ಬೈಕ್ ನಲ್ಲಿ ತೆರಳುತ್ತಿದ್ದ ಜ್ಯೋತಿಷಿಯೊಬ್ಬರಿಗೆ ಸರಕು ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಆ.16]: ಹೆಸರುಘಟ್ಟಮುಖ್ಯರಸ್ತೆ ಬೆಸ್ಕಾಂ ಕಚೇರಿ ಬಳಿ ಸಂಭವಿಸಿದ ಅಪಘಾತದಲ್ಲಿ ಜ್ಯೋತಿಷಿಯೊಬ್ಬರು ಬಲಿಯಾಗಿದ್ದಾರೆ.

ಚಿಕ್ಕ ಬಾಣವಾರ ನಿವಾಸಿ ಸುರೇಶ್‌ (55) ಮೃತರು. ತುಮಕೂರು ರಸ್ತೆಯ 8ನೇ ಮೈಲಿ ಕಡೆಗೆ ಕಾರ್ಯಕ್ರಮ ನಿಮಿತ್ತ ಗುರುವಾರ ಬೆಳಗ್ಗೆ 7.45ರಲ್ಲಿ ಅವರು ತೆರಳುತ್ತಿದ್ದರು. 

ಆಗ ಮಾರ್ಗ ಮಧ್ಯೆ ಸುರೇಶ್‌ ಬೈಕ್‌ಗೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸರಕು ಸಾಗಾಣಿಕೆ ವಾಹನ ಡಿಕ್ಕಿಯಾಗಿದೆ. ಈ ವೇಳೆ ಕೆಳಗೆ ಬಿದ್ದ ಅವರ ಮೇಲೆ ವಾಹನದ ಚಕ್ರಗಳು ಹರಿದಿವೆ. ಇದರಿಂದ ಗಾಯಗೊಂಡು ಸುರೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಘಟನೆ ಬಳಿಕ ಪರಾರಿಯಾಗಿರುವ ಚಾಲಕನ ಪತ್ತೆಗೆ ತನಿಖೆ ನಡೆದಿದೆ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.