ಧಾರವಾಡ: ಕೆಐಎಡಿಬಿ ಹಗರಣ, ಸಿಐಡಿಯಿಂದ ಮೊದಲ ಬಂಧನ
ಕೆಐಎಡಿಬಿ ಸಹಾಯಕ ಅಧಿಕಾರಿ ಶಂಕರ ತಳವಾರ ಬಂಧನ, ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಕೋಟಿಗಟ್ಟಲೇ ಹಣ ಹೊಡೆದ ಪ್ರಕರಣ.
ಧಾರವಾಡ(ಮಾ.01): ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಭೂಸ್ವಾಧೀನದ ಕೋಟಿಗಟ್ಟಲೇ ಹಣವನ್ನು ನುಂಗಿ ಹಾಕಿದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಕೆಐಎಡಿಬಿ ಅಧಿಕಾರಿ ಹಿರಿಯ ಸಹಾಯಕ ಶಂಕರ ತಳವಾರ ಅವರನ್ನು ಮೂರು ದಿನದ ಹಿಂದೆ ಬಂಧಿಸಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ರೈತರ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ನುಂಗಿದ ಸರ್ಕಾರದ ಬೊಕ್ಕಸಕ್ಕೆ ನಷ್ಟಮಾಡಿದ ಈ ಪ್ರಕರಣದಲ್ಲಿ ಕೆಐಎಡಿಬಿ ಹಿರಿಯ ಸಹಾಯಕ ಅಧಿಕಾರಿ ಶಂಕರ ತಳವಾರ ಎಂಬಾತನನ್ನು ಬಂಧಿಸಲಾಗಿದೆ. ಬಂಧನದ ಬೆನ್ನಲ್ಲಿಯೇ ಶಂಕರ ಎದೆನೋವು ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಂಧಿಸಿದ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿದಾಗ ವೈದ್ಯರಿಗೆ ತನಗೆ ಎದೆನೋವು ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದ್ದು, ಆತನನ್ನು ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರಾ?: ಸಿದ್ದು ವಿರುದ್ಧ ಹರಿಹಾಯ್ದ ಸಿಎಂ ಬೊಮ್ಮಾಯಿ
ಏನಿದು ಪ್ರಕರಣ?
ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮಾರು 20ಕ್ಕೂ ಹೆಚ್ಚು ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಮಾಡಿ ಸುಮಾರು .25 ಕೋಟಿ ಲಪಟಾಯಿಸಿದ್ದರು. ಈ ಕುರಿತು 2021ರ ನ.17ರಂದು ಕನ್ನಡಪ್ರಭ ಪತ್ರಿಕೆಯು ‘ಒಂದೇ ಭೂಮಿಗೆ ಎರಡು ಬಾರಿ ಪರಿಹಾರ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನಕ್ಕೆ ಹಗರಣವನ್ನು ತಂದಿತ್ತು. ಬಳಿಕ ರೈತರು ಹೋರಾಟ ನಡೆಸಿದ್ದರು.
ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ತನಿಖೆಯ ಆರಂಭದಲ್ಲಿಯೇ 14 ಜನರ ಮೇಲೆ ಪ್ರಕರಣ ದಾಖಲು ಮಾಡಿ ಬರೀ ವಿಚಾರಣೆ ನಡೆಸಲಾಗಿತ್ತು. ಆದರೆ, ದಾಖಲೆಗಳ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಒಬ್ಬರನ್ನು ಅಧಿಕೃತವಾಗಿ ಬಂಧನ ಮಾಡಿರಲಿಲ್ಲ. ಇದೀಗ 14 ಜನ ಆರೋಪಿಗಳ ಪೈಕಿ ಪ್ರಮುಖ ಎನ್ನಲಾದ ಶಂಕರನನ್ನು ಮೂರು ದಿನಗಳ ಹಿಂದಷ್ಟೇ ಬಂಧಿಸಲಾಗಿದೆ.
ಹಲವು ದಿನಗಳಿಂದ ಧಾರವಾಡದಲ್ಲಿಯೇ ಬಿಡಾರ ಹೂಡಿರುವ ಸಿಐಡಿ ಅಧಿಕಾರಿಗಳ ತಂಡ ಕೆಐಎಡಿಬಿ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ, ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರ, ಗುತ್ತಿಗೆ ನೌಕರ ಹೇಮಚಂದ್ರ ಚಿಂತಾಮಣಿ ಹಾಗೂ ಹಲವು ರೈತರು ಮತ್ತು ಐಡಿಬಿಐ ಬ್ಯಾಂಕ್, ಕೆವಿಜಿ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿ 14 ಜನರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಘಟನೆ ನಡೆದ ಬಳಿಕ ಎಂ.ಕೆ. ಸಿಂಪಿ ಹಾಗೂ ಇತರರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಚ್ ಮೆಟ್ಟಿಲು ಸಹ ಏರಿದ್ದರು. ಅರ್ಜಿದಾರರಿಗೆ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ಅಲ್ಲದೆ, ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಇದನ್ನು ಮನ್ನಿಸಿದ್ದ ಹೈಕೋರ್ಚ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದ್ದಾರೆ. ಹೀಗಾಗಿ, ಇದೀಗ ಉಳಿದವರಿಗೂ ಬಂಧನದ ಭೀತಿ ಎದುರಾಗಿದೆ. ಈ ಪ್ರಕರಣವನ್ನು ಇಷ್ಟಕ್ಕೇ ಬಿಡಲು ರೈತರು ಕೂಡ ಸಿದ್ಧರಿಲ್ಲ. ಇದೀಗ ಒಂದು ವೇಳೆ ಸಿಐಡಿಯಿಂದ ಸರಿಯಾದ ತನಿಖೆ ಆಗದಿದ್ದರೆ ಕೋರ್ಚ್‌ಗೆ ಹೋಗಲು ಕೂಡ ಹೋರಾಟಗಾರರು ಹಾಗೂ ರೈತರು ನಿರ್ಧರಿಸಿದ್ದರು. ಅಷ್ಟರಲ್ಲಿ ಅಧಿಕಾರಿಗಳು ಮೊದಲ ಬಲಿ ಕೆಡವಿದ್ದು ಆತನಿಂದ ಮಾಹಿತಿ ತೆಗೆದು ಮುಂದಿನ ತನಿಖೆ ಯಾವ ರೀತಿ ಚುರುಕುಗೊಳಿಸುತ್ತಾರೆ ಕಾದು ನೋಡಬೇಕಿದೆ.