Asianet Suvarna News Asianet Suvarna News

ವಿಜಯಪುರ ಪಾಲಿಕೆ ಚುನಾವಣೆಗೆ ಓವೈಸಿ ಪಕ್ಷ ಎಂಟ್ರಿ!

ಮಹಾನಗರ ಪಾಲಿಕೆಗೆ ಚುನಾವಣಾ ವೇಳಾಪಟ್ಟಿ ಘೋಷಣೆ ಆಗುತ್ತಿದ್ದಂತೆಯೇ ವಿವಿಧ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜೊತೆಗೆ ಆಕಾಂಕ್ಷಿಗಳು ಕೂಡಾ ಈಗಾಗಲೇ ತಮಗೆ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.

Asaduddin Owaisi party entry for Vijayapura Corporation election gow
Author
First Published Oct 7, 2022, 11:31 PM IST

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್‌

ವಿಜಯಪುರ (ಅ.7) : ಮಹಾನಗರ ಪಾಲಿಕೆಗೆ ಚುನಾವಣಾ ವೇಳಾಪಟ್ಟಿ ಘೋಷಣೆ ಆಗುತ್ತಿದ್ದಂತೆಯೇ ವಿವಿಧ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜೊತೆಗೆ ಆಕಾಂಕ್ಷಿಗಳು ಕೂಡಾ ಈಗಾಗಲೇ ತಮಗೆ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಇವೆಲ್ಲವುಗಳ ನಡುವೆ MIM ಪಕ್ಷ ಕೂಡಾ ಈ ಚುನಾವಣಾ ಅಖಾಡಕ್ಕೆ ಧುಮುಕಲು ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಓವೈಸಿ ಪಕ್ಷ ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುವ ಮೂಲಕ ಮುಸ್ಲಿಂ ಮತಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸುತ್ತಿವೆ. ಸದ್ಯ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಮಾನಾಂತರ ಅವಕಾಶವಿದೆ. ಹೀಗಾಗಿ ಈ ಬಾರಿ ಮಹಾನಗರ ಪಾಲಿಕೆಯ ಅಧಿಕಾರದ  ಚುಕ್ಕಾಣಿ ಹಿಡಿಯಲು ಎರಡು ಪಕ್ಷಗಳು ತಮ್ಮದೇ ಆದ ರಣತಂತ್ರ ರೂಪಿಸುತ್ತಿವೆ. ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಮುಸ್ಲಿಂ ಪಕ್ಷಗಳ ನಡೆಗಳು ಪರಿಣಾಮ ಬೀರುವ ಸಾಧ್ಯತೆ ಇವೆ. ಈ ನಿಟ್ಟಿನಲ್ಲಿ ಈ ಪಕ್ಷಗಳನ್ನು ‘ಬಿಜೆಪಿ ಬಿ ಟೀಂ’ ಎಂದು ಬಿಂಬಿಸುವ ಪ್ರಯತ್ನ ನಡೆಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌‌ಗೆ ಬಿಸಿ ತುಪ್ಪವಾದ ಎಐಎಂಐಎಂ ಎಂಟ್ರಿ..! 
ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಮತಗಳ ವಿಭಜನೆಯ ಭಯ ಕಾಡುತ್ತಿದೆ. ಮುಸ್ಲಿಂ ಪಕ್ಷಗಳ ನಡೆಗಳು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸೇರಿದಂತೆ ಮುಸ್ಲಿಂ ಪಕ್ಷಗಳ ಬಲಗೊಳ್ಳುವಿಕೆ ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದೆ.

ಬೀದರ್, ಕಲಬುರ್ಗಿಯಲ್ಲು ಮುಸ್ಲಿಂ ಮತ ಸೆಳೆಯಲು ಯತ್ನ..!
ಈಗಾಗ್ಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ  ಅಂದರೆ ಬೀದರ್, ಕಲಬುರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಓವೈಸಿಯ ಎಐಎಂಐಎಂ ಪಕ್ಷ ಪ್ರಯತ್ನ ನಡೆಸುತ್ತಿದ್ದು, ಈಗಾಗಲೇ ಈ ಭಾಗದಲ್ಲಿ ಬೇರೂರಿದೆ. ಪರಿಣಾಮ, ಈಗ ಪಾಲಿಕೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಚದುರಿ ಹೋಗುವ ಆತಂಕ ಕಾಂಗ್ರೆಸ್ ಮುಖಂಡರಿಗೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಹೂಡಬೇಕಾದ ಪ್ರತಿತಂತ್ರದ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಮುಸ್ಲಿಂ‌ ಸಮುದಾಯಕ್ಕೆ ಮನವರಿಕೆಗೆ ತಯಾರಿ..!
ಇದರಿಂದ ರಾಜಕೀಯವಾಗಿ ಆಗುವ ಲಾಭ ನಷ್ಟಗಳ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂಬ ಸೂಚನೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ.ಪಾಟೀಲ್ ಅವರು ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

35ರ ಪೈಕಿ, 20 ವಾರ್ಡ್ ಗಳಲ್ಲಿ ಸ್ಪರ್ಧಿಸಲು ತಯಾರಿ..!
ಈಗಾಗಲೇ ಜಿಲ್ಲೆಯ ಕೋಲಾರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ತೆರೆದಿರುವ ಎಂ.ಐ.ಎಂ. ಈಗ ಪಾಲಿಕೆಯ ಅಖಾಡಕ್ಕೂ ಕಾಲಿಟ್ಟಿದೆ. ಸದ್ಯ 20ಕ್ಕೂ ಹೆಚ್ಚು ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ 15 ವಾರ್ಡ್ ಗಳಿಗೆ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲಬಹುದಾದಂತ ಅಥವಾ ಅತಿ ಹೆಚ್ಚು ಮುಸ್ಲಿಂ ಸಮುದಾಯದ ಮತಗಳಿರುವ ಕಡೆಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಪಾಲಿಕೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಆರ್ಭಟ..!
ವಿಜಯಪುರ ಮಹಾನಗರ ಪಾಲಿಕೆ ಮೇಲ್ದರ್ಜೆಗೇರಿಸಿದ ಮೇಲೆ ಮೊದಲ ಎಲೆಕ್ಷನ್ ನಡೆಯುತ್ತಿದ್ದು, ಅಧಿಕಾರ ಗದ್ದುಗೆ ಹಿಡಿಯಲು ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳ ಜೊತೆಗೆ ಪ್ರಾದೇಶಿಕ ಪಕ್ಷಗಳು ಅಖಾಡಕ್ಕೆ ಇಳಿಯಲು ಸಜ್ಜಾಗಿವೆ. ಜೆಡಿಎಸ್ , ಎಐಎಂಐಎಂ, ಆಮ್ ಆದ್ಮಿ ಪಕ್ಷ ಕೂಡಾ ಪಾಲಿಕೆ ಎಲೆಕ್ಷನ್ ಗೆ ಅಭ್ಯರ್ಥಿಗಳನ್ನು ಹಾಕಲು ಮುಂದಾಗಿದೆ. ಇದೀಗ ಎಐಎಂಐಎಂ ಪಕ್ಷದ ನಡೆ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳುತ್ತೆ ಎನ್ನಲಾಗುತ್ತಿದೆ. ಯಾಕಂದ್ರೆ ವಿಜಯಪುರದಲ್ಲಿ ಮುಸ್ಲಿಮ ವೋಟ್ ಹೆಚ್ಚಾಗಿವೆ. ಮುಸ್ಲಿಂ ವೋಟ್ ಬ್ಯಾಂಕ್ ಕಾಂಗ್ರೆಸ್ ಬುಟ್ಟಿಗೆ ಎಐಎಂಐಎಂ ಪಕ್ಷ ಕೈ ಹಾಕಿದ್ರೆ ಸಹಜವಾಗಿಯೇ ಬಿಜೆಪಿ ಪಕ್ಷಕ್ಕೆ ವರವಾಗಲಿದೆ.

ವಿಜಯಪುರ ಸ್ಮಾರ್ಟ್‌ಸಿಟಿಗೆ 1000 ಕೋಟಿ: ಸಚಿವ ಭೈರತಿ ಬಸವರಾಜ್‌

4 ವರ್ಷಗಳ ಬಳಿಕ ಪಾಲಿಕೆಗೆ ಚುನಾವಣೆ..!
ಕಳೆದ ನಾಲ್ಕು ವರ್ಷಗಳಿಂದ ವಿಜಯಪುರ ಮಹಾನಗರ ಪಾಲಿಕೆ ಎಲೆಕ್ಷನ್ ಆಗದೇ ಹೈಕೋರ್ಟ್ ಅಂಗಳದಲ್ಲಿ ಮೀಸಲಾತಿ, ವಾರ್ಡ್ ವಿಂಗಡಣೆ ವಿಚಾರದಿಂದ ನೆನೆಗುದಿಗೆಗೆ ಬಿದ್ದಿತ್ತು.ಇದೀಗ ಪಾಲಿಕೆ ಎಲೆಕ್ಷನ್ ಘೋಷಣೆ ಆಗಿದ್ದು, ಕಾಂಗ್ರೆಸ್ ಬಿಜೆಪಿ ಜೊತೆಗೆ ಜೆಡಿಎಸ್,ಆಮ್ ಆದ್ಮಿ ಪಕ್ಷ, ಎಐಎಂಐಎಂ ಪಕ್ಷ ಅಖಾಡಕ್ಕೆ ಸಜ್ಜಾಗ ತೊಡಗಿವೆ.

Follow Us:
Download App:
  • android
  • ios