ಚಾಮರಾಜನಗರ. [ಡಿ.14]: ದೇವಾಲಯದಲ್ಲಿ ಪ್ರಸಾದ ಸ್ವೀಕರಿಸಿ 6 ಜನ ಮೃತಪಟ್ಟ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯಲ್ಲಿ ನಡೆದಿದೆ. 

ಇಲ್ಲಿನ ಕಿತ್ತಗುಚ್ಚಿ ಮಾರಮ್ಮ ದೇವಾಲಯದ ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ಇಂದು [ಶುಕ್ರವಾರ] ವೆಜಿಟೇಬಲ್ ಬಾತ್ ಮಾಡಲಾಗಿತ್ತು. ಈ ವೇಳೆ ಆಹಾರ ಸ್ವೀಕರಿಸಿದ 40ಕ್ಕೂ ಹೆಚ್ಚು ಮಂದಿ ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ. 

ಆ ಪೈಕಿ ಇದೀಗ ಬಂದ ವರದಿಯಂತೆ 6 ಜನರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಅಸ್ವಸ್ಥಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. 

ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಇಬ್ಬರು, ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಪಾಪಣ್ಣ (47), ಗೋಪಿಯಮ್ಮ (30), ಶಾಂತ (20) ಮೃತ ದುರ್ದೈವಿಗಳು ಎಂದು ತಿಳಿದುಬಂದಿದ್ದು, ಬಾಕಿ ಮೃತರ ಹೆಸರು ತಿಳಿದುಬಂದಿಲ್ಲ.

 ಅಷ್ಟೇ ಅಲ್ಲದೇ ಈ ಪ್ರಸಾದವನ್ನ ತಿಂದು ಸುಮಾರು ಹಲವಾರು ಕಾಗೆಗಳು ಮೃತಪಟ್ಟಿವೆ. ಸದ್ಯ ಕೊಳ್ಳೇಗಾಲ ಆಸ್ಪತ್ರೆಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾರೋ ಪ್ರಸಾದ ತಯಾರಿಕಾ ಪಾತ್ರೆಗೆ ವಿಷ ಮಿಶ್ರಣ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ.
 
ಎರಡು ಬಣಗಳ ಜಗಳದಿಂದ ಈ ದುರ್ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.