ಬಂಗಾರಪ್ಪ ಫೌಂಡೇಶನ್‌ನಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ
ಕೋವಿಡ್ 19 ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರಿಗೆ ಬಂಗಾರಪ್ಪ ಫೌಂಡೇಶನ್ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸೊರಬ(ಮೇ.18): ಕೊರೋನಾ ಹರಡುವಿಕೆ ತಡೆಗಟ್ಟುವಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಮೊದಲ ಸಾಲಿನಲ್ಲಿದ್ದಾರೆ. ವಿಶ್ವ ತಾಯಂದಿರ ದಿನವನ್ನು ಮಾತೃ ಸ್ವರೂಪಿಗಳಾದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರಿಗೆ ಕೃತಜ್ಞತಾ ಮನೋಭಾವದಿಂದ ಅಭಿನಂದಿಸಲಾಗುತ್ತಿದೆ ಎಂದು ಜಿಪಂ ಸದಸ್ಯ ವೀರೇಶ್ ಕೊಟಗಿ ಹೇಳಿದರು.
ತಾಲೂಕಿನ ಆನವಟ್ಟಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಮಾರ್ಗದರ್ಶನದಲ್ಲಿ ಎಸ್. ಬಂಗಾರಪ್ಪ ಫೌಂಡೇಷನ್‌ನಿಂದ ಅಭಿನಂದಿಸಿ ಕೊಟಗಿ ಮಾತನಾಡಿದರು. ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಮಾತನಾಡಿ, ಕೊರೋನಾ ಮಹಾಮಾರಿಗೆ ಜಗತ್ತೇ ಮಂಕಾಗಿದೆ. ಜನ ಜೀವನ ಅಸ್ತವ್ಯಸ್ಥವಾಗಿದೆ. ಆದರೆ, ತಮ್ಮ ಜೀವದ ಹಂಗು ತೊರೆದು ಪೊಲೀಸರು, ಆರೋಗ್ಯ ಇಲಾಖೆಯವರು ಹಾಗೂ ಸ್ಥಳೀಯ ಆಡಳಿತ ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಮಾರಕ ಕೊರೋನಾ ಭೀತಿ: ಕ್ವಾರಂಟೈನ್ ಕೇಂದ್ರಗಳು ಅದೆಷ್ಟು ಸುರಕ್ಷಿತ..?
ತಾಪಂ ಸದಸ್ಯ ಅಂಜಲಿ ಸಂಜೀವ ಲಕ್ಕವಳ್ಳಿ ತಾಲೂಕಿನ ಎಲ್ಲ ಗ್ರಾಪಂನ ಟಾಸ್ಕ್‌ಫೋರ್ಸ್ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಹಿಂದೆಯೇ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಗಿತ್ತು. ಈಗ ತಿಂಗಳಿಂದ ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಇಲಾಖೆ ಹಾಗೂ ಪೌರ ಕಾರ್ಮಿಕ ಸಿಬ್ಬಂದಿಗೆ ಸೌಭಾಗ್ಯ ಸೂಚಕವಾದ ಅರಿಶಿನ-ಕುಂಕುಮ ಹೆಚ್ಚಿ, ಸೀರೆ, ಬಳೆ ಮತ್ತು ಛತ್ರಿ ನೀಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಡಿ.ಎಸ್. ಪ್ರಸನ್ನ ಕುಮಾರ್ ದೊಡ್ಮನೆ ಅವರು, ತಾಯಿಯನ್ನು ಪೂಜನೀಯ ಮನೋಭಾವದಿಂದ ನೋಡುವ ಸಂಸ್ಕೃತಿ ನಮ್ಮಲ್ಲಿದೆ. ವೈರಸ್ ವಿರುದ್ಧದ ಹೋರಾಟದಲ್ಲಿ ಯೋಧರಂತೆ ಜನರ ಜೀವ ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರು ಮಹಾತಾಯಿ ಎಂದರೆ ತಪ್ಪಾಗಲಾದರು ಎಂದು ಬಣ್ಣಿಸಿದರು.
ಎಪಿಎಂಸಿ ಸದಸ್ಯ ರಾಜೇಂದ್ರ ನಾಯ್ಕ್, ಗ್ರಾಪಂ ಅಧ್ಯಕ್ಷೆ ಕಲಾವತಿ, ಸದಸ್ಯ ಖಲಂದರ್ ಸಾಬ್, ದ್ರಾಕ್ಷಾಯಣಿ, ಪ್ರಮುಖರಾದ ಸಂಜೀವ ಲಕ್ಕವಳ್ಳಿ, ಎಸ್. ಬಂಗಾರಪ್ಪ ಅಭಿಮಾನಿ ಬಳದ ಜೆ.ಎಸ್. ನಾಗರಾಜ್ ಜೈನ್, ಸೈಯದ್ ಅನ್ಸರ್ ಇತರರಿದ್ದರು.