ಆನಂದ್‌ ಎಂ. ಸೌದಿ

ಯಾದಗಿರಿ(ಡಿ.11):  ಕಳೆದ ತಿಂಗಳು (ನ.11)ರಂದು ಯಾದಗಿರಿಯ ಅಶೋಕನಗರ ತಾಂಡಾ ಸಮೀಪ ಮರಳು ಸಾಗಾಟದ ಟಿಪ್ಪರ್‌ ಹಾಗೂ ಕಾರು ಮಧ್ಯೆ ನಡೆದ ಅಪಘಾತ ಪ್ರಕರಣ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿನಿಮೀಯ ಶೈಲಿಯಲ್ಲಿ ಅಪಘಾತದ ಚಿತ್ರಣವನ್ನೇ ಬದಲಾಯಿಸುವ ಹುನ್ನಾರ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸ್ಥಳೀಯ ರಾಜಕೀಯ ಪ್ರಭಾವ ಬೀರಿ, ಪೊಲೀಸರ ಮೇಲೆ ಒತ್ತಡ ಹೇರುವ ಮೂಲಕ, ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್‌ ಅನ್ನೇ ಬದಲಾಯಿಸಿ, ಮತ್ತೊಂದು ಟಿಪ್ಪರ್‌ ಅನ್ನು ತಂದು ಠಾಣೆಯಲ್ಲಿ ನಿಲ್ಲಿಸುವ ಸಂಚು ಇದಾಗಿದೆ.

ಟಿಪ್ಪರ್‌ ಬದಲಾಯಿಸಲು ಷಡ್ಯಂತ್ರ:

ಮಹಾರಾಷ್ಟ್ರದ ಕಲ್ಯಾಣ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿರುವ, ಯಾದಗಿರಿ ಸಮೀಪದ ಮುದ್ನಾಳ್‌ ಗ್ರಾಮದ ಗುತ್ತಿಗೆದಾರನೊಬ್ಬ ಖರೀದಿಸಿದ್ದ ಎನ್ನಲಾದ ಮೂಲ ಟಿಪ್ಪರ್‌ಗೆ ನವೀಕೃತ ದಾಖಲೆಗಳೇ ಇರಲಿಲ್ಲ. ಹೀಗಾಗಿ, ಅದೇ ರಾಜ್ಯದ ನೋಂದಣಿ ಸಂಖ್ಯೆಯುಳ್ಳ, ಇನ್ಸೂರೆನ್ಸ್‌ ಸೇರಿದಂತೆ ಎಲ್ಲ ಸಮರ್ಪಕ ದಾಖಲೆಗಳನ್ನು ಹೊಂದಿರುವ ಮತ್ತೊಂದು ಟಿಪ್ಪರ್‌ ತಂದು ಠಾಣೆಯಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆದಿತ್ತು ಎನ್ನಲಾಗಿದೆ. ಮರಳು ಲಾರಿಯ ವ್ಯಕ್ತಿ ಜೊತೆ ಪೊಲೀಸ್‌ ಸಿಬ್ಬಂದಿಯೂ ಇದರಲ್ಲಿ ಶಾಮೀಲಾದ ಬಗ್ಗೆ ಖಾಕಿಪಡೆಯಲ್ಲೇ ಗುಸುಗುಸು ನಡೆದಿದೆ.

ಹಿರಿಯೂರು ಬಳಿ ಸಾರಿಗೆ ಬಸ್‌ ಪಲ್ಟಿ: ಇಬ್ಬರ ಸಾವು

ಅಪಘಾತದಲ್ಲಿ ಮೂವರು ಸಾವು:

ನ.11ರಂದು ಬೆಳಗಿನ ಜಾವ ಅಲ್ಲಿಪೂರ-ಅಶೋಕನಗರ ತಾಂಡಾ ರಸ್ತೆಯ ಬಳಿ ಟಿಪ್ಪರ್‌ ಹಾಗೂ ಕಾರು ಮಧ್ಯೆ ಭೀಕರ ಅಪಘಾತವಾಗಿತ್ತು. ತಿರುಪತಿಗೆ ತೆರಳಿ, ಯಾದಗಿರಿ ಮೂಲಕ ತಮ್ಮೂರಿಗೆ ವಾಪಸ್ಸಾಗುತ್ತಿದ್ದ ಲಾತೂರಿನ ಐವರು ಯುವಕರ ಪೈಕಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರೆ, ನಂತರ ಇನ್ನಿಬ್ಬರು ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ತಿರುಚುವ ಯತ್ನ:

ಈ ಪ್ರಕರಣವನ್ನು ತಿರುಚುವ ಯತ್ನ ನಡೆದಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಪಘಾತದ ನಂತರ, ಗ್ರಾಮೀಣ ಪೊಲೀಸ್‌ ಠಾಣೆಗೆ ಬೇರೆಯದ್ದೇ ಟಿಪ್ಪರ್‌ ತಂದು ನಿಲ್ಲಿಸುವ ಸಂಚು ನಡೆದಿತ್ತು. ಮೃತಪಟ್ಟಯುವಕರ ಕುಟುಂಬಗಳ ಸದಸ್ಯರು ಈ ಪ್ರಕರಣದ ಹಿನ್ನೆಲೆಯಲ್ಲಿ ಠಾಣೆಗೆ ಅಲೆದಾಡಿ ಹೈರಾಣಾಗಿದ್ದರಂತೆ.

ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ರಾಜಕೀಯ ಪ್ರಭಾವ ಬಳಸಿ, ಪದೇ ಪದೇ ಒತ್ತಡ ಹೇರುತ್ತಿದ್ದರು. ಪ್ರಕರಣ ತಿರುಚುವ ಬಗ್ಗೆ ಮಾತುಗಳೂ ಕೂಡ ನಡೆದಿದ್ದವು. ಇದಕ್ಕಾಗಿ ಇಲಾಖೆಯ ಕೆಲವರ ಜೊತೆ ಚರ್ಚೆಯೂ ನಡೆದಿತ್ತು ಎಂದು ’ಕನ್ನಡಪ್ರಭ’ಕ್ಕೆ ತಿಳಿಸಿದ ಹೆಸರೇಳಲಿಚ್ಛಿಸದ ಖಾಕಿ ಪಡೆಯ ಸಿಬ್ಬಂದಿಯೊಬ್ಬರು, ಈ ಪ್ರಕರಣದಲ್ಲಿ ರಾಜಕೀಯ ಒತ್ತಡ ಇಲಾಖೆ ಕೈಕಟ್ಟಿದಂತಾಗಿತ್ತು ಎಂದು ಹೇಳಿದ್ದಾರೆ.

ಅಪರಾಧ ಪ್ರಕರಣವೊಂದರಲ್ಲಿ ಇಡೀ ಚಿತ್ರಣವನ್ನೇ ಬದಲಾಯಿಸುವ ಕುರಿತು ಕೇಳಿಬರುತ್ತಿರುವ ಮಾತುಗಳು ಹಾಗೂ ಇದಕ್ಕೆ ಪುಷ್ಟಿನೀಡುವಂತೆ ಕಂಡುಬರುತ್ತಿರುವ ಘಟನೆಗಳ ಬಗ್ಗೆ ಎಸ್ಪಿ ಋುಷಿಕೇಶ್‌ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಇದನ್ನು ಪರಿಶೀಲಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.