Uttar Kannada: ಜೊಯಿಡಾದಲ್ಲಿ ಆಕರ್ಷಕ ಗೆಡ್ಡೆ, ಗೆಣಸು ಮೇಳ: 5 ಕೆ.ಜಿ.ಗಿಂತ ಅಧಿಕ ತೂಕ..!

ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಪಟ್ಟಣದಲ್ಲಿ ಆಯೋಜಿಸಲಾದ ಗೆಡ್ಡೆ ಗೆಣಸು ಮೇಳದಲ್ಲಿ 150ಮಿಕ್ಕಿ ಗೆಡ್ಢೆ-ಗೆಣಸುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಆದರೆ, ಇಷ್ಟೆಲ್ಲಾ ಗೆಡ್ಡೆ ಗೆಣಸುಗಳನ್ನು ಆಹಾರಕ್ಕೆ ಬಳಸಲಾಗುತ್ತದೇ ಎಂದು ಆಶ್ಚರ್ಯವಾಗುವುದಂತೂ ಸತ್ಯ..

Attractive tuber yam fair at Zoida Yam weighing more than 5 kg sat

ವರದಿ- ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್‌ ಸುವರ್ಣ ನ್ಯೂಸ್

ಉತ್ತರ ಕನ್ನಡ (ಜ.12): ಸಾಮಾನ್ಯವಾಗಿ ನಾವು ಉಳ್ಳಾಗಡ್ಡೆ, ಕೋಸುಗಡ್ಡೆ, ಆಲೂಗಡ್ಡೆ, ಗೆಣಸುಗೆಡ್ಡೆ, ಬೀಟ್ರೋಟ್ ಗಡ್ಡೆ, ಕೆಸವಿನಗೆಡ್ಡೆ ಅಂತಾ ಕೆಲವು ಗೆಡ್ಡೆಗಳನ್ನು ಆಹಾರದಲ್ಲಿ ಬಳಸುತ್ತೇವೆ. ಆದ್ರೆ, ನಿಜವಾಗಿಯೂ 150ಮಿಕ್ಕಿ ಗೆಡ್ಢೆ-ಗೆಣಸುಗಳಿವೆ, ಅವುಗಳನ್ನು ಆಹಾರಕ್ಕೆ ಬಳಸಲಾಗ್ತದೆ ಅಂತಾ ನಿಮ್ಗೆ ಮಾಹಿತಿ ಇದ್ಯಾ..? ಈ ಗೆಡ್ಡೆ-ಗೆಣಸುಗಳನ್ನು ನೋಡಬೇಕು, ಇವುಗಳ ಬಗ್ಗೆ ಮಾಹಿತಿ ಬೇಕಂದ್ರೆ ಉತ್ತರಕ‌ನ್ನಡ ಜಿಲ್ಲೆಯ ಜೊಯಿಡಾದಲ್ಲಿ ನಡೆಯುವ ಗೆಡ್ಡೆಗೆಣಸು ಮೇಳಕ್ಕೆ ಭೇಟಿ ನೀಡಲೇಬೇಕು. ಪ್ರತೀ ವರ್ಷದಂತೆ ಈ ಬಾರಿಯೂ ಜೊಯಿಡಾದಲ್ಲಿ ಗೆಡ್ಡೆಗೆಣಸು ಆಯೋಜಿಸಲಾಗಿದ್ದು, ಜೀವನದಲ್ಲಿ ಈವರೆಗೆ ನೋಡಿರದ ಗೆಡ್ಡೆಗಳು ಇಲ್ಲಿ ಮಾರಾಟಕ್ಕಿತ್ತು. ಅಷ್ಟಕ್ಕೂ ಆ ಗೆಡ್ಡೆ-ಗೆಣಸು ಜಾತ್ರೆ ಹೇಗಿತ್ತು ಅಂತೀರಾ..? ನೀವೇ ನೋಡಿ..

150 ಕ್ಕೂ ಅಧಿಕ ಬಗೆಯ ಗೆಡ್ಡೆ ಗೆಣಸು ಮಾರಾಟ: ಸಾಮಾನ್ಯವಾಗಿ ಗೆಡ್ಡೆ ಗೆಣಸುಗಳು ಅಂದಾಕ್ಷಣ ನಮ್ಮ ನೆನಪಿಗೆ ಹೆಚ್ಚೆಂದರೆ ಐದರಿಂದ ಹತ್ತು ಗೆಡ್ಡೆಗಳ ಹೆಸರು ನೆನಪಿಗೆ ಬರುತ್ತೆ. ಆದರೆ, ಕಾನನ ನಗರಿ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಪಟ್ಟಣದ ಕುಣಬಿ ಭವನಕ್ಕೆ ಬಂದಿದ್ದ ಗೆಡ್ಡೆಗಳನ್ನು ನೋಡಿದ್ರೆ ನಿಜವಾಗಿಯೂ ಇಷ್ಟೊಂದು ಗೆಡ್ಡೆ ಗೆಣಸುಗಳಿದೆಯೇ ?ಎಂದು‌ ನೀವು ಬೆರಳು ಮೂಗಿನ ಮೇಲೇರಿಸುವುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ನಾವೆಂದೂ ಕೇಳಿರದ ಕಂಡಿರದ ಗೆಡ್ಡೆ ಗೆಣಸುಗಳ ಸಂತೆಯೇ ಅಲ್ಲಿ ಬಂದು ಮೈಳೈಸಿತ್ತು.

 

Recipe: ಚಳಿಗಾಲದಲ್ಲಿ ಮಾಡಿ ಆರೋಗ್ಯಕದ ಸಿಹಿ ಗೆಣಸಿನ ಚಾಟ್

3 ರಿಂದ 5 ಕೆ.ಜಿ.ಗಿಂತ ಅಧಿಕ ತೂಗುವ ಗೆಡ್ಡೆಗಳ ರಾಶಿ: ಹೌದು, ಜೋಯಿಡಾದ ಗೆಡ್ಡೆ ಗೆಣಸು ಮೇಳ ಆಸಕ್ತರ ಕಿವಿ ನೆಟ್ಟಗಾಗಿಸುತ್ತವಲ್ಲದೇ, ನೂರಾರು ಜನರು ಇಲ್ಲಿಗೆ ಭೇಟಿ ನೀಡುವಂತೆ ಮಾಡುತ್ತದೆ. ಪ್ರತೀ ವರ್ಷ ಸಂಕ್ರಾಂತಿ ಮುನ್ನಾ ದಿನ ನಡೆಯುವ ಈ ಮೇಳದಲ್ಲಿ 3 ರಿಂದ 5 ಕೆ.ಜಿ.ಗಿಂತ ಅಧಿಕ ತೂಗುವ ಗೆಡ್ಡೆಗಳ ರಾಶಿಯೇ ಕಾಣೋದು ಹೆಚ್ಚು. ವಿಭಿನ್ನ ಗಾತ್ರ, ವಿಭಿನ್ನ ರುಚಿಯ ಔಷಧಿಯ ಗುಣವುಳ್ಳ ಗೆಡ್ಡೆಗಳ ಸಂಗ್ರಹವೇ ಈ ಮೇಳದಲ್ಲಿ ಕಾಣುತ್ತದೆ. ಅಲ್ಲದೇ, ಅವುಗಳಿಂದ ಮಾಡಲ್ಪಟ್ಟ ವಿವಿಧ ಬಗೆಯ ತಿಂಡಿ ತಿನಿಸುಗಳ ಸಂಗ್ರಹವೂ ಇಲ್ಲಿರುತ್ತವೆ. ಇಲ್ಲಿ ರೈತರಿಗೆ ಸ್ಪರ್ಧೆಗಳನ್ನು ಕೂಡಾ ಏರ್ಪಡಿಸಲಾಗುತ್ತಿದ್ದು, ಗೆಡ್ಡೆ ಪ್ರಬೇಧ ಮತ್ತು ಗಾತ್ರಕ್ಕೆ ಅನುಗುಣವಾಗಿ ಬಹುಮಾನ ಕೂಡಾ ನೀಡಲಾಗುತ್ತದೆ. 

ಎಂಟು ವರ್ಷದಿಂದ ಮೇಳ ಆಯೋಜನೆ: ಕಳೆದ ಎಂಟು ವರ್ಷಗಳಿಂದ ಈ ಮೇಳ ಆಯೋಜಿಸಲಾಗುತ್ತಿದ್ದು, ಪ್ರಸ್ತುತ, ಜೋಯ್ಡಾದ ಈ ಗೆಡ್ಡೆಗಳು ಹೊರ ರಾಜ್ಯದಲ್ಲೂ ಸಾಕಷ್ಟು ಖ್ಯಾತಿ ಪಡೆದುಕೊಂಡಿವೆ. ಕುಣಬಿ ಜನಾಂಗದ ಸಾಕಷ್ಟು ಜನರಿಂದ ಇಲ್ಲಿ ಗೆಡ್ಡೆ- ಗೆಣಸುಗಳ ಪ್ರದರ್ಶನ ನಡೆಯುತ್ತಿದ್ದು, ಇಂತಹ‌ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸಬೇಕು ಅಂತಾರೆ ಇಲ್ಲಿನ ಜನರು. 

ಕಾಡಿನ ಗೆಡ್ಡೆ, ಗೆಣಸು ಮಾರಾಟವೇ ಅಧಿಕ: ಅಂದಹಾಗೆ, ಈ ಮೇಳದ ವಿಶೇಷತೆಯಂದ್ರೆ ಕಾಡು ಮತ್ತು ಕಪ್ಪು ಮಣ್ಣಲ್ಲಿ ಬೆಳೆಯುವ ಗೆಡ್ಡೆಗಳ ಗುಚ್ಚವೇ ಇಲ್ಲಿ ರಾರಾಜಿಸುತ್ತಿತ್ತು. ಬಿಳಿ ಕೋನ್ ಗೆಡ್ಡೆ, ಕೆಂಪ್ ಕೋನ್ ಗೆಡ್ಡೆ, ಅಂಬೆಹಳದ್ ಗೆಡ್ಡೆ, ಸೂರನಗೆಡ್ಡೆ, ದವೆಗೆಡ್ಡೆ, ಕಚ್ಚಿಪುಗೆಡ್ಡೆ, ಕುಸುಗೆಡ್ಡೆ, ವೈಕನ್ಗೆಡ್ಡೆ, ಒಕಾಟೆ ಗೆಡ್ಡೆ, ಚಿರಗೆಗೆಡ್ಡೆ, ಗುಟ್ಟುಗೆಡ್ಡೆ, ಕಾಯಿಮಡಿಗೆಡ್ಡೆ, ಜಾಡ್ಕಣಗೆಡ್ಡೆ, ಗೆಣಸುಗೆಡ್ಡೆ, ಮುಡ್ಲಿಗೆಡ್ಡೆ, ತಂಬಡೆ ಗೆಡ್ಡೆ, ದುಕ್ಕನ್ ಗೆಡ್ಡೆ, ಕೆಂಪು ಗೆಣಸು, ಹಸಿರು ಗೆಣಸು, ಕಪ್ ಗೆಣಸು, ಚಿರಕಾಟೆ ಗೆಡ್ಡೆ ಮುಂತಾದವುಗಳು ಸೇರಿ ಸುಮಾರು 150ಕ್ಕೂ ಅಧಿಕ ಜಾತಿಯ ಗೆಡ್ಡೆಗಳನ್ನು ಈ ಮೇಳದಲ್ಲಿ ಕಾಣಬಹುದು. 

Geological Indication Tag: ಜೊಯಿಡಾದ ವಿಶಿಷ್ಟ ಗೆಡ್ಡೆ- ಗೆಣಸುಗಳು, ಕುಮಟಾದ ಮೇದಿನಿ ಅಕ್ಕಿಗೆ ಗರಿ

ಗೋವಾ, ಮಹಾರಾಷ್ಟ್ರದಿಂದ ಖರೀದಿಗೆ ಆಗಮನ: ವಿಶೇಷವಾಗಿ ಕುಣಬಿ ಜನಾಂಗದ ಮಹಿಳೆಯರೇ ಬೆಳೆಯುವ ಬಗೆ ಬಗೆಯ ಗೆಡ್ಡೆಗಳು ಭರ್ಜರಿ ಮಾರಾಟವಾಗಿದ್ದು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಜನರು ಬಂದು ಇಲ್ಲಿಂದ ಗೆಡ್ಡೆ-ಗೆಣಸು ಖರೀದಿಸುತ್ತಾರೆ. ಅಂದಹಾಗೆ, ಜೊಯಿಡಾದ ಗೆಡ್ಡೆ- ಗೆಣಸುಗಳು ವಿಶೇಷವಾಗಿದ್ದು, ಜಿಲ್ಲಾಡಳಿತದಿಂದ ಜಿಐ ಟ್ಯಾಗ್ ಪಡೆಯಲು ಕೂಡಾ ಅರ್ಜಿ ಸಲ್ಲಿಸಲಾಗಿದೆ.

ಸರ್ಕಾರದಿಂದ ಉತ್ತೇಜನ ಸಿಗಬೇಕು: ಜೊಯಿಡಾ ತಾಲೂಕಿನಲ್ಲಿ ಸಾವಿರಾರು ಕುಣಬಿ ಸಮುದಾಯ ಗೆಡ್ಡೆ-ಗೆಣಸುಗಳನ್ನೇ ಬೆಳೆದು ಜೀವನ ಸಾಗಿಸುತ್ತಿವೆ. ಪ್ರತೀ ವರ್ಷ ಮೇಳದ ಸಂದರ್ಭ ಮಾತ್ರ ಈ‌ ಗೆಡ್ಡೆ ಗೆಣಸುಗಳು ಭರ್ಜರಿ ಪ್ರದರ್ಶನ, ಮಾರಾಟ‌ ಕಾಣುತ್ತವೆ. ಆದರೆ, ಉಳಿದ ಸಮಯಗಳಲ್ಲಿ ಅವರ ಉತ್ಪನ್ನಗಳನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಈ ಕಾರಣದಿಂದ ಸರ್ಕಾರ ಗೆಡ್ಢೆ ಗೆಣಸುಗಳನ್ನು ಬೆಳೆಯುವ ರೈತ  ಸಮುದಾಯಕ್ಕೆ ಮತ್ತಷ್ಟು ಉತ್ತೇಜನ ನೀಡಿದ್ದಲ್ಲಿ ಈ ಸಾವಯವ ಗೆಡ್ಡೆ ಬೆಳೆಯುವ ಕುಣಬಿ ಜನಾಂಗದ ಬದುಕು ಹಸನಾಗುತ್ತದೆ.

Latest Videos
Follow Us:
Download App:
  • android
  • ios