ಬೆಂಗಳೂರು(ನ.05): ತೋಟಗಾರಿಕಾ ಸಂಶೋಧನಾ ಸಂಸ್ಥೆಯು ತನ್ನ ಸಂಶೋಧನೆ ಫಲದಿಂದ ಉತ್ಪಾದಿಸುತ್ತಿರುವ ಬಿತ್ತನೆ ಬೀಜಗಳನ್ನು ಎಟಿಎಂ ಮಾದರಿಯ ವೆಂಡಿಂಗ್‌ ಮಿಷನ್‌ಗಳ ಮೂಲಕ ಮಾರಾಟ ಮಾಡಲು ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಬೇಡಿಕೆ ಬಂದಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್‌.ದಿನೇಶ್‌ ಹೇಳಿದರು.

ಹೆಸರಘಟ್ಟದ ಭಾರತೀಯ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ತುಮಕೂರಿನ ಹಿರೇಹಳ್ಳಿಯಲ್ಲಿ 2ನೇ ಬೀಜ ಮಾರಾಟ ಯಂತ್ರವನ್ನು ಸ್ಥಾಪಿಸಿದ್ದು, 300 ಸುಧಾರಿತ ತಳಿಗಳ ಮತ್ತು ಹೈಬ್ರಿಡ್‌ ತಳಿಗಳನ್ನು ವಿವಿಧ ಹಣ್ಣು, ತರಕಾರಿ, ಪುಷ್ಪ ಮತ್ತು ಔಷಧೀಯ ಬೆಳೆಗಳಲ್ಲಿ ಅಭಿವೃದ್ಧಿ ಪಡಿಸಿರುವ ಗುಣಮಟ್ಟದ ಬೀಜಗಳಿಗೆ ಜಗತ್ತಿನಾದ್ಯಂತ ಉತ್ತಮ ಬೇಡಿಕೆಯಿದೆ. ಇದನ್ನು ಮನಗಂಡು (ಲ್ಯಾಬ್‌ ಟು ಲ್ಯಾಂಡ್‌) ಪ್ರಯೋಗಾಲಯದ ತಂತ್ರಜ್ಞಾನದಿಂದ ಸಿದ್ಧಪಡಿಸಿದ ಉತ್ತಮ ಗುಣಮಟ್ಟದ ಬೀಜಗಳನ್ನು ರೈತರು ಮತ್ತು ಜನಸಾಮಾನ್ಯರಿಗೆ ನೇರವಾಗಿ ಪೂರೈಸಲು ಎಟಿಎಂ ಮಾದರಿಯ ವೆಂಡಿಂಗ್‌ ಮಿಷನ್‌ಗಳನ್ನು ಸಿದ್ಧಪಡಿಸಲಾಗಿದೆ. ರಾಜ್ಯದ ತೋಟಗಾರಿಕಾ ಇಲಾಖೆ, ಹಾಪ್‌ಕಾಮ್ಸ್‌ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ನಿರಂತರ ಮಾತುಕತೆ ನಡೆಯುತ್ತಿದೆ ಎಂದರು.

ಕೃತಕ ಅಭಾವ ಸೃಷ್ಟಿಸುವ ಮಾಫಿಯಾ: 3.5 ಕೋಟಿ ಮೌಲ್ಯದ ಬಿತ್ತನೆ ಬೀಜ ವಶ

ಇಂತಹ ವೆಂಡಿಗ್‌ ಮಿಷನ್‌ಗಳಲ್ಲಿ 10 ಮತ್ತು 20 ಮೌಲ್ಯದ ಬೀಜಗಳನ್ನು ತುಂಬಲಾಗುತ್ತದೆ. ತಮಗೆ ಬೇಕಾದ ಬೀಜಗಳಿಗಾಗಿ ನೋಟುಗಳನ್ನು ಯಂತ್ರಗಳಿಗೆ ಹಾಕಿದರೆ ಬೀಜದ ಪ್ಯಾಕೇಟ್‌ಗಳು ಯಂತ್ರದಲ್ಲಿ ಅಳವಡಿಸಿರುವ ಪ್ಯಾಕೇಟ್‌ ಬಾಕ್ಸ್‌ ಬೀಳಲಿದೆ. ಲಾಲ್‌ ಬಾಗ್‌, ಬಸ್‌, ರೈಲು ಜನನಿಭಿಡ ಪ್ರದೇಶ, ಹಾಪ್‌ ಕಾಮ್ಸ್‌ ಮಳಿಗೆಗಳು, ತೋಟಗಾರಿಕಾ ಇಲಾಖೆಯ ಕಚೇರಿಗಳ ಆವರಣದಲ್ಲಿ ಇಂತಹ ಯಂತ್ರಗಳನ್ನು ಅಳವಡಿಸಲು ತೋಟಗಾರಿಕಾ ಸಂಸ್ಥೆ ಅತೀವ ಆಸಕ್ತಿವಸಿದೆ ಎಂದು ತಿಳಿಸಿದರು. ಬೀಜ ಮಾರಾಟ ಮಾಡುವ ವೆಂಡಿಂಗ್‌ ಮಿಷನ್‌ಗಳಿಗೆ ಕೇರಳ, ಪಾಂಡಿಚೆರಿ, ಒಡಿಶಾ ರಾಜ್ಯಗಳಿಂದ ಬೇಡಿಕೆ ಬಂದಿದೆ ಎಂದರು.