ಅಪ್ರತಿಮ ದೇಶಭಕ್ತ ಅಶ್ಫಾಖ್‌ ಉಲ್ಲಾ ಖಾನ್‌ ಅಶ್ಫಾಖ್‌ ಉಲ್ಲಾ ಖಾನ್‌ 122ನೇ ಜಯಂತಿಯಲ್ಲಿ ಸಿ.ವಿ. ಚಂದ್ರಶೇಖರ

ಕೊಪ್ಪಳ ಅ.23) : ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ದೇಶಪ್ರೇಮಿ ಅಶ್ಫಾಖ್‌ ಉಲ್ಲಾ ಖಾನ್‌. ಅವರು ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣದ ಹಂಗು ತೊರೆದು ಹೋರಾಡಿದ ಧೀರನಾಗಿ, ಹುತಾತ್ಮರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಅಶ್ಫಾಖ್‌ ಉಲ್ಲಾ ಖಾನ್‌ 122ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಮಹನಿಯರು ಆಸ್ತಿ, ಕುಟುಂಬ ಕಳೆದುಕೊಂಡು ಪ್ರಾಣ ನೀಡಿದ್ದಾರೆ. ಭಾರತಾಂಬೆಯ ಅಂಥ ಹೆಮ್ಮೆಯ ಪುತ್ರರ ವಿಚಾರಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Koppal Floods: ಮಳೆ ಹಾನಿ: ಡಿಸಿ ಸಂಚಾರ, ಪರಿಶೀಲನೆ

ನಾವೆಲ್ಲ ಈ ದೇಶದ ಒಂದೇ ತಾಯಿ ಮಕ್ಕಳು ಎಂದು ಭಾವಿಸಿ ಸೌಹಾರ್ದ-ಭಾವೈಕ್ಯದಿಂದ ಬದುಕೋಣ. ಅಶ್ಫಾಖ್‌ ಉಲ್ಲಾ ಖಾನ್‌ ಅವರ ಜಯಂತ್ಯೋತ್ಸವ ರಾಜ್ಯದಾದ್ಯಂತ ಆಚರಿಸುವಂತಾಗಲಿ ಎಂದು ಆಶಿಸಿದರು. ನಗರಸಭೆ ಸದಸ್ಯ ರಾಜಶೇಖರ ಆಡೂರ ಮಾತನಾಡಿ, ಅಶ್ಫಾಖ್‌ ಉಲ್ಲಾ ಖಾನ್‌ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚಿನಿಂದ ಹೋರಾಡಿ 27 ವಯಸ್ಸಿಗೆ ದೇಶಕ್ಕಾಗಿ ನೇಣಿಗೆ ಏರಿದರು. ನಾವೆಲ್ಲ ಅವರ ನೆನಪಿನಲ್ಲಿ ದೇಶಕ್ಕಾಗಿ ಒಗ್ಗಟ್ಟಾಗಿ ದುಡಿಯೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಯುಸೂಫಿಯಾ ಮಸ್ಜೀದ್‌ ಪೇಶ್‌ ಇಮಾಮ್‌ ಮುಫ್ತಿ ನಜೀರ ಅಹಮದ್‌ ಖಾದ್ರಿ ಮಾತನಾಡಿ, ದೇಶದಲ್ಲಿ ಇಂದು ನಾವೆಲ್ಲ ನೆಮ್ಮದಿಯಿಂದ ಸ್ವಾತಂತ್ರ್ಯದಿಂದ ಬದುಕುತ್ತಿದ್ದೇವೆ ಅಂದರೆ ಅದಕ್ಕೆ ಕಾರಣ ಅಶ್ಫಾಖ್‌ ಉಲ್ಲಾ ಖಾನ್‌ ಅವರಂಥ ಲಕ್ಷಾಂತರ ಮಹನೀಯರ ಬಲಿದಾನವೂ ಪ್ರಮುಖ ಪಾತ್ರವಹಿಸುತ್ತದೆ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಅಶ್ಫಾಖ್‌ ಉಲ್ಲಾ ಖಾನ್‌ ಬ್ರಿಟಿಷರ ಆಳ್ವಿಕೆಯ ಗುಲಾಮಿತನದಲ್ಲಿ ಶ್ರೀಮಂತಿಕೆಯ ಸುಖ ಬೇಡ ಎಂದು ದೇಶಕ್ಕಾಗಿ ಜೀವ ಕೊಟ್ಡ ದೇಶಪ್ರೇಮಿ ಎಂದರು.

ಅಂಜುಮನ್‌ ಕಮಿಟಿ ಅಧ್ಯಕ್ಷ ಚಿಕನ್‌ ಪೀರಾ, ಯುಸೂಫಿಯಾ ಮಸ್ಜೀದ್‌ ಕಮಿಟಿ ಅಧ್ಯಕ್ಷ ಯಜ್ದಾನಿ, ಮೆಹಬೂಬ ಅರಗಂಜಿ, ಬಾಷಾಸಾಬ ಖತೀಬ…, ಟಿಪ್ಪು ಸುಲ್ತಾನ್‌ ಕಮಿಟಿಯ ಜಿಲಾನ್‌ ಮೈಲೈಕ್‌, ನಾಸಿರ ಕಂಠಿ, ದೌಲತ್‌ ಅರಗಂಜಿ, ಮುಖಂಡ ಸೈ. ನಾಸಿರ್‌ ಹುಸೇನಿ, ಅಶ್ಫಾಖ್‌ ಉಲ್ಲಾ ಖಾನ್‌ ವೆಲ್ಫೇರ್‌ ಕಮಿಟಿ ಅಧ್ಯಕ್ಷ ಮಹಮ್ಮದ ಅಜರುದ್ದೀನ್‌, ಸಲಿಂ ಅಳವಂಡಿ, ಮಲ್ಲಪ್ಪ ಹಡಪದ ಇದ್ದರು.

ಕ್ಷತ್ರಿಯರೆಲ್ಲರೂ ಒಗ್ಗೂಡಿದರೆ ಶಕ್ತಿವೃದ್ಧಿ: ಬಾವಾಜಿ

ಮೆರವಣಿಗೆ:

ಬೆಳಗ್ಗೆ 9ಕ್ಕೆ ನಗರದ ನೂರಾನಿ ಮಸ್ಜೀದ್‌ ಸಿರಸಪ್ಪಯ್ಯ ಮಠದಿಂದ ಆರಂಭಗೊಂಡ ಮೆರವಣಿಗೆಯನ್ನು ಬಿಜೆಪಿ ಮುಖಂಡರಾದ ಅಮರೇಶ ಕರಡಿ, ಸಿ.ವಿ. ಚಂದ್ರಶೇಖರ ಹಾಗೂ ಸುರೇಶ ಭೂಮರಡ್ಡಿ ಜಂಟಿಯಾಗಿ ಚಾಲನೆ ನೀಡಿದರು. ಸಾವಿರಾರು ಯುವಕರು ಪಾಲ್ಗೊಂಡಿದ್ದರು. ಮೆರವಣಿಗೆ ಸಾಹಿತ್ಯ ಭವನ ತಲುಪಿದ ಆನಂತರ ವೇದಿಕೆ ಕಾರ್ಯಕ್ರಮ ಜರುಗಿತು.