ಕೊರೋನಾ ತೊಲಗಿಸಲು ಸಾಮಾಜಿಕ ಅಂತರ ಬೇಕು. ಮಾಸ್ಕ್‌, ಸ್ಯಾನಿಟೈಸರ್‌ ಬಳಸಬೇಕು. ಆದರೆ ಬಹುತೇಕ ಪ್ರಯಾಣಿಕರು ಆಟೋದಲ್ಲಿ ಮಾಸ್ಕ್‌ ಧರಿಸದೇ ಸ್ಯಾನಿಟೈಸರ್‌ ಬಳಸದೆ ಸಾಮಾಜಿಕ ಅಂತರ ಮರೆತು ಓಡಾಡತೊಡಗಿದರು. ನಾನು ಸಾಕಷ್ಟು ಪ್ರಯಾಣಿಕರಿಗೆ ಮಾಸ್ಕ್‌ ಹಾಕಿಕೊಂಡು ಆಟೋ ಹತ್ತಬೇಕು ಎಂದು ಷರತ್ತು ವಿಧಿಸಿದೆ. ಇದರಿಂದಾಗಿ ಬಹುತೇಕ ಪ್ರಯಾಣಿಕರು ಬೇರೆ ಆಟೋದಲ್ಲಿ ಪ್ರಯಾಣಿಸತೊಡಗಿದರು. ನನ್ನ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿ ಆಟೋದಲ್ಲಿ ಉಚಿತ ಮಾಸ್ಕ್‌, ಸ್ಯಾನಿಟೈಸರ್‌ ಇಡಲು ಆರಂಭಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಬರಲು ಇಂದಿಗೂ ಇಬ್ಬರು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಆಟೋ ಚಾಲಕ ಜಂಬಗಿ (ಆ) ಮುನ್ನೇಸಾ ಮನಗೂಳಿ ಅವರು ತಿಳಿಸಿದ್ದಾರೆ.