ರಾಯಚೂರು(ಸೆ.19): ಕೋವಿಡ್‌-19 ಮಹಾಮಾರಿಗೆ ಮೃತಪಟ್ಟ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ತಾಲೂಕಿನ ಪೋತಗಲ್‌ ಗ್ರಾಮದಲ್ಲಿ ಶುಕ್ರವಾರ ನೆರವೇರಿಸಲಾಗಿದೆ. 

ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ 10.30 ರ ಸುಮಾರಿಗೆ ಅಶೋಕ ಗಸ್ತಿ ಅವರು ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್‌ ಮೂಲಕ ನಗರಕ್ಕೆ ತರಲಾಗಿತ್ತು. ನಗರದ ಆರ್‌ಟಿಒ ವೃತ್ತದಲ್ಲಿ ಮತ್ತು ಐಡಿಎಸ್‌ಎಂಟಿ ಬಡಾವಣೆಯಲ್ಲಿರುವ ಅವರ ಮನೆ ಮುಂದೆ ಕೆಲ ಕ್ಷಣ ವಾಹನ ನಿಲ್ಲಿಸಿದ್ದರಿಂದ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ನಂತರ ನೇರವಾಗಿ ಅವರ ಪಾರ್ಥಿವ ಶರೀರವು ತಾಲೂಕಿನ ಪೋತಗಲ್‌ ಗ್ರಾಮದಲ್ಲಿ ಕಾಯ್ದಿರಿಸಿದ ಸ್ಥಳಕ್ಕೆ ತರಲಾಯಿತು. ರಾಷ್ಟ್ರಗೀತೆಯನ್ನು ಹಾಡಿ, ಎರಡು ನಿಮಿಷಗಳ ಕಾಲ ಮೌನಾಚರಣೆ ನೆರವೇರಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಬಳಿಕ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಕೋವಿಡ್‌ ನಿಯಮಗಳ ಪ್ರಕಾರ ಗಸ್ತಿ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು ಪಿಪಿಇ ಕಿಟ್‌ ಧರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರವನ್ನು ನೆರವೇರಿಸಿದರು.

ಕೊರೋನಾ, ಬಹು ಅಂಗಾಂಗ ವೈಫಲ್ಯ; ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನ

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಡಾ. ಶಿವರಾಜ ಪಾಟೀಲ್‌ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌, ಎಸ್ಪಿ ಪ್ರಕಾಶ ನಿಕ್ಕಂ, ಡಿಎಚ್‌ಒ ಡಾ.ರಾಮಕೃಷ್ಣ, ಸಹಾಯಕ ಆಯುಕ್ತ ಸಂತೋಷ್‌, ತಹಸೀಲ್ದಾರ್‌ ಡಾ.ಹಂಪಣ್ಣ, ಕುಟುಂಬದ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಆಪ್ತರು ಭಾಗವಹಿಸಿದ್ದರು.

ಸಂಸದ ಅಶೋಕ್‌ ಗಸ್ತಿ ನಿಧನಕ್ಕೆ ಸಂತಾಪ: ರಾಜ್ಯಸಭೆ ಮುಂದೂಡಿಕೆ

ಗುರುವಾರ ನಿಧನರಾದ ಕರ್ನಾಟಕದ ಹಾಲಿ ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ (55) ಮತ್ತು ಮಾಜಿ ರಾಜ್ಯಸಭಾ ಸದಸ್ಯೆ ಕಪಿಲಾ ವತ್ಸ್ಯಾಯನ (91)ಅವರಿಗೆ ಶುಕ್ರವಾರ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಮೌನ ಆಚರಿಸಿ, 30 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು. ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಗಸ್ತಿ ಮತ್ತು ವತ್ಸ್ಯಾಯನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ‘ಅಶೋಕ್‌ ಗಸ್ತಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಪ್ರಪ್ರಥಮ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಕಳೆದ ಜೂನ್‌ 26ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಅನಾರೋಗ್ಯ ಕಾರಣ ಸದಸದ ಕಲಾಪದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ’ ಎಂದು ಸ್ಮರಿಸಿದರು.