ಬೆಂಗಳೂರು(ಸೆ.23): ರಾಜ್ಯ ಸರ್ಕಾರ ಬಿಬಿಎಂಪಿ ಪುನರ್‌ ರಚನೆ ಹಾಗೂ ಹೊಸ ಕಾಯ್ದೆ ರೂಪಿಸುವ ಹೆಸರಿನಲ್ಲಿ ಪಾಲಿಕೆ ಚುನಾವಣೆಯನ್ನು ಉದ್ದೇಶ ಪೂರ್ವಕವಾಗಿ ಮುಂದೂಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಮಾಜಿ ಸದಸ್ಯರು ಆರೋಪಿಸಿದ್ದಾರೆ.

ಪ್ರತಿ ಬಾರಿ ಬಿಬಿಎಂಪಿಯ ಚುನಾವಣೆ ಮುಂದೂಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. 2015ರಲ್ಲಿಯೂ ಸುಮಾರು ಐದು ತಿಂಗಳು ಚುನಾವಣೆಯನ್ನು ಮುಂದೂಡಲಾಗಿತ್ತು. ಮತ್ತೆ ಇದೀಗ ರಾಜ್ಯ ಸರ್ಕಾರ ಬಿಬಿಎಂಪಿಯ ವಾರ್ಡ್‌ ಸಂಖ್ಯೆಯಲ್ಲಿ 198ರಿಂದ 250ಕ್ಕೆ ಏರಿಕೆ ಮಾಡುವುದು ಹಾಗೂ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರೂಪಿಸುವ ಹೆಸರಿನಲ್ಲಿ ಮುಂದೂಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ದೂರಿದ್ದಾರೆ.

ಚುನಾ​ವಣೆ ಎದು​ರಿ​ಸುವ ಧೈರ್ಯ ಬಿಜೆ​ಪಿ​ಗಿ​ಲ್ಲ: ಸಿದ್ದ​ರಾ​ಮ​ಯ್ಯ

ರಾಜ್ಯ ಸರ್ಕಾರ ಬಿಬಿಎಂಪಿ ಪುರನ್‌ ರಚನೆ ಮತ್ತು ಹೊಸ ಕಾಯ್ದೆ ರಚನೆ ಮಾಡಬೇಕಾಗಿದ್ದರೆ ಮೊದಲೇ ತಯಾರಿ ಮಾಡಿಕೊಳ್ಳಬಹುದಾಗಿತ್ತು. ಆದರೆ, ಪಾಲಿಕೆ ಸದಸ್ಯರ ಅಧಿಕಾರ ಮುಕ್ತಾಯಗೊಳ್ಳುವವರೆ ಕಾಯುವ ಅವಶ್ಯಕತೆ ಇರಲಿಲ್ಲ ಎಂದರು. ಇನ್ನು ಬಿಬಿಎಂಪಿ ಚುನಾವಣೆ ಕುರಿತು ಚುನಾವಣಾ ಆಯೋಗ ಈಗಾಗಲೇ ಹೈಕೋರ್ಟ್‌ ಮೊರೆ ಹೋಗಿದೆ. ತಾವು ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದು, ಇದೇ (ಸೆ.23) ಬುಧವಾರ ವಿಚಾರಣೆಗೆ ಬರಲಿದೆ ಎಂದು ಅಬ್ದುಲ್‌ ವಾಜೀದ್‌ ಹೇಳಿದ್ದಾರೆ.