ಬೆಂಗಳೂರು :  ವಂಚನೆ ಪ್ರಕರಣವೊಂದರ ವಿಚಾರಣೆಗೆ ಕರೆದಿದ್ದ ವೇಳೆ ವಂಚಕ ಸಹೋದರಿಬ್ಬರು ಮಹಿಳಾ ಆಯೋಗದ ಕಚೇರಿಯಲ್ಲಿ ಮಹಿಳೆಯರಿಗೆ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೇಬಾಯಿ ಅವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ನಾಗರಬಾವಿ ನಿವಾಸಿಗಳಾದ ಸಹೋದರರಾದ ಪ್ರವೀಣ್‌(35), ಪ್ರಶಾಂತ್‌(34) ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಆರೋಪಿ ಸಹೋದರರು ತಾವು ನಾಸಾ ವಿಜ್ಞಾನಿಗಳು ಎಂದು ಸುಳ್ಳು ಹೇಳಿ ಸುಮಾರು 15ಕ್ಕಿಂತ ಹೆಚ್ಚು ಮಹಿಳೆಯರಿಂದ .13 ಲಕ್ಷ ಪಡೆದು ವಂಚಿಸಿದ್ದರು. ಈ ಸಂಬಂಧ ವಂಚನೆಗೊಳಗಾದ ಮಹಿಳೆಯರು ಮಹಿಳಾ ಆಯೋಗಕ್ಕೆ ಮೇ 9ರಂದು ದೂರು ನೀಡಿದ್ದರು. ಸಹೋದರರಿಗೆ ನೋಟಿಸ್‌ ಮೇ 10ರಂದು ಆಯೋಗದ ಕಚೇರಿಗೆ ಆಯೋಗದ ಅಧ್ಯಕ್ಷೆ ಕರೆದಿದ್ದರು. 

ಸಂಜೆ ಐದು ಗಂಟೆ ಸುಮಾರಿಗೆ ವಿಚಾರಣೆ ನಡೆಯುತ್ತಿದ್ದ ವೇಳೆ ಪ್ರವೀಣ್‌ ವಂಚನೆಗೊಳಗಾದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ, ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿದ್ದ. ಅಲ್ಲದೆ, ಮಹಿಳೆಯೊಬ್ಬರಿಗೆ ಪ್ರಾಣ ಬೆದರಿಕೆವೊಡ್ಡಿ ಹಲ್ಲೆ ನಡೆಸಲು ಮುಂದಾಗಿದ್ದ. ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಲು ಆಯೋಗದ ಕಚೇರಿ ಬಂದಿದ್ದವರ ಫೋಟೋ ತೆಗೆದು ಮಾಧ್ಯಮಗಳಲ್ಲಿ ಸುದ್ದಿ ಮಾಡಿ ಆಯೋಗದ ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.